ಭದ್ರಾವತಿ: ರೋಗ ನಿರೋಧಕ ಶಕ್ತಿ, ಕಬ್ಬಿಣ ಮತ್ತು ನಾರಿನ ಅಂಶ ಹೊಂದಿರುವ ಸಿರಿಧಾನ್ಯಗಳ ಸೇವನೆಯಿಂದ ಮನುಷ್ಯನ ಆರೋಗ್ಯ ಸುಧಾರಣೆ ಸಾಧ್ಯವಾಗಲಿದೆ ಎಂದು ಶಾಸಕ ಬಿ.ಕೆ.ಸಂಗಮೇಶ್ವರ್ ಹೇಳಿದರು.
ಅವರು ಗುರುವಾರ ನಗರದ ಬಿ.ಎಚ್.ರಸ್ತೆಯ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ, ಶ್ರೀ ಕ್ಷೇತ್ರ ಗ್ರಾಮಾಭಿವೃದ್ದಿ ಯೋಜನೆ, ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ, ಮಹಿಳಾ ಜಾನವಿಕಾಸ ಕೇಂದ್ರ ಮತ್ತು ಜಿಲ್ಲಾ ಜನಜಾಗೃತಿ ವೇದಿಕೆ ಸಹಕಾರದಿಂದ ಏರ್ಪಡಿಸಿದ್ದ ಸಿರಿ ಧಾನ್ಯಗಳ ಆಹಾರ ಮೇಳ ಪ್ರದರ್ಶನ ಮತ್ತು ಆಹಾರ ಮೇಳ ಮತ್ತು ಮಾರಾಟ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
ಹಿಂದಿನ ಋಷಿ ಮುನಿಗಳು ಸಿರಿಧಾನ್ಯಗಳ ಸೇವನೆಯಿಂದ 100 ರಿಂದ 150 ವರ್ಷಗಳ ಕಾಲ ಬದುಕಿ ಸಾಧಿಸುತ್ತಿದ್ದರು. ಆದರಿಂದೂ ಸಿರಿಧಾನ್ಯಗಳ ಸೇವನೆ ಮರೆಯಾಗಿ ಆ ಕುರಿತು ಒಲವು ಕಡಿತಗೊಂಡು ಇಂದಿನ ಯಾಂತ್ರಿಕತೆಯ ಕಲಬೆರಕೆ ಆಹಾರ ಪದ್ದತಿಯಿಂದ ಕೇವಲ 50 ವರ್ಷಗಳ ಬದುಕು ರೂಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಿರಿಧಾನ್ಯ ಗ್ರಾಮಾಭಿವೃದ್ದಿ ಸಂಸ್ಥೆಯು ನಗರದಲ್ಲೊಂದು ಖಾಯಂ ಸಿರಿಧಾನ್ಯ ಮಾರಾಟ ಕೇಂದ್ರ ತೆರೆಯುವುದರ ಮೂಲಕ ಅರಿವು ಮೂಡಿಸುವ ಕಾರ್ಯ ಮಾಡುವಂತೆ ಸಲಹೆ ನೀಡಿದರು.
ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಜಿ.ಆನಂದಕುಮಾರ್ ಮಾತನಾಡಿ ಯುವಕರು ಫಾಸ್‌ಟ್ಫುಡ್ ಸೇವೆನೆಗೆ ದಾಸರಾಗಿದ್ದಾರೆ. ಈ ಆಹಾರಗಳ ಸೇವನೆಯು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು ನಿಯಂತ್ರಿಸಲು ಸಿರಿಧಾನ್ಯಗಳ ಸೇವನೆ ಮಾಡುವಂತೆ ಸಲಹೆ ನೀಡಿದರು.
ವೇದಿಕೆಯ ಜಿಲ್ಲಾ ಸದಸ್ಯ ಆರ್.ಕರುಣಾಮೂರ್ತಿ ಮಾತನಾಡಿ ಫಾಸ್‌ಟ್ಪುಡ್‌ಗಳ ಸೇವೆನೆ ತೊರೆದು ಆರೋಗ್ಯದ ದೃಷ್ಟಿಯಿಂದ ರೈತರಿಂದ ಬೆಳೆದ ಧಾನ್ಯಗಳನ್ನು ಸೇವಿಸಿದರೆ ಆರೋಗ್ಯ ವೃದ್ದಿಸುವುದು, ಸಿರಿಧಾನ್ಯಗಳ ಸೇವನೆ ಮಾಡುವ ವ್ಯಕ್ತಿಗಳು ಸದೃಡ ಆರೋಗ್ಯ ಕಾಣಬಹುದಾಗಿದೆ. ಅಡ್ಡದಾರಿ ಹಿಡಿಯುತ್ತಿರುವ ಯುವ ಪೀಳಿಗೆ ಸದೃಢ ಆರೋಗ್ಯವಂತರಾದರೆ ದೇಶಾಭಿವೃದ್ದಿ ಆಗುವುದರಲ್ಲಿ ಅನುಮಾನವಿಲ್ಲ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಶಿವರಾಯ ಪ್ರಭು ವ್ಯಾಪಾರ ಮಳಿಗೆಗಳನ್ನು ಉದ್ಘಾಟಿಸಿ ಮಾತನಾಡಿ ಶ್ರೀ ಕ್ಷೇತ್ರದ ಧರ್ಮಧಿಕಾರಿ ಶ್ರೀ ವೀರೇಂದ್ರ ಹೆಗಡೆ ರವರ ಆಶಯದಂತೆ ರೈತರು ಬೆಳೆದ ಧಾನ್ಯಗಳಿಗೆ ಗರಿಷ್ಟ ಬೆಲೆ ನೀಡುವ ಉದ್ದೇಶದಿಂದ ಧಾರವಾಡದಲ್ಲಿ ದೊಡ್ಡ ಘಟಕವನ್ನು ಇಂದು ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಭಾಗಗಳಲ್ಲಿ ಸಿರಿಧಾನ್ಯಗಳ ಮಳಿಗೆಗಳನ್ನು ತೆರೆಯುವ ಉದ್ದೇಶ ಹೊತ್ತಿರುವುದಾಗಿ ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ನಗರದ ಡಾ.ವೀಣಾಭಟ್ ಮತ್ತು ಆಹಾರ ತಜ್ಞ ಈಶ್ವರನ್ ಪಿ.ತೀರ್ಥ ಉಪನ್ಯಾಸ ನೀಡಿದರು. ನಗರಸಭಾಧ್ಯಕ್ಷ ಎಸ್.ಹಾಲಮ್ಮ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮಹಿಳಾ ಸಾಂತ್ವಾನ ಕೇಂದ್ರದ ಶಾಂತಾ, ಧರ್ಮಪ್ರಸಾದ್, ಮಾರುಕಟ್ಟೆ ಅಧಿಕಾರಿ ರಾಮ್ ಕುಮಾರ್, ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಬಿ. ರವಿಕುಮಾರ್ ಮುಂತಾದವರು ಉಪಸ್ಥಿತರಿದ್ದರು. ಲತಾ ಮೋರೆ ಮತ್ತು ವಿಶಾಲಾಕ್ಷಿ ಪ್ರಾರ್ಥಿಸಿದರು, ಯೋಜನಾಧಿಕಾರಿ ಕೆ.ಪ್ರಸಾದ್ ಸ್ವಾಗತಿಸಿದರು. ಗಂಗಾ ಹಾಗು ಪ್ರಶಾಂತ್ ನಿರೂಪಿಸಿದರು.
ವರದಿ: ಆರ್.ವಿ. ಕೃಷ್ಣ, ಭದ್ರಾವತಿ
Discussion about this post