ಭದ್ರಾವತಿ: ಕನ್ನಡ ಭಾಷಾ ಬೆಳವಣಿಗೆಗೆ ನಮ್ಮನ್ನಾಳುವ ಸರಕಾರಗಳು ಮತ್ತು ನ್ಯಾಯಾಲಯಗಳು ತೊಡಕಾಗಿವೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಿ.ಮಂಜುನಾಥ್ ವಿಷಾಧಿಸಿದರು.
ಹಿರಿಯೂರು ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ 25 ನೇ ವರ್ಷದ ಬೆಳ್ಳಿ ಹಬ್ಬದ ಸಂಭ್ರಮದ ಅಂಗವಾಗಿ ಡಾ.ರಾಜ್ ಭಾವಚಿತ್ರ ಇರುವ ಕ್ಯಾಲೆಂಡರ್ ಹಾಗೂ ಕಾರ್ಯಕ್ರಮದ ಲಾಂಛನ ಬಿಡುಗಡೆಗೊಳಿಸಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸರಕಾರಗಳು ಕನ್ನಡ ಭಾಷೆಯನ್ನು ಅಭಿವೃದ್ದಿ ಪಡಿಸುವಲ್ಲಿ ವಿಫಲವಾಗಿವೆ. ಹಿಂದೆ ತ್ರಿಭಾಷಾ ಸೂತ್ರ ಜಾರಿಗೆ ತರಲು ವಿಫಲವಾದ ಸರಕಾರಗಳು ಮತ್ತು ಕಣ್ಣಿಗೆ ಬಟ್ಟೆ ಕಟ್ಟಿಕುಳಿತಿರುವ ನ್ಯಾಯಾಂಗಗಳು ಕನ್ನಡ ಭಾಷೆಗೆ ತೊಡಕಾಗಿ ನಿಂತು ಶಾಲೆಗಳಲ್ಲಿ ಆಡಳಿತ ಭಾಷೆ ಕನ್ನಡಕ್ಕೆ ವಿರುದ್ದವಾಗಿ ತೀರ್ಪು ನೀಡುತ್ತಿವೆ. ಮತ್ತೊಂದು ಕಡೆ ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಸಾವಿರಾರು ವರ್ಷಗಳ ಇತಿಹಾಸ ಹೊಂದಿದ್ದರು ಹಾಗು ಶಾಸ್ತಿಯ ಸ್ಥಾನ ಮಾನ ಧಕ್ಕಿದ್ದರು ಅದರ ಅಭಿವೃದ್ದಿಗೆ ಹಣ ಬಿಡುಗಡೆ ಮಾಡದೆ ತಾರತಮ್ಯ ತೋರುತ್ತಾ ನಿರ್ಲಕ್ಷಧೋರಣೆ ತಾಳಿವೆ. ಮಗದೊಂದೆಡೆ ಪ್ರಸ್ತುತ ಸಮಿಶ್ರ ರಾಜ್ಯ ಸರಕಾರ ಕನ್ನಡ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಜಾರಿಗೆ ತರುತ್ತಿರುವುದು ದುರಂತವಾಗಿದೆ ಎಂದರು.
ಡಾ.ರಾಜ್ ಅಭಿಮಾನಿಗಳ ಸಂಘ ನಾಡಿನೆಲ್ಲೆಡೆ ಸಮಾಜಕ್ಕೆ ಪೂರಕವಾದ ಕನ್ನಡ ಪರ ಕೆಲಸಗಳನ್ನು ಮಾಡುತ್ತಿದೆ. ಹಿರಿಯೂರು ಅಭಿಮಾನಿ ಸಂಘವು ಕಳೆದು 25 ವರ್ಷಗಳಿಂದ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬೆಳ್ಳಿ ಹಬ್ಬ ಆಚರಿಸಿಕೊಳ್ಳುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.
ಡಾ.ರಾಜ್ ಸಂಘದ ಅಧ್ಯಕ್ಷ ಪ್ರಸನ್ನಕುಮಾರ್ ಮಾತನಾಡಿ 1993 ರ ನ.1 ರಂದು ಸ್ಥಾಪನೆಗೊಂಡ ಅಭಿಮಾನಿ ಸಂಘವು ಕನ್ನಡ ಭಾಷಾ ಸಂಸ್ಕೃತಿಗೆ ಮತ್ತು ಅಭಿವೃದ್ದಿಗೆ ಶ್ರಮಿಸುತ್ತಾ ಬಂದಿದೆ. ಗ್ರಾಮದಲ್ಲಿ ಜನರಿಗಾಗಿ ಕುವೆಂಪು ಬಸ್ ತಂಗುದಾಣ, ಬೃಹತ್ ರಕ್ತದಾನ ಶಿಬಿರಗಳು, ಡಾ.ರಾಜ್ ಸಾಂಸ್ಕೃತಿಕ ಮೇಳ, ಗ್ರಾಮದ ಜನರಿಗೆ ಪುಣ್ಯ ಕ್ಷೇತ್ರಗಳ ದರ್ಶನ, ಜಿಲ್ಲಾ ಮಟ್ಟದಲ್ಲಿ ಅನೇಕ ಕ್ರೀಡಾಕೂಟಗಳು ಮುಂತಾದ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹೆಸರು ಮಾಡಿದೆ. ಪ್ರಸ್ತುತ ಬೆಳ್ಳಿ ಹಬ್ಬಾಚರಣೆಗೆ ಡಾ.ರಾಜ್ ಕುಟುಂಬ ಸದಸ್ಯರನ್ನು ಆಹ್ವಾನಿಸಲು ಹಂಬಲ ಹೊತ್ತಿರುವುದಾಗಿ ವಿವರಿಸಿದರು.
ಗೋಷ್ಠಿಯಲ್ಲಿ ಹಿರಿಯೂರು ಅಚಲ ಸದ್ಗುರು ಆಶ್ರಮದ ಲಕ್ಷ್ಮಣಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ತಾಲೂಕು ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ, ಕೋಡ್ಲುಯಜ್ಞಯ್ಯ ಮಾತನಾಡಿದರು. ಮುಖಂಡರಾದ ಕೃಷ್ಣಮೂರ್ತಿ, ಸತೀಶ್, ಸಾಹಿತಿ ಕಾಂತಪ್ಪ, ಕಲಾವಿದ ಭದ್ರಾವತಿ ಗುರು ಮುಂತಾದವರಿದ್ದರು. ಇದೇ ಸಂದರ್ಭದಲ್ಲಿ ಲಿಮ್ಕಾ ದಾಖಲೆ ಪ್ರಶಸ್ತಿ ವಿಜೇತ ಲಾಂಛನ ನಿರ್ಮಾತೃ ಕಲಾವಿದ ಭದ್ರಾವತಿ ಗುರು ರವರಿಗೆ ಸನ್ಮಾನಿಸಿದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post