ಸಿನಿಮಾ: ನಟಸಾರ್ವಭೌಮ
ನಿರ್ದೇಶನ: ಪವನ್ ಒಡೆಯರ್
ನಿರ್ಮಾಣ: ರಾಕ್’ಲೈನ್ ವೆಂಕಟೇಶ್
ತಾರಾಗಣ: ಪುನೀತ್ ರಾಜ್’ಕುಮಾರ್, ರಚಿತಾ ರಾಮ್, ಬಿ. ಸರೋಜಾದೇವಿ, ರವಿಶಂಕರ್, ಚಿಕ್ಕಣ್ಣ
ಸಂಗೀತ: ಡಿ. ಇಮ್ರಾನ್
ಕೆಲವು ಸಿನಿಮಾಗಳು ಮನಸ್ಸಿನಲ್ಲಿ ಉಳಿಯುತ್ತವೆ, ಕೆಲವು ನರಳಿಸುತ್ತವೆ. ಮತ್ತೆ ಕೆಲವು ನಾನೇನು ನೋಡಿದೆ ಎನ್ನುವ ಕನ್ಫ್ಯೂಷನ್ನಲ್ಲೇ ಜೀವನ ಕಳೆದು ಹೋಗುತ್ತದೆ! ನಟಸಾರ್ವಭೌಮ ಈ ಮೂರನೇ ವಿಭಾಗಕ್ಕೆ ಸೇರುತ್ತದೆ.
ಹುಚ್ಚು ಹಿಡಿಯುವಷ್ಟು ಇಷ್ಟವಾಗುವ ಪುನೀತ್ ರಾಜ್’ಕುಮಾರ್ ಡ್ಯಾನ್ಸ್, ಕಚಗುಳಿಯಿಡುವ ಹಾಸ್ಯ, ತಕ್ಕ ಮಟ್ಟಿಗೆ ಚಂದದ ಕಥೆ ಎಲ್ಲ ಇದ್ದರೂ ಸಿನಮಾ ಮನಸ್ಸಿನಲ್ಲಿ ಉಳಿಯುವುದಿಲ್ಲ. ಸಿನಿಮಾದಲ್ಲಿ ನಿರ್ದೇಶಕರು ಹಾಗೂ ನಿರ್ಮಾಪಕರು ಸಿನಿಮಾದ ಬಜೆಟ್ಟಿನಲ್ಲಿ ಸ್ವಲ್ಪ ಹೆಚ್ಚಿಗೆ ದುಡ್ಡನ್ನು ಗ್ರಾಫಿಕ್ಸ್’ಗೆ ಬಳಸಬೇಕಿತ್ತೇನೊ ಎನ್ನುವ ಭಾವನೆಯ ಜೊತೆಗೆ ಫೈಟ್ ಸೀಕ್ವೆನ್ಸಿಗೆ ಪೀಟರ್ ಹೆನ್ ಕರೆಸಿದದ್ದಾದರೂ ಯಾಕೆ ಎಂಬ ಪ್ರಶ್ನೆ ಮೂಡುವುದು ಸುಳ್ಳಲ್ಲ.
ಕ್ಲೆöÊಮ್ಯಾಕ್ಸಿನಲ್ಲಿ ಮುಖ್ಯ ಕಲಾವಿದರ ನಟನೆಯನ್ನು ಸಹ ಕಲಾವಿದರ ಹಾಸ್ಯಾಸ್ಪದ ನಟನೆ ದೃಶ್ಯ ಹೇಳ ಹೊರಟಿರುವ ಕಥೆಯ ಗಂಭೀರತೆಯನ್ನೇ ತಿಂದು ಥಿಯೇಟರ್‌ನಲ್ಲಿರುವ ಅರ್ಧ ಜನ ಹೊಹ್ಹೊಹ್ಹೊ ಎಂದು ನಗಲು ಪ್ರೇರೇಪಿಸುತ್ತದೆ.
ಸಿನಿಮಾದ ಸಂಗೀತ ಪದೇ ಪದೇ ಎಲ್ಲೋ ಕೇಳಿದ ಹಾಗನ್ನಿಸಿದರೂ ಚೆನ್ನಾಗಿದೆ. ರಚಿತಾ ರಾಮ್ ಅವರ ಪಾತ್ರ ಯಾಕೆ ಬಂತು ಅದರ ಉದ್ದೇಶ ಏನು ಎನ್ನುವುದು ನಿರ್ದೇಶಕರು ಪ್ರೇಕ್ಷಕರಿಂದ ಮುಚ್ಚಿಟ್ಟಿದ್ದಾರೆ.
ಚಿಕ್ಕಣ್ಣ ಹಾಗೂ ಪುನೀತ್ ಜೋಡಿ ಸಿನಿಮಾದ ಜೀವಾಳ. ರವಿಶಂಕರ್ ಪಾತ್ರ ಅವರ ಹಳೆಯ ಸಿನಿಮಾಗಳ ಮಿಶ್ರಣವಾದರೂ ಅವರ ನಟನೆ ಅವೆಲ್ಲವನ್ನೂ ಮೀರಿಸುತ್ತದೆ. ಹೆಸರಲ್ಲೇ ಕಥೆಯನ್ನಿಟ್ಟು ಸಿನಿಮಾ ಪೂರ್ತಿ ಕುತೂಹಲ ತುಂಬಲು ಪ್ರಯತ್ನಿಸಿರುವ ನಿರ್ದೇಶಕ ಪವನ್ ಒಡೆಯರ್ ಪ್ರಯತ್ನ ನಿಜವಾಗಿಯೂ ಪ್ರಶಂಸಾರ್ಹ. ಎಲ್ಲವನ್ನು ಮೀರಿ ಸಿನೆಮಾವನ್ನು ಪುನೀತ್ ಪ್ರೇಕ್ಷಕರು ಮಜವಾಗಿ ನೋಡಿ ಬರಲು ಅಡ್ಡಿಯಿಲ್ಲ.
ಒಟ್ಟಿನಲ್ಲಿ… ಸಿನಿಮಾ ಹೇಗಿದೆ? ಎಂದರೆ, ರುಚಿಯಾದ ಮುದ್ದೆ ಊಟಕ್ಕೆ ಸಿಝ್ವಾನ್ ಫ್ರೈಡ್ ರೈಸ್ ಕಲಸಿ ಅದರ ಮೇಲೊಂದು ಚರ‍್ರಿ ಹಣ್ಣಿಟ್ಟ ಹಾಗಿದೆ ಎಂದು ಪ್ರೇಕ್ಷಕನಾಗಿ ಸಿನೆಮಾ ನೋಡಿದ ತ್ರಿಶಂಕು ಸ್ಥಿತಿಯಲ್ಲಿ ಹೇಳಬಹುದು.
ಎಷ್ಟು ಅಂಕ: 3.5/5
-ಡಿಂಗ
Discussion about this post