ಭೋಪಾಲ್: ನಮಗೆ ನಮ್ಮ ಲಾಭಕ್ಕಿಂತಲೂ ನಮ್ಮ ದೇಶ ಮುಖ್ಯ. ಹೀಗಾಗಿ, ಪಾಕಿಸ್ಥಾನಕ್ಕೆ ಇನ್ನು ಮುಂದೆ ಟೊಮೆಟೋ ರಫ್ತು ಮಾಡುವುದಿಲ್ಲ ಎಂದು ಮಧ್ಯಪ್ರದೇಶ ರೈತರು ನಿರ್ಧಾರಕ್ಕೆ ಬಂದಿದ್ದಾರೆ.
ಕಳೆದ ಗುರುವಾರ ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಪಾಕ್ ಉಗ್ರರು ನಡೆಸಿದ ದಾಳಿಗೆ ಸಿಆರ್’ಪಿಎಫ್’ನ 42 ಯೋಧರು ವೀರಸ್ವರ್ಗ ಸೇರಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶದಾದ್ಯಂತ ಆಕ್ರೋಶ ಭುಗಿಲೆದ್ದಿದ್ದು, ಇದಕ್ಕೆ ಪೂರಕವಾಗಿ ಮಧ್ಯಪ್ರದೇಶ ರೈತರು ದೇಶಕ್ಕಾಗಿ ತಮ್ಮ ಲಾಭವನ್ನು ತ್ಯಾಗ ಮಾಡಿದ್ದಾರೆ.
ಮಧ್ಯ ಪ್ರದೇಶದ ಪಶ್ಚಿಮ ಭಾಗದ ಜಬುವಾ ಜಿಲ್ಲೆಯ ಪೆಟ್ಲವಾಡ್ ಗ್ರಾಮದಲ್ಲಿ ಸುಮಾರು 5 ಸಾವಿರ ರೈತರು ಟೊಮೆಟೊ ಬೆಳೆಯುತ್ತಿದ್ದು, ಇಲ್ಲಿಂದ ಪಾಕಿಸ್ಥಾನಕ್ಕೆ ರಫ್ತಾಗುತ್ತಿತ್ತು. ಆದರೆ, ಇದನ್ನು ನಿಲ್ಲಿಸಲು ರೈತರು ತೀರ್ಮಾನ ಮಾಡಿದ್ದಾರೆ.
ಈ ಕುರಿತಂತೆ ಇಂಗ್ಲಿಷ್ ಮಾಧ್ಯಮದೊಂದಿಗೆ ಮಾತನಾಡಿರುವ ಇಲ್ಲಿನ ಟೊಮೆಟೋ ಬೆಳೆಗಾಗ ಬಸಂತಿ ಲಾಲ್ ಪಾಟೀದಾರ್ ಎನ್ನುವವರು, ಕಳೆದ ಒಂದೂವರೆ ದಶಕದಿಂದ ನಾವು ಟೊಮೆಟೊ ಬೆಳೆಯುತ್ತಿದ್ದು ದೆಹಲಿಯ ಏಜೆಂಟರ್ ಮೂಲಕ ಪಾಕಿಸ್ತಾನಕ್ಕೆ ರಫ್ತು ಮಾಡುತ್ತಿದ್ದೆವು. ಚೆನ್ನಾಗಿ ಲಾಭ ಬರುತ್ತಿತ್ತು. ಆದರೆ ನಮ್ಮ ಸೈನಿಕರ ಮೇಲೆ ಪಾಕಿಸ್ಥಾನಿಯರು ಪದೇ ಪದೇ ದಾಳಿ ನಡೆಸುತ್ತಿರುವುದನ್ನು ಖಂಡಿಸಿ ಇನ್ನು ಮುಂದೆ ರಫ್ತು ಮಾಡದಿರಲು ನಿರ್ಧರಿಸಿದ್ದೇವೆ ಎಂದಿದ್ದಾರೆ..
ಮಾಧ್ಯಮದೊಂದಿಗೆ ಮಾತನಾಡಿರುವ ಇನ್ನೊಬ್ಬ ಬೆಳೆಗಾರ ಮಹೇಂದ್ರ, ನಾವು ಪಾಕಿಸ್ಥಾನಕ್ಕೆ ಟೊಮೆಟೊ ರಫ್ತು ಮಾಡಿ ಉತ್ತಮ ಹಣ ಸಂಪಾದಿಸುತ್ತೇವೆ. ಆದರೆ ಆ ಹಣ ನಮಗೆ ವಿಷದ ರೀತಿ ಕಾಡುತ್ತಿದೆ. ನಮ್ಮ ದೇಶದ ಟೊಮೆಟೊ ತಿಂದು ಹಿಂದಿನಿಂದ ಪಿತೂರಿ ನಡೆಸಿ ನಮ್ಮ ಜವಾನರ ಮೇಲೆ ದಾಳಿ ನಡೆಸುತ್ತಿದ್ದಾರೆ. ಇದನ್ನು ಖಂಡಿತಾ ಒಪ್ಪಲು ಸಾಧ್ಯವಿಲ್ಲ. ನಮಗೆ ಹಣಕ್ಕಿಂತ ಸೈನಿಕರ ಪ್ರಾಣ ಮುಖ್ಯ ಎನ್ನುತ್ತಾರೆ.







Discussion about this post