ಭದ್ರಾವತಿ: ಎನ್‌ಪಿಎಸ್ ಯೋಜನೆ ರದ್ದುಪಡಿಸಿ ಹಳೇಪಿಂಚಣಿ ಯೋಜನೆಯನ್ನು ಅನುಷ್ಟಾನಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ನೇತೃತ್ವದಲ್ಲಿ ವಿವಿಧ ಅಂಗಸಂಸ್ಥೆಗಳು ಮಿನಿ ವಿಧಾನಸೌಧ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರರ ಮೂಲಕ ರಾಜ್ಯ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ 6 ನೇ ವೇತನ ಆಯೋಗವು ನೂತನ ಪಿಂಚಣಿ ಯೋಜನೆಗೆ ಒಳಪಡುವ ಸಿಬ್ಬಂದಿಗಳಿಗೆ ಸಂಬಂಧಪಟ್ಟ ಮರಣ ಮತ್ತು ನಿವೃತ್ತಿ ಉಪದಾನ ಸೌಲಭ್ಯಗಳನ್ನು ವಿಸ್ತರಿಸಲು ಶಿಫಾರಸ್ಸು ಮಾಡಿರುವುದರ ಜೊತೆಗೆ ನೌಕರರು ಸೇವೆಯಲ್ಲಿದ್ದು ಮೃತರಾದ ಸಂದರ್ಭದಲ್ಲಿ ಅವರತ ಅವಲಂಭಿತರರಿಗೆ ಸಿಬ್ಬಂದಿಯ ಪಿಂಚಣಿ ನಿಧಿಯಲ್ಲಿ ಕ್ರೂಢಿಕೃತವಾದ ಮೊತ್ತವನ್ನು ಸರಕಾರವು ಹಿಂಪಡೆಯುವ ಷರತ್ತಿಗೊಳಪಟ್ಟು ಉಪದಾನದೊಂದಿಗೆ ಕುಟುಂಬ ಪಿಂಚಣಿಯನ್ನು ನೀಡಲು ಶಿಫಾರಸ್ಸು ಮಾಡಿದೆ. ಆಯೋಗದ ಈ ಶಿಫಾರಸ್ಸುಗಳನ್ನು ಪರಾಮರ್ಶಿಸಿದ್ದಲ್ಲಿ ನೂತನ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ ಹಳೇಪಿಂಚಣಿ ಯೋಜನೆ ಅನುಷ್ಠಾನಗೊಳಿಸುವಲ್ಲಿ ಮೂಲ ಉದ್ದೆಶ ಬಹುತೇಕ ಇದರಲ್ಲಿ ಅಡಕವಾಗಿರುವುದು ವೇದ್ಯವಾಗುತ್ತದೆ. ಅಲ್ಲದೆ ಕೇಂದ್ರ ಸರಕಾರವು ನೂತನ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವಲ್ಲಿ ಅಥವಾ ಕೈಬಿಡುವ ಪರಮಾಧಿಕಾರವನ್ನು ಆಯಾ ರಾಜ್ಯ ಸರಕಾರಗಳಿಗೆ ರಾಜ್ಯ ಸರಕಾರಗಳೆ ಬಿಟ್ಟ ವಿಷಯವಾಗಿರುವುದು ಗಮನಾರ್ಹ ವಿಚಾರವಾಗಿದೆ.
ಈ ಮೇಲಿನ ವಾಸ್ತವಾಂಶ ಪರಿಗಣಿಸಿ ಪ್ರಸ್ತುತ ಆಯೋಗವು ಮಾಡಿರುವ ಶಿಫಾರಸ್ಸುಗಳನ್ನು ಸಹ ಪರಿಗಣಿಸಿ ನೂತನ ಪಿಂಚಣಿ ಯೋಜನೆಯನ್ನು ರದ್ದು ಪಡಿಸಿ ಹಳೇ ಪಿಂಚಣಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಸಲುವಾಗಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಮಿತಿ ರಚಿಸುರುತ್ತದೆ. ಅಧಿಕಾರಿಗಳ ಸಮಿತಿ ಎನ್‌ಪಿಎಸ್ ಯೋಜನೆ ರದ್ದತಿ ಸಂಬಂಧ ಸಾಧಕ-ಬಾಧಕಗಳ ಕುರಿತು ಅಧ್ಯಯನ ನಡೆಸುತ್ತಿದೆ ಎಂದರು.
ಕೇಂದ್ರ ಸರಕಾರ ಈ ಯೋಜನೆಯ ಅನುಷ್ಠಾನ ಆಯಾ ರಾಜ್ಯ ಸರಕಾರಗಳ ವಿವೇಚನೆಗೆ ಬಿಟ್ಟ ವಿಷಯ ಎಂದು ಸ್ಪಷ್ಟಪಡಿಸಿರುತ್ತದೆ. ಕೇಂದ್ರ ಸರಕಾರದ ಈ ನಿಲುವನ್ನು ಆಧರಿಸಿ ಸರಕಾರ ರಚಿಸಿರುವ ಅಧಿಕಾರಿಗಳ ಸಮಿತಿಯಿಂದ ಆದಷ್ಟು ಶೀಘ್ರವಾಗಿ ವರದಿಯನ್ನು ಪಡೆದು ನೂತನ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ ಹಳೇ ಪಿಂಚಣಿ ಯೋಜನೆಯನ್ನು ಅನುಷ್ಠಾನಗೊಳಿಸಲು ಒತ್ತಾಯಿಸಿದರು.
ರಾಜ್ಯ ಸರಕಾರಿ ನೌಕರರ ಅಧ್ಯಕ್ಷ ಎನ್. ಕೃಷ್ಣಪ್ಪ ನೇತೃತ್ವ ವಹಿಸಿದ್ದರು. ನೌಕರರ ಸಂಘದ ಪದಾಧಿಕಾರಿಗಳಾದ ಎ.ಜೆ. ರಂಗನಾಥ ಪ್ರಸಾದ್, ಎ.ಕೆ. ಚಂದ್ರಪ್ಪ, ರಂಗಪ್ಪ, ಡಿ.ಎಸ್. ರಾಜಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಎಸ್. ಬಸವರಾಜ್ ಹಾಗೂ ಪದಾಧಿಕಾರಿಗಳು, ರಾಜ್ಯ ಪೌರ ಸೇವಾ ನೌಕರರ ನೌಕರರ ಸಂಘದ ಪದಾಧಿಕಾರಿಗಳಾದ ಹೇಮಂತ್ ಕುಮಾರ್, ಸತೀಶ್, ಎನ್. ಮಂಜುನಾಥ್, ದಾನಂ ಆರೋಗ್ಯ ಇಲಾಖೆಯ ಶ್ರೀಕಾಂತ್, ವಿಫುಲಾ, ಪ್ರಾಥಮಿಕ ಪತ್ತಿನ ಸಂಘವು ಸೇರಿದಂತೆ ಹಲವಾರು ಸಂಘಟನೆಗಳ ನೂರಾರು ನೌಕರರು ಪಿಂಚಣಿ ರದ್ದತಿಗೆ ಒತ್ತಾಯಿಸಿ ಬೆಂಬಲ ನೀಡಿ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಿದರು.
ನೌಕರರ ಸೇವೆ ಅಡ್ಡಿಪಡಿಸಿದವರ ಮೇಲೆ ಕ್ರಮಕ್ಕೆ ಒತ್ತಾಯ
ಶಿವಮೊಗ್ಗ ಪ್ರಾದೇಶಿಕ ಸಾರಿಗೆ (ಆರ್‌ಟಿಓ) ಕಚೇರಿಯಲ್ಲಿ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಸಾರಿಗೆ ಅಧಿಕಾರಿಗಳಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿ ಅವ್ಯಾಚ ಪದಗಳಿಂದ ನಿಂದಿಸಿ ಚಪ್ಪಲಿ ತೋರಿ ದಾಂದಲೆ ನಡೆಸಿ ಗೂಂಡಾಗಿರಿ ನಡೆಸಿದವರ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸರಕಾರಿ ನೌಕರರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಪ್ರತ್ಯೆಕ ಮನವಿ ಸಲ್ಲಿಸಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ಸರಕಾರಿ ನೌಕರರ ನೆಮ್ಮದಿಯ ವಾತಾವರಣದಲ್ಲಿ ಕರ್ತವ್ಯ ನಿರ್ವಹಿಸಲು ಬಿಗಿಯಾದ ಕಾನೂನು ಕ್ರಮ ಕೈಗೊಂಡು ಪ್ರಕರಣದ ಆರೋಪಿಗಳನ್ನು ಕೂಡಲೆ ಬಂಧಿಸುವಂತೆ ಆಗ್ರಹಿಸಿದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post