ಭದ್ರಾವತಿ: ಇಲ್ಲಿನ ಬಿಎಚ್ ರಸ್ತೆಯ ಕಡದಕಟ್ಟೆಯಲ್ಲಿರುವ ರೈಲ್ವೆ ಲೆವಲ್ ಕ್ರಾಸಿಂಗ್ ಸಮಸ್ಯೆ ಪರಿಹಾರಕ್ಕೆ ಮುಕ್ತಿ ದೊರೆಯುವ ಕಾಲ ಬಂದಿದ್ದು, ಮೇಲ್ಸೇತುವೆ ಕಾಮಗಾರಿಗೆ ಸದ್ಯದಲ್ಲೇ ಟೆಂಡರ್ ಕರೆದು, ಕಾಮಗಾರಿ ಆರಂಭಿಸಲು ಪ್ರಕ್ರಿಯೆಗಳು ಆರಂಭವಾಗಿವೆ.
ಈ ಕುರಿತಂತೆ ಕಲ್ಪ ನ್ಯೂಸ್’ಗೆ ಮಾಹಿತಿ ನೀಡಿರುವ ರೈಲ್ವೆ ಇಲಾಖೆ ಮೈಸೂರು ವಿಭಾಗೀಯ ಸಲಹಾ ಸಮಿತಿ ಸದಸ್ಯ ಎನ್. ವಿಶ್ವನಾಥ್, ಕಡದಕಟ್ಟೆ ಲೆವೆಲ್ ಕ್ರಾಸಿಂಗ್’ನಲ್ಲಿ ಅಂಡರ್ ಪಾಸ್ ಅಥವಾ ಮೇಲ್ಸೇತುವೆ ನಿರ್ಮಾಣ ಮಾಡಿ, ಇಲ್ಲಿ ಪ್ರತಿನಿತ್ಯ ಸಂಭವಿಸುವ ಟ್ರಾಫಿಕ್ ಕಿರಿಕಿರಿಗೆ ಮುಕ್ತಿ ಹಾಡಬೇಕು ಎಂಬ ಸ್ಥಳೀಯರ ಕನಸು ನನಸಾಗುವ ಹಂತಕ್ಕೆ ಬಂದಿದೆ.
ಮೈಸೂರು ವಿಭಾಗೀಯ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಕಡಕಕಟ್ಟೆ ಲೆವೆಲ್ ಕ್ರಾಸಿಂಗ್’ನಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಲು ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಸದ್ಯದಲ್ಲೇ ಟೆಂಡರ್ ಕರೆದು, ಶೀಘ್ರ ಕಾಮಗಾರಿ ಆರಂಭ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಕಾಮಗಾರಿ ಆರಂಭವಾದ ನಂತರ ಆದಷ್ಟು ಶೀಘ್ರ ಮುಕ್ತಾಯಗೊಳಿಸಲು ನಿಗಾ ವಹಿಸಬೇಕು ಎಂದು ಸೂಚಿಸಲಾಗಿದೆ ಎಂದಿದ್ದಾರೆ.
ನಿರ್ಮಲಾಪುರ ಬಳಿ ರೈಲ್ವೆ ಸೇತುವೆ?
ಭದ್ರಾವತಿ-ತರೀಕರೆ ನಡುವಿನ ಕಾಳಿಂಗನಾಳು ಹಾಗೂ ನಿರ್ಮಲಾಪುರ ಬಳಿ ರೈಲು ಮಾರ್ಗ ಸುಮಾರು 6-8 ಅಡಿ ಎತ್ತರದ ದಿಬ್ಬಗಳ ನಡುವೆ ಸಂಚರಿಸುತ್ತದೆ. ಈ ಪ್ರದೇಶದಲ್ಲಿ ಕೆಲವು ಕಾಡು ಪ್ರಾಣಿಗಳ ಹಾಗೂ ನಾಡು ಪ್ರಾಣಿಗಳ ಸಂಚಾರ ಇದ್ದು, ಈಗಾಗಲೇ ಹಲವು ಪ್ರಾಣಿಗಳು ರೈಲಿಗೆ ಸಿಲುಕಿ ಪ್ರಾಣಕಳೆದುಕೊಂಡಿವೆ. ಹೀಗಾಗಿ ಈ ಸ್ಥಳದಲ್ಲಿ ರೈಲ್ವೆ ಸೇತುವೆ ನಿರ್ಮಾಣವಾಗಬೇಕು ಎಂಬ ವಿಚಾರವನ್ನು ಪ್ರಸ್ತಾಪ ಮಾಡಲಾಗಿದ್ದು, ಶೀಘ್ರ ಒಪ್ಪಿಗೆ ದೊರೆಯುವ ಸಾಧ್ಯತೆಯಿದೆ.
ಇನ್ನು, ಭದ್ರಾವತಿ ರೈಲು ನಿಲ್ದಾಣದಲ್ಲಿ ಅಂಗವಿಕಲರು ಹಾಗೂ ಹಿರಿಯ ನಾಗರಿಕರಿಗೆ ಪ್ಲಾಟ್’ಫಾರಂ ದಾಟಲು ಸಹಕಾರಿಯಾಗುವಂತೆ ರ‍್ಯಾಂಪ್ ಅಳವಡಿಕೆಗೆ ಅನುಮತಿ ದೊರೆತಿದ್ದು ಇದೂ ಸಹ ಶೀಘ್ರ ಆಗಲಿದೆ ಎಂದು ವರದಿಯಾಗಿದೆ.
ಮೈಸೂರು ವಿಭಾಗೀಯ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಹಾಗೂ ಜಿಲ್ಲೆಗೆ ಸಂಬಂಧಿಸಿದಂತೆ ರೈಲ್ವೆ ಇಲಾಖೆಯ ಯೋಜನೆಗಳ ಅನುಮತಿ ಹಾಗೂ ಜಾರಿಗೆ ಹಿರಿಯ ಅಧಿಕಾರಿಗಳಾದ ಬಿ.ಎಸ್ ಮಂಜುನಾಥ್, ಡಿಆರ್’ಎಂ ಅಪರ್ಣಾ ಗರಗ್ ಅವರ ಮುತುವರ್ಜಿ ಶ್ಲಾಘನೀಯವಾಗಿದೆ.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post