ಸೊರಬ: ಭಾರತೀಯ ಪಾರಂಪರಿಕ ಮೌಲ್ಯ, ಸಾಹಿತ್ಯ, ಸಂಸ್ಕೃತಿಯನ್ನು ಎತ್ತಿಹಿಡಿಯುವ ಮೂಲಕ ಎಲ್ಲ ಸ್ತರದ ಜನರನ್ನು ಸಮಾಜಮುಖಿಯನ್ನಾಗಿಸುವ ಗುರಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಮತ್ತು ಕರ್ನಾಟಕ ಜನಪದ ಪರಿಷತ್ತಿನದು ಎಂದು ತಾಲೂಕು ಕಸಾಸಾಂವೇ ಗೌರವಾಧ್ಯಕ್ಷ ಶಿವಾನಂದ ಪಾಣಿ ಹೇಳಿದರು.
ತಾಲೂಕು ಯಲಸಿ ಗ್ರಾಮದ ದೇವನಗರಿಯಲ್ಲಿ ಗ್ರಾಮ ಸಮಿತಿ, ದೇಗುಲ ಸಮಿತಿ, ಗ್ರಾಮಸ್ಥರು ಹಾಗೂ ಕಸಾಸಾಂವೇ, ಕಜಾಪ ಇವರುಗಳು ಹಮ್ಮಿಕೊಂಡ ಶಿವರಾತ್ರಿ ಜಾಗರಣೆ ಉದ್ಧೇಶಿಸಿ ಮಾತನಾಡಿದರು.
ಊರಿಂದೂರಿಗೆ ಜನಪದ ನಡಿಗೆ ಶೀರ್ಷಿಕೆಯಡಿಯಲ್ಲಿ ಇಂತಹ ಅನೇಕ ಕಾರ್ಯಕ್ರಮಗಳನ್ನು ತಾಲೂಕು ವ್ಯಾಪ್ತಿಯಲ್ಲಿ ವೇದಿಕೆ ಮತ್ತು ಪರಿಷತ್ ಜಂಟಿಯಾಗಿ ಹಮ್ಮಿಕೊಂಡಿದ್ದು, ವಿಫುಲ, ಅವ್ಯಕ್ತ ಕಲಾವಿದರನ್ನು ಊರಿಂದೂರಿಗೆ ಒಯ್ಯುವ ಮೂಲಕ ಸಾಂಸ್ಕೃತಿಕ ಸಾಮರಸ್ಯವನ್ನು ಮೂಡಿಸಲಾಗುತ್ತಿದೆ. ಪ್ರಸ್ತುತ ಗ್ರಾಮಾಂತರ ಪ್ರದೇಶದಲ್ಲಿ ನೈಜ ಸಂಸ್ಕೃತಿಗಳು ಅವ್ಯಕ್ತವಾಗಿದ್ದು, ಪ್ರಚುರಪಡಿಸುವ, ಬೆಳಕಿಗೆ ತರುವ ಕೆಲಸಗಳಾಗಬೇಕಿದೆ ಎಂದರು.
ಶಿವರಾತ್ರಿ ಹಬ್ಬ ಹಾಗೂ ಹಬ್ಬ ಹರಿದಿನ ಆಚರಣೆಗಳ ಔಚಿತ್ಯತೆ ಹಿನ್ನೆಲೆ ಕುರಿತಂತೆ ಕಜಾಪ ಅಧ್ಯಕ್ಷ ಶ್ರೀಪಾದ ಬಿಚ್ಚುಗತ್ತಿ ಮಾತನಾಡಿದರು.
ಕಸಾಸಾಂವೇ ಅಧ್ಯಕ್ಷ ಷಣ್ಮುಖಾಚಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾಮಾಧ್ಯಕ್ಷ ಟಿ. ಚಂದ್ರಪ್ಪ, ದೇಗುಲ ಸಮಿತಿಯ ಅಧ್ಯಕ್ಷ ಎಲ್. ಕುಮಾರಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರು.
ಯಲಸಿ ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿಯ ಇಂದೂಮತಿ ಎನ್ ರಾವ್ ತಂಡದವರು ಅಹೋರಾತ್ರಿ ಭಜನೆ ನಡೆಸಿಕೊಟ್ಟರು. ವೈ.ಕೆ. ನಾಗೇಶ್ ಭಟ್, ಪಾಂಡುರಂಗ ಭಟ್ ಇವರು ಬನವಾಸಿ ಪುರೋಹಿತ್ ಗಣಪತಿಭಟ್ ಮಾರ್ಗದರ್ಶನದಲ್ಲಿ ಧಾರ್ಮಿಕ ಆಚರಣೆ ನೆರವೇರಿಸಿದರು.
ಯಲಸಿ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಗ್ರಾಮಸ್ಥರು ಇದ್ದರು. ಕಸಾಸಾಂವೇ ಪ್ರಧಾನ ಕಾರ್ಯದರ್ಶಿ ಮಂಜಪ್ಪ ಹುಲ್ತಿಕೊಪ್ಪ ಕಾರ್ಯಕ್ರಮ ನಿರ್ವಹಿಸಿದರು.
(ವರದಿ: ಮಧುರಾಮ್, ಸೊರಬ)
Discussion about this post