ಉಡುಪಿ: ಶ್ರೀ ಕೃಷ್ಣ ಮಠದ ಪರ್ಯಾಯ ಪಲಿಮಾರು ಮಠದ ಶ್ರೀಶ್ರೀವಿದ್ಯಾಧೀಶ ತೀರ್ಥ ಶ್ರೀಪಾದಂಗಳವರು ತಮ್ಮ ಉತ್ತರಾಧಿಕಾರಿಗಳನ್ನಾಗಿ ಶೈಲೇಶ್ ಉಪಾಧ್ಯಾಯ ಎಂಬ ವಟುವನ್ನು ಆಯ್ಕೆ ಮಾಡಿದ್ದು, ಇವರ ಸನ್ಯಾಸ ಸ್ವೀಕಾರ ಹಾಗೂ ಪೀಠಾರೋಹಣ ಕಾರ್ಯಕ್ರಮ ಮೇ 9ರಿಂದ 12ರವರೆಗೂ ನಡೆಯಲಿದೆ.
ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಪಲಿಮಾರು ಶ್ರೀಗಳು, ನಮಗೆ ಗುರುಗಳು ನೀಡಿದ ಭಾಗ್ಯ ಎರಡು ಒಂದು ಸನ್ಯಾಸ ಮತ್ತೊಂದು ಶ್ರೀ ಕೃಷ್ಣ ದೇವರ, ಶ್ರೀರಾಮ ದೇವರ ಪೂಜೆಯೊಂದಿಗೆ ಪಾಠ ಪ್ರವಚನ. ಇದು ನಿರಂತರವಾಗಿ ಬೆಳೆಯ ಬೇಕು ಮತ್ತು ಬೆಳಸಬೇಕು. ಸನ್ಯಾಸ ಎಂದರೆ ಕೇವಲ ಕಾಷಾಯ ವಸ್ತ್ರ ಬದಲಾವಣೆಯಲ್ಲ ಮಾನಸಿಕವಾದ ಪಕ್ವಾತೆಯೊಂದಿಗೆ ಪೂರ್ಣ ವಿರಕ್ತಿ ಭಾವ.ಅದು ಇದ್ದಲ್ಲಿ ಮಾತ್ರ ಸನ್ಯಾಸಕ್ಕೆ ಅರ್ಥವಿದೆ. ಇಂತಹ ಸನ್ಯಾಸದಿಂದಲೇ ಭಗವಂತನನ್ನು ಒಲಿಸಿಕೊಳ್ಳಲು ಸಾಧ್ಯ ಎಂದರು.
ಈ ನಿಟ್ಟಿನಲ್ಲಿ ನಮ್ಮ ಗುರುಗಳು ಹಾಗೂ ಪೂರ್ವಾಚಾರ್ಯರು ನೀಡಿದ ಈ ಜ್ಞಾನ ಸಂತತಿಯನ್ನು ಬೆಳೆಸುವ ದೃಷ್ಟಿಯಿಂದ ಯೋಗ್ಯ ವಟುವಿನ ನಿರೀಕ್ಷೆಯಲ್ಲಿದ್ದಾಗ ಶ್ರೀ ರಾಮಕೃಷ್ಣ ದೇವರ, ಅನಂತಾಸನ ದೇವರ ಅನುಗ್ರಹದಿಂದ ಶ್ರೀಮುಖ್ಯಪ್ರಾಣ ದೇವರ ಶ್ರೀಮಧ್ವಾಚಾರ್ಯರ ದಯೆಯಿಂದ ಪಲಿಮಾರಿನ ನಮ್ಮ ಯೋಗದೀಪಿಕಾ ವಿದ್ಯಾಪೀಠದಲ್ಲಿ ಅಧ್ಯಯನ ಮಾಡುತ್ತಿರುವ ವಟು ದೊರಕಿದ್ದಾನೆ ಎಂದರು.
ಮೊದಲಿನಿಂದಲೂ ಅಧ್ಯಾತ್ಮಿಕ ಸಾಧನೆಯಲ್ಲಿ ನಿಷ್ಠೆ ಶುದ್ಧ ಸದಾಚಾರದಿಂದ ಕೂಡಿದ ಹಾಗೂ ವಿಶೇಷವಾಗಿ ಸಹಜವಾಗಿ ಸನ್ಯಾಸದ ಬಗ್ಗೆ ಆಸಕ್ತಿಯಿದ್ದ ಶೈಲೇಶ್ ಉಪಾಧ್ಯಾಯ ಎಂಬ ವಿದ್ಯಾರ್ಥಿಯನ್ನು ಗುರುತಿಸಿ ಅವನ ತಂದೆ ತಾಯಿಗಳಾದ ಕೊಡವೂರು ಕಂಬ್ಲಕಟ್ಟ ನಿವಾಸಿಗಳಾದ ವೇದಮೂರ್ತಿ ಸುರೇಂದ್ರ ಉಪಾಧ್ಯಾಯ ಹಾಗೂ ಲಕ್ಷ್ಮೀ ಸುರೇಂದ್ರ ಉಪಾಧ್ಯಾಯ ದಂಪತಿಗಳನ್ನು ಸಂಪರ್ಕಿಸಿ, ಸಿದ್ಧ ಜ್ಯೋತಿಷಿಗಳ ಬಳಿ ವಟುವಿನ ಜಾತಕದ ಚಿಂತನೆಯನ್ನು ನಡೆಸಿ ಅವರ ಕುಟುಂಬದ ಸದಸ್ಯರ ಪೂರ್ಣ ಸಮ್ಮತಿಯೊಂದಿಗೆ ಶೈಲೇಶ ಉಪಾಧ್ಯಾಯ ಎಂಬ ವಟುವನ್ನು ನಮ್ಮ ಉತ್ತರಾಧಿಕಾರಿಯನ್ನಾಗಿ ಮಾಡಲು ನಿರ್ಣಯಿಸಿದ್ದೇವೆ ಎಂದರು.
ಸನ್ಯಾಸ ಆಶ್ರಮವನ್ನು ಬಲವಂತವಾಗಿ ಕೊಡಲಾಗದು. ಇದಕ್ಕೆ ಸಂನ್ಯಾಸದ ಆಸಕ್ತಿಯೂ ಇರಬೇಕು. ಎಲ್ಲ ಶಾಸ್ತ್ರೋಕ್ತ ಅಂಶಗಳ ಬೆಂಬಲಗಳೂ ಇರಬೇಕು. ವಟುವಿನ ತಾಯ್ತಂದೆಯರ ಒಪ್ಪಿಗೆಯೂ ಇರಬೇಕು ಎಂದರು.
ನಾವು ವಟುವಿನ ಕುಂಡಲಿಯನ್ನು ಮೂರು ಜನ ಬೇರೆ ಬೇರೆ ಸುಪ್ರಸಿದ್ಧ ಜ್ಯೋತಿಷಿಗಳಿಗೆ ಕೊಟ್ಟಿದ್ದೆವು. ಈ ವಿಷಯವು ಆ ಜ್ಯೋತಿಷಿಗಳಿಗೆ ಪರಸ್ಪರರಿಗೆ ತಿಳಿದಿದ್ದಿಲ್ಲ. ಆದರೆ ಕೊನೆಯಲ್ಲಿ ಬಂದ ಫಲಿತಾಂಶದಲ್ಲಿ ಎಲ್ಲರ ಅಭಿಪ್ರಾಯವು ಒಂದೇ ಆಗಿತ್ತು. ಶ್ರೀಮಠಕ್ಕೆ ಉತ್ತರಾಧಿಕಾರಿಗಳಾಗಿ ಇವರ ನೇಮಕವು ಉತ್ತಮ ನಿರ್ಧಾರವಾಗಲಿದೆ ಎಂಬುದೇ ಆ ಅಭಿಪ್ರಾಯವಾಗಿತ್ತು. ನಾವು ಮಾತ್ರವಲ್ಲ ವಟುವಿನ ತಂದೆ ತಾಯ್ಗಳು ಕೇರಳದ ಪ್ರಕಾಂಡ ಜ್ಯೋತಿಷಿಗಳಲ್ಲಿ ಇದನ್ನು ವಿಚಾರಿಸಿದಾಗ ಅಲ್ಲಿಯೂ ಕೂಡ ಧನಾತ್ಮಕ ಫಲಿತಾಂಶವೇ ದೊರಕಿದೆ ಎಂದರು.
ವಟುವಿಗೂ ಸನ್ಯಾಸದಲ್ಲಿ ಆಸಕ್ತಿಯಿರುವುದು ಗಮನಾರ್ಹ. ವಟುವು ಈಗಾಗಲೇ ಯೋಗದೀಪಿಕಾ ವಿದ್ಯಾಪೀಠದಲ್ಲಿ ಶಾಸ್ತ್ರಾಧ್ಯಯನವನ್ನು ಮಾಡುತ್ತಿದ್ದಾನೆ. ಮುಂದಿನ ಅಧ್ಯಯನವನ್ನು ನಾವೇ ಸ್ವತಃ ಮಾಡಿಸಲಿದ್ದೇವೆ. ನಿಮ್ಮೆಲ್ಲ ಪ್ರಾರ್ಥನೆ ಮತ್ತು ಹಾರೈಕೆಗಳು ವಟುವಿಗೆ ಇರಲಿ ಎಂದರು.
ಮಾರ್ಚ್ 26ರಂದು ಶೈಲೇಶ ಉಪಾಧ್ಯಾಯರ ಕುಟುಂಬದ ಹಿರಿಯರೆಲ್ಲರೂ ಶ್ರೀಗಳವರಲ್ಲಿ ಬಂದು, ತಮ್ಮ ಕುಟುಂಬದ ಕುಡಿಯ ಸನ್ಯಾಸಾಶ್ರಮ ಸ್ವೀಕಾರದ ನಿರ್ಧಾರಕ್ಕೆ ತಮ್ಮ ಒಪ್ಪಿಗೆಯನ್ನು ಸೂಚಿಸಿ, ಅವನನ್ನು ಶ್ರೀಕೃಷ್ಣದೇವರ ಎದುರು ಶ್ರೀಸಂಸ್ಥಾನಕ್ಕೆ ಒಪ್ಪಿಸಿದರು. ಈ ಹಿನ್ನೆಲೆಯಲ್ಲಿ ಆಶ್ರಮ ಸ್ವೀಕಾರ ದಿನಾಂಕಗಳನ್ನು ನಿರ್ಧರಿಸಲಾಗಿದೆ ಎಂದರು.
ಆಶ್ರಮ ಸ್ವೀಕಾರ ಪ್ರಕ್ರಿಯೆ ದಿನಾಂಕಗಳು ಹೀಗಿವೆ:
- ಮೇ 5: ಆಶ್ರಮ ಸ್ವೀಕಾರ ಪ್ರಕ್ರಿಯೆ ಪ್ರಾರಂಭ, ಆ ದಿನ ಪ್ರಾಯಶ್ಚಿತ್ತಗಳು, ವಿರಜಾ ಹೋಮ ಮತ್ತು ಆತ್ಮಶ್ರಾದ್ಧಗಳು ನಡೆಯಲಿವೆ
- ಮೇ 10: ವಟುವು ಪ್ರಣವ ಮಂತ್ರ ದೀಕ್ಷಾ ಪುರಸ್ಸರವಾಗಿ ಸಂನ್ಯಾಸ ಆಶ್ರಮವನ್ನು ಸ್ವೀಕರಿಸುತ್ತಾರೆ. ಈ ಕಾರ್ಯಕ್ರಮವು ಬ್ರಾಹ್ಮೀ ಮುಹೂರ್ತದಲ್ಲಿ ನಡೆಯಲಿದೆ
- ಮೇ 11: ಅಷ್ಟ ಮಹಾಮಂತ್ರಗಳ ಉಪದೇಶವು ನಡೆಯಲಿದೆ
- ಮೇ 12: ಶ್ರೀಹೃಷೀಕೇಶತೀರ್ಥ ಪೀಠವಾದ ಶ್ರೀಪಲಿಮಾರು ಮಠದ ಪೀಠಕ್ಕೆ ಉತ್ತರಾಧಿಕಾರಿಗಳಾಗಿ ಪಟ್ಟಾಭಿಷೇಕ ನಡೆಯಲಿದೆ.
- ಈ ಎಲ್ಲ ಕಾರ್ಯಕ್ರಮಗಳು ಸರ್ವಜ್ಞ ಸಿಂಹಾಸನದಲ್ಲಿಯೇ ನಡೆಯಲಿವೆ.
















