ವಯನಾಡ್: 2019ರ ಲೋಕಸಭಾ ಚುನಾವಣೆಗೆ ವಯನಾಡ್’ನಿಂದ ನಾಮಪತ್ರ ಸಲ್ಲಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ತಮ್ಮ ಆಸ್ತಿಯನ್ನು ಘೋಷಣೆ ಮಾಡಿಕೊಂಡಿದ್ದು, ಇದರ ಒಟ್ಟು ಮೊತ್ತ 15.88 ಕೋಟಿ ರೂ. ಆಗಿದೆ.
ನಾಮಪತ್ರ ಸಲ್ಲಿಕೆಯೊಂದಿಗೆ ಅಫಿಡವಿಟ್ ಸಲ್ಲಿಸಿರುವ ಅವರು, ತಮ್ಮ ಬಳಿ ಯಾವುದೇ ಕಾರುಗಳಿಲ್ಲ ಹಾಗೂ ವಿವಿಧ ಬ್ಯಾಂಕ್ ಮತ್ತು ಇತರೆ ಹಣಕಾಸು ಸಂಸ್ಥೆಗಳಿಂದ 72 ಲಕ್ಷ ರೂ. ಸಾಲ ಪಡೆದಿರುವುದಾಗಿ ಉಲ್ಲೇಖಿಸಿದ್ದಾರೆ.
2014ರ ಲೋಕಸಭಾ ಚುನಾವಣೆ ವೇಳೆ 9.4 ಕೋಟಿ ರೂ. ಆಸ್ತಿಯನ್ನು ಹೊಂದಿದ್ದ ರಾಹುಲ್ ಗಾಂಧಿ, ಪ್ರಸ್ತುತ ಇದು 15.88 ಕೋಟಿಗೆ ಏರಿಕೆಯಾಗಿದೆ ಎಂದು ದಾಖಲೆ ಸಲ್ಲಿಸಿದ್ದಾರೆ.
ರಾಹುಲ್ ಗಾಂಧಿ 5,80,58,799ರೂ. ಮೌಲ್ಯದ ಚರಾಸ್ತಿ ಮತ್ತು 10 ಕೋಟಿ ಎಂಟು ಲಕ್ಷದ 18 ಸಾವಿರದ 284 ರೂ. ಸ್ಥಿರಾಸ್ತಿ ಹೊಂದಿದ್ದು. ಅವರ ಒಟ್ಟು 15 ಕೋಟಿ 88 ಲಕ್ಷ 77 ಸಾವಿರದ 83 ರೂ. ಆಸ್ತಿ ಹೊಂದಿರುವುದಾಗಿ ಘೋಷಿಸಿದ್ದಾರೆ.
ರಾಹುಲ್ ಬಳಿ 40 ಸಾವಿರ ರೂ. ನಗದು ಹಣವಿದ್ದು, ವಿವಿಧ ಬ್ಯಾಂಕುಗಳಲ್ಲಿ 17.93 ಲಕ್ಷ ರೂ. ಹೊಂದಿದ್ದಾರೆ. ಇದಲ್ಲದೆ 5.19 ಕೋಟಿ ರೂಪಾಯಿಗಳನ್ನು ಬಾಂಡ್’ಗಳು, ಡಿಬೆಂಚರ್’ಗಳು ಮತ್ತು ವಿವಿಧ ಕಂಪೆನಿಗಳ ಷೇರುಗಳಲ್ಲಿ ಇರಿಸಿದ್ದಾರೆ. ಅವರು 333.3 ಗ್ರಾಂ ಚಿನ್ನವನ್ನು ಹೊಂದಿದ್ದಾರೆ.
Discussion about this post