ಶಿಕಾರಿಪುರ: ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಕಲೆ ಹಾಗೂ ದೇಶದ ಶ್ರೀಮಂತ ಸಂಸ್ಕೃತಿ ಸಂಸ್ಕಾರವನ್ನು ಉಳಿಸಲು ಶ್ರಮಿಸುತ್ತಿರುವ ಗುಡಿ ಸಾಂಸ್ಕೃತಿಕ ಕೇಂದ್ರ ಶಿಕಾರಿಪುರಕ್ಕೆ ಬಹು ದೊಡ್ಡ ಹೆಮ್ಮೆ ಎಂದು ಮೆಸ್ಕಾಂನ ಕಾರ್ಯಪಾಲಕ ಅಭಿಯಂತರ ಬೆಣ್ಣೆ ಪರಶುರಾಮಪ್ಪ ತಿಳಿಸಿದರು.
ಪಟ್ಟಣದ ಗುಡಿ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆದ ಬೇಸಿಗೆ ಶಿಬಿರ ಹಾಗೂ ತಾಲೂಕು ಜಾನಪದ ಪರಿಷತ್ ಮತ್ತು ತಾಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ನಡೆದ ಯುಗಾದಿ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗುಡಿ ಸಾಂಸ್ಕೃತಿಕ ಕೇಂದ್ರದ ವತಿಯಿಂದ ಕಳೆದ ಹಲವು ವರ್ಷದಿಂದ ನಿರಂತರವಾಗಿ ಬೇಸಿಗೆ ಶಿಬಿರದ ಮೂಲಕ ಮಕ್ಕಳಿಗೆ ಬಾಲ್ಯದಿಂದಲೇ ದೇಶದ ಶ್ರೀಮಂತ ಸಂಸ್ಕೃತಿ ಸಂಸ್ಕಾರ ಇತಿಹಾಸದ ಬಗ್ಗೆ ಪರಿಚಯಿಸುವ ಕಾರ್ಯವನ್ನು ನಡೆಸುತ್ತಿರುವುದು ಶ್ಲಾಘನೀಯ ಎಂದ ಅವರು ಸ್ಥಳೀಯರು ಕೇಂದ್ರದ ಸಮಸ್ತ ಕಾರ್ಯವನ್ನು ಬೆಂಬಲಿಸುವ ಮೂಲಕ ಪ್ರೋತ್ಸಾಹಿಸಬೇಕಾಗಿದೆ ಎಂದು ತಿಳಿಸಿದರು.
ನೀನಾಸಂ ಮಾದರಿಯಲ್ಲಿ ತಾಲೂಕಿನಲ್ಲಿ ಕಲೆ ಸಂಸ್ಕೃತಿಯ ಉಳಿವಿಗಾಗಿ ಶ್ರಮಿಸುತ್ತಿರುವ ಗುಡಿ ಕೇಂದ್ರದ ಪ್ರಯೋಜನವನ್ನು ಪ್ರತಿಯೊಬ್ಬರೂ ಪಡೆಯುವಂತೆ ತಿಳಿಸಿದ ಅವರು ಅತ್ಯಂತ ವಿಶಿಷ್ಟವಾಗಿ ಸಂಸ್ಕೃತಿ ಸಂಸ್ಕಾರದ ಬಗ್ಗೆ ಸದಾಕಾಲ ಕ್ರಿಯಾಶೀಲವಾಗಿರುವ ಕೇಂದ್ರ ತಾಲೂಕಿನ ಜನತೆಯ ಹೆಮ್ಮೆಯ ಪ್ರತೀಕವಾಗಿದೆ. ಬೇಸಿಗೆ ಶಿಬಿರದಲ್ಲಿ ಪಾಲ್ಗೊಳ್ಳುವ ಮೂಲಕ ಮಕ್ಕಳು ಸದುಪಯೋಗ ಪಡಿಸಿಕೊಳ್ಳಲು ತಿಳಿಸಿ ರಾಜ್ಯ ಮಟ್ಟದಲ್ಲಿ ಕೇಂದ್ರ ಗಮನ ಸೆಳೆಯುವಂತಾಗಲಿ ಎಂದು ಹಾರೈಸಿದರು.
ತಾಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕೆ ವೇದಿಕೆಯ ಅಧ್ಯಕ್ಷ ಕೆ.ಎಸ್. ಹುಚ್ರಾಯಪ್ಪ ಮಾತನಾಡಿ, ರಾಜಕಾರಣಿಗಳ ಕಾರ್ಯಕ್ರಮಕ್ಕೆ ತಂಡೋಪತಂಡವಾಗಿ ಬರುವ ಜನತೆ ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ನಿರ್ಲಕ್ಷತೆ ವಹಿಸುವುದು ದುರಂತವೇ ಸರಿ ಎಂದು ಬೇಸರ ವ್ಯಕ್ತಪಡಿಸಿದರು.
ಶಿಕಾರಿಪುರದಲ್ಲಿ ಇಂಥಹ ಸಾಂಸ್ಕೃತಿಕ ವೇದಿಕೆಯನ್ನು ಸದುಪಯೋಗ ತಾಲೂಕಿನ ನಾಗರಿಕರು ಪಡೆದುಕೊಳ್ಳಬೇಕೆಂದರು.
ತಾಲೂಕು ಜನಪದ ಸಾಹಿತ್ಯ ಪರಿಷತ್ ಅಧ್ಯಕ್ಷ ಪಾಪಯ್ಯ ಮಾತನಾಡಿ, ಈ ಹಿಂದೆ ಯುಗಾದಿ ಸಂಭ್ರಮದಲ್ಲಿ ಜೋಕಾಲಿ, ಜನಪದ ಕಲೆ, ದೇಶೀಯ ಕ್ರೀಡೆಗಳು ಹಳ್ಳಿ ಪದ್ಯಗಳು ಸೇರಿದಂತೆ ವಿವಿಧ ರೀತಿಯ ಗ್ರಾಮೀಣ ಸಾಂಸ್ಕೃತಿಕ ಕಲೆಗಳನ್ನು ನಾವು ಅನುಭವಿಸುತ್ತಿದ್ದೆವು. ಆದರೆ ಇಂದಿನ ಯುವ ಪೀಳಿಗೆ ಮೊಬೈಲ್ ಸಂಸ್ಕೃತಿಯ ಹಿಂದೆ ಬಿದ್ದಿದ್ದು ತಮ್ಮ ತನವನ್ನು ಕಳೆದುಕೊಳ್ಳುತ್ತಿರುವುದು ವಿಷಾದನೀಯ ಎಂದು ಬೇಸರಿಸಿದ ಅವರು ಮೊಬೈಲ್ ಬಳಕೆಯನ್ನು ಮಕ್ಕಳು ದೂರ ಮಾಡಿಕೊಳ್ಳದಿದ್ದರೆ ಮುಂದೆ ದೊಡ್ಡ ಅನಾಹುತ ನಿಶ್ಚಿತ ಎಂದು ತಿಳಿಸಿದರು.
ಗುಡಿ ಸಾಂಸ್ಕೃತಿಕ ಕೇಂದ್ರದ ಸಂಸ್ಥಾಪಕ, ರಂಗಕರ್ಮಿ ಇಕ್ಬಾಲ್ ಅಹ್ಮದ್ ಮಾತನಾಡಿ, ಕೇಂದ್ರ ಆರಂಭದ ಮೂಲಕ ವಿಪರೀತ ಕನಸುಗಳನ್ನು ಕಟ್ಟಿಕೊಂಡಿದ್ದು ಕನಸು ನನಸಾಗಲು ಇನ್ನೂ ಸಾಕಷ್ಟು ಸಮಯ ಬೇಕಾಗಬಹುದು ಎಂತಹ ಸಮಸ್ಯೆಗಳಿಗೆ ವಿಚಲಿತರಾಗದೆ ಈ ಸಾಂಸ್ಕೃತಿಕ ಕೇಂದ್ರವನ್ನು ತಾಲೂಕಿನ ಜನತೆಗಾಗಿ ಅರ್ಪಿಸಲಿದ್ದೇನೆ ಕೇಂದ್ರ ಸ್ವಾರ್ಥಕ್ಕಲ್ಲ. ತಾಲೂಕಿನ ಜನರ ಸಾಂಸ್ಕೃತಿಕ ಕೇಂದ್ರ ಬಿಂದುವಾಗಬೇಕೆಂದು ಎಂದರು.
ಈ ಸಂದರ್ಭದಲ್ಲಿ ಎನ್. ನಾಗರಾಜಪ್ಪ ಜಕ್ಕಿನಕೊಪ್ಪ, ನಾಗರಾಜಾಚಾರ್, ಸತ್ಯನಾರಾಯಣ, ಸತೀಶ್ ಗಟ್ಟಿ, ಇ.ಎಚ್. ಬಸವರಾಜ್, ಕಾಳಿಂಗರಾವ್ ಮತ್ತಿತರರು ಉಪಸ್ಥಿತರಿದ್ದರು.
(ವರದಿ: ರಾಜಾರಾವ್ ಜಾಧವ್, ಶಿಕಾರಿಪುರ)
Discussion about this post