ನವದೆಹಲಿ: ಲೋಕಸಭಾ ಚುನಾವಣಾ ಕಣ ಉತ್ತರ ಭಾರತದಲ್ಲಿ ರಂಗೇರಿರುವಂತೆ, ಪ್ರಧಾನಿ ನರೇಂದ್ರ ಮೋದಿ ಅವಧಿಯಲ್ಲಿ ನಡೆದ ಸರ್ಜಿಕಲ್ ರೀತಿಯಲ್ಲೇ ನಮ್ಮ ಅವಧಿಯಲ್ಲೂ ಸಹ ಆರು ಬಾರಿ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿತ್ತು ಎಂದು ಕಾಂಗ್ರೆಸ್ ಹೇಳಿಕೆ ನೀಡಿದೆ.
ಈ ಕುರಿತಂತೆ ಹೇಳಿಕೆ ನೀಡಿ, ಸಮರ್ಥನೆ ಮಾಡಿಕೊಂಡಿರುವ ಹಿರಿಯ ಕಾಂಗ್ರೆಸ್ ಮುಖಂಡ ರಾಜೀವ್ ಶುಕ್ಲಾ, ಯುಪಿಎ ಸರ್ಕಾರದ ಅವಧಿಯಲ್ಲಿ ಒಟ್ಟು ಆರು ಬಾರಿ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿತ್ತು. ಆದರೆ, ಬಹಿರಂಗಗೊಳಿಸಲಾಗಿಲ್ಲ ಎಂದಿದ್ದಾರೆ.
ಯುಪಿಎ ಅವಧಿಯಲ್ಲಿ ಆರು ಬಾರಿ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿದ್ದರೆ, ಅಟಲ್ ಬಿಹಾರಿ ವಾಜಪೇಯಿ ಅವರ ಅವಧಿಯಲ್ಲಿ ಎರಡು ಬಾರಿ ನಡೆಸಲಾಗಿದೆ ಎಂದಿದ್ದಾರೆ.
ದೇಶದ ರಕ್ಷಣೆ ಉದ್ದೇಶದಿಂದ ಆರು ಬಾರಿ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿದ್ದರೂ, ಕಾಂಗ್ರೆಸ್ ಎಂದಿಗೂ ಅದರ ಲಾಭವನ್ನು ಪಡೆಯಲು ಮುಂದಾಗಲಿಲ್ಲ. ಆದರೆ, ಒಂದು ಬಾರಿ ಸರ್ಜಿಕಲ್ ಸ್ಟ್ರೈಕ್ ನಡೆಸಿದವರು ಅದರ ಲಾಭವನ್ನು ಪಡೆಯುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
ಯುಪಿಎ ಅವಧಿಯಲ್ಲಿ ನಡೆದ ಸರ್ಜಿಕಲ್ ಸ್ಟ್ರೈಕ್ ಕುರಿತಾಗಿ ಮಾಹಿತಿ ನೀಡಿರುವ ಶುಕ್ಲಾ, 2008ರ ಜೂನ್ 19ರಂದು ಜಮ್ಮು ಕಾಶ್ಮೀರದ ಭಟ್ಟಾಲ್ ಸೆಕ್ಟರ್’ನಲ್ಲಿ ಮೊದಲ ದಾಳಿ ನಡೆಸಿದ್ದು, 2011ರ ಸೆಪ್ಟೆಂಬರ್ 30ರಂದು ಶಾರದಾ ಸೆಕ್ಟರ್ ಬಳಿಯಲ್ಲಿ 2ನೆಯ ದಾಳಿ ನಡೆಸಲಾಗಿದೆ ಎಂದಿದ್ದಾರೆ.
ಇನ್ನು, 2013ರ ಜನವರಿ 6ರಂದು ಸವಾನ್ ಪಾತ್ರ ಚೆಕ್’ಪೋಸ್ಟ್’ನಲ್ಲಿ ಮೂರನೆಯ ದಾಳಿ, 2013ರ ಜುಲೈ 27-28ರಂದು ನಜಾಫಿರ್ ಸೆಕ್ಟರ್’ನಲ್ಲಿ ನಾಲ್ಕನೆಯ ದಾಳಿ, 2013ರ ಆಗಸ್ಟ್ 6ರಂದು ನೀಲಂ ವ್ಯಾಲಿಯಲ್ಲಿ ಐದನೆಯ ದಾಳಿ, 2014ರ ಜನವರಿ 14ರಂದು ಆರನೆಯ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.
Discussion about this post