ಭದ್ರಾವತಿ: ಪುರಾಣ ಪ್ರಸಿದ್ಧ ಶ್ರೀಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದಲ್ಲಿ ನಡೆದ ಬ್ರಹ್ಮ ರಥೋತ್ಸವದ ಅಂಗವಾಗಿ ಸೋಮವಾರ ಬೆಳಿಗ್ಗೆ ಮೂಲದೇವರಿಗೆ ಸುಪ್ರಭಾತ ಮಾಡಿ ದರ್ಪಣದ ಮೂಲಕ ದೇವರ ದರ್ಶನ ಮಾಡಲಾಯಿತು.
ವರ್ಷಕ್ಕೊಮ್ಮೆ ಮಾಡುವ ವಿಶೇಷ ಕಷಾಯ ತೀರ್ಥವನ್ನು ಭಕ್ತಾದಿಗಳಿಗೆ ನೀಡಲಾಯಿತು. ನಂತರ ಬಲಿ ಉತ್ಸವ, ಸಂಧಾನ ಸೇವೆ ನಡೆಯಿತು. ಸುದರ್ಶನ ಚಕ್ರಕ್ಕೆ ಪಂಚಾಮೃತ ಅಭಿಷೇಕ ನೆರವೇರಿಸಿ ನಂತರ ಅರಿಷಿಣ ಮತ್ತು ಜಲದಿಂದ ಅಭಿಷೇಕ ಮಾಡಲಾಯಿತು. ದೇವರಿಗೆ ಮಾಡಿದ ಅರಿಶಿಣ ಜಲದ ಅಭಿಷೇಕದ ನೀರಿನಿಂದ ಭಕ್ತಾದಿಗಳು ಅವಭೃತ ಸ್ನಾನ ಮಾಡಿಸಲಾಯಿತು.
ನಂತರ ದೇವರ ಉತ್ಸವದೊಂದಿಗೆ ಭಜನೆ ಮಾಡುತ್ತಾ ಹಳೇನಗರದ ಶ್ರೀ ರಾಘವೇಂದ್ರ ಸ್ವಾಮಿ, ಶ್ರೀವಾದಿರಾಜ ಸ್ವಾಮಿಗಳ ಮಠಕ್ಕೆ ಬಂದು ದೇವರನ್ನರಿಸಿ ಭದ್ರಾನದಿಗೆ ತೆರಳಿ ನದಿಯಲ್ಲಿರುವ ಗಣಪತಿ, ಸಂಗಮೇಶ್ವರ, ಶಿವಲಿಂಗ ಮತ್ತು ನಂದಿಗೆ ಆರತಿ ಸೇವೆ ನಡೆಸಲಾಯಿತು. ನದಿಗೆ ಪೂಜೆ ಸಲ್ಲಿಸಿ ನಂತರ ಸುದರ್ಶನ ಚಕ್ರಕ್ಕೆ ನೀರಿನಲ್ಲಿ ಅಭಿಷೇಕ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನ ಅರ್ಚಕ ರಂಗನಾಥ ಶರ್ಮ, ಪಂಚರಾತ್ರಿ ಆಗಮದ ಪ್ರಕಾರ ದೇವಾನು ದೇವತೆಗಳ ಸ್ವರೂಪ, ಋಷಿಗಳ ಮತ್ತು ಋಷಿಪತ್ನಿಯರು ನದಿಗಳ ಸನ್ನಿಧಾನ ಹೇಗಿರಬೇಕು, ಆಯುಧಗಳು ಯಾವ ದೇವತೆಗಳ ಕೈಯಲ್ಲಿರುತ್ತವೆ, ಪೂಜೆ ಪುನಸ್ಕಾರಗಳು ಹೇಗಿರಬೇಕು ಎಂಬಿತ್ಯಾದಿ ವಿವರಗಳನ್ನು ಶಾಸ್ತ್ರಗಳಲ್ಲಿ ಸ್ಪಷ್ಠವಾಗಿ ವಿವರಿಸಲಾಗಿದೆ. ಅದೇ ಪ್ರಕಾರ ನಡೆದಿರುವ ರಥೋತ್ಸವದ ಅಂಗವಾಗಿ ಹಿಂದಿನಿಂದ ನಡೆದುಕೊಂಡು ಬಂದಿರುವಂತೆ ಓಕಳಿ ಸ್ನಾನ ಮಾಡಿ ನಂತರ ನದಿಯ ಪುಣ್ಯಜಲದಲ್ಲಿ ಸ್ನಾನ ಮಾಡಲು ಭಕ್ತಾದಿಗಳಾದ ನಾವೆಲ್ಲರು ಸುದರ್ಶನ ಚಕ್ರಸಹಿತವಾಗಿ ಬಂದಿದ್ದೇವೆ ಈ ಪುಣ್ಯನದಿಯಲ್ಲಿ ಮಿಂದು ಎಲ್ಲರೂ ಪುನೀತರಾಗೋಣ ಎಂದರು.
ದೇವರ ಉತ್ಸವದೊಂದಿಗೆ ನದಿಗೆ ಬಂದಿದ್ದ ಭಕ್ತಾದಿಗಳು ನದಿಯಲ್ಲಿ ಮಿಂದು ಪುನೀತರಾದರು. ನಂತರ ಮಠಕ್ಕೆ ಹಿಂದಿರುಗಿ ಬಂದು ದೇವರಿಗೆ ನೈವೇದ್ಯ ಸಲ್ಲಿಸಿ ಮಂಗಳಾರತಿ ಮಾಡಲಾಯಿತು. ಮಠದಿಂದ ಸಂಜೆ ಹನುಮಂತದೇವರ ವಾಹನದಲ್ಲಿ ದೇವರ ಉತ್ಸವ ರಾಜಬೀದಿಯಲ್ಲಿ ನಡೆಸಿ ದೇವಾಲಯಕ್ಕೆ ಕರೆತರಲಾಯಿತು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)

















