ಬೆಂಗಳೂರು: ಟಿಕ್ ಟಾಕ್ ವೀಡಿಯೋ ಮಾಡುವ ಶೋಕಿಗೆ ಮುಂದಾಗಿ ಸ್ಟಂಟ್ ಮಾಡಲು ಹೋದ ಯುವಕನೋರ್ವ ಸ್ಪೈನಲ್ ಕಾರ್ಡ್ ಮುರಿದುಕೊಂಡು ಧಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಐದು ದಿನಗಳ ಹಿಂದೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆಯಲ್ಲಿ ಈ ಘಟನೆ ನಡೆದಿದೆ.
ಕುಮಾರ್ ಸ್ನೇಹಿತನ ಜೊತೆಯಲ್ಲಿ ಟಿಕ್‌ಟಾಕ್ ಮಾಡಲು ನಿಂತಿದ್ದನು. ದೂರದಿಂದ ಓಡಿ ಬಂದು ಕುಮಾರ್, ಮುಂದೆ ನಿಂತಿದ್ದ ಸ್ನೇಹಿತನ ಕೈ ಸಪೋರ್ಟ್ ನಿಂದ ಬ್ಯಾಕ್ ಜಂಪ್ ಮಾಡುತ್ತಾನೆ. ಆಗ ಕುಮಾರ್ ಆಯ ತಪ್ಪಿ ಕೆಳಗೆ ಬಿದ್ದಿದ್ದನು.
ಸ್ಪೈನಲ್ ಕಾರ್ಡ್ ಮುರಿದುಕೊಂಡಿದ್ದ ಈತನನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಐದು ದಿನಗಳ ಕಾಲ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಈತ, ಇಂದು ಕೊನೆಯುಸಿರೆಳೆದಿದ್ದಾನೆ.
ಬಡತನದಲ್ಲಿ ಬೆಳೆದಿದ್ದ ಕುಮಾರ್, ರಸಮಂಜರಿಗಳಲ್ಲಿ ಹಾಡುವ ಮೂಲಕ ಬಂದ ಹಣದಲ್ಲಿ ಕುಟುಂಬ ನಿರ್ವಹಿಸುತ್ತಿದ್ದ. ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಭೆ ಹೊರಹಾಕಿದರೆ ಅವಕಾಶ ಸಿಗುತ್ತದೆ ಎಂಬ ಆಸೆ ಬದುಕಿಗೆ ಎರವಾಗಿದೆ.















