ಸೊರಬ: ಮರಗಳು ನಮ್ಮೆಲ್ಲರ ಜೀವನಾಡಿ. ಎಷ್ಟೋ ಜನರು ತಮ್ಮ ಪಾಪಗಳನ್ನು ಕಳೆದುಕೊಳ್ಳಲು ತೀರ್ಥಯಾತ್ರೆಗೆ ತೆರಳುತ್ತಾರೆ. ಅದರ ಬದಲು ಫಲ ಬಿಡುವ ಗಿಡಗಳನ್ನು ನೆಟ್ಟು ಪಾಪ ಕಳೆದುಕೊಳ್ಳೋಣ. ನಾವೆಲ್ಲ ನೆಟ್ಟ ಗಿಡಗಳ ಹಣ್ಣುಗಳನ್ನು ಮಾನವ ಮತ್ತು ಇತರೆ ಪ್ರಾಣಿ ಪಕ್ಷಿಗಳು ತಿಂದಾಗ ನಮ್ಮ ಜನ್ಮದ ಪಾಪಗಳು ಕಳೆದು ಜನ್ಮ ಸಾರ್ಥಕವಾಗುವುದರ ಜೊತೆಗೆ ಮುಂದಿನ ಪೀಳಿಗೆಗೆ ನಾವು ಕೊಡುಗೆ ನೀಡಿದಂತಾಗುತ್ತದೆ ಎಂದು ನಿವೃತ್ತ ಶಿಕ್ಷಕ ಯಶವಂತಪ್ಪ ಚಂದ್ರಗುತ್ತಿ ಹೇಳಿದರು.
ತಾಲೂಕಿನ ಹೆಚ್ಚೆ ಗ್ರಾಪಂ ವ್ಯಾಪ್ತಿಯ ಕಾರೆಹೊಂಡ ಗ್ರಾಮದ ಬೀರೇಶ್ವರ ದೇವರ ಬನದಲ್ಲಿ ಗಿಡ ನೆಡುವುದರ ಮೂಲಕ ವನಮಹೋತ್ಸವಕ್ಕೆ ಚಾಲನೆ ನೀಡಿದ ಅವರು, ಮಕ್ಕಳಿಗೆ ಹೊಲಗದ್ದೆ, ಕಾನು, ಕಾಡುಪಕ್ಷಿ ಜೀವಿಗಳ ಪ್ರಾಥಮಿಕ ಅರಿವನ್ನು ಪೋಷಕರು ಮೂಡಿಸಬೇಕು ಎಂದರು.
ಅಥಿತಿಗಳಾಗಿ ಆಗಮಿಸಿದ ಪರಿಸರ ಜಾಗೃತಿ ಟ್ರಸ್ಟ್ ಉಪಾಧ್ಯಕ್ಷ ಶ್ರೀಪಾದ ಬಿಚ್ಚುಗತ್ತಿ ಮಾತನಾಡಿ, ದೇವರ ಬನದ ಹೆಸರಿನಲ್ಲಿ ಗಿಡ ನೆಟ್ಟು ಬೆಳೆಸಿದಲ್ಲಿ ಖಂಡಿತವಾಗಿ ಗಿಡಗಳು ಮರಗಳಾಗುತ್ತವೆ. ದೇವರ ಮೇಲಿನ ನಂಬಿಕೆಗಳು ಬಲವಾದಲ್ಲಿ ನಮ್ಮ ಸಮಾಜದ ಸಂಸ್ಕೃತಿಗಳು ಶಾಶ್ವತವಾಗಿರುತ್ತವೆ. ಕೇವಲ ಈ ವನಮಹೋತ್ಸವ ಸಾಂಕೇತಿಕವಾಗಿರದೆ ಗ್ರಾಮದ ಜನರು ವಿವಿಧ ಗಿಡಗಳನ್ನು ಬೆಳೆಸಿ ನಮ್ಮ ಪರಿಸರಕ್ಕೆ ಕೊಡುಗೆ ನೀಡಬೇಕು. ಮಹತ್ವದ ಔಷಧೀಯ ಸಸ್ಯಗಳು ಈ ದೇವರ ಬನದಲ್ಲಿ ಕಾಣಿಸುತ್ತಿದ್ದು ಉಳಿಸಿಕೊಳ್ಳುವತ್ತ ಮುಂದಾಗಬೇಕು ಎಂದರು.
ಗ್ರಾಮಾಭಿವೃದ್ಧಿ ಸಮಿತಿ ಕಾರೆಹೊಂಡ, ಅಮರಜ್ಯೋತಿ ಸಂಯುಕ್ತ ಪದವಿ ಪೂರ್ವ ಕಾಲೇಜು ಹಳೆಸೊರಬ, ಸ.ಕಿ.ಪ್ರಾ. ಶಾಲೆ ಕಾರೆಹೊಂಡ ಹಾಗೂ ಅರಣ್ಯ ಇಲಾಖೆ ಸೊರಬ ಇವರ ಸಹಭಾಗಿತ್ವದಲ್ಲಿ ನೂರಕ್ಕೂ ಅಧಿಕ ಅಮೂಲ್ಯ ವೃಕ್ಷಗಳಾದ ಹಲಸು, ಮಾವು, ನೆಲ್ಲಿ, ಹೆಬ್ಬಲಸು, ಓಟೆ, ನಾಗಸಂಪಿಗೆ, ನಾಗಲಿಂಗ ಪುಷ್ಪ, ಸುರಗಿ, ಮಹಾಗನಿ, ಸಾಗುವಾನಿ, ನೇರಳೆ, ಗಿಡಗಳನ್ನು ಗ್ರಾಮದ ಪ್ರತಿ ಮನೆಯಿಂದ ಒಬ್ಬ ವ್ಯಕ್ತಿ ಮತ್ತು ಅಮರಜ್ಯೋತಿ ಕಾಲೇಜಿನ ವಿದ್ಯಾರ್ಥಿಗಳು ನೆಟ್ಟರು.
ಪ್ರಾಂಶುಪಾಲರಾದ ಸಿ. ಪ್ರೀತಿ ಫರ್ನಾಂಡಿಸ್, ಅಮರಜ್ಯೋತಿ ಸಂಚಾಲಕಿ ಸಿ. ಹಿಲ್ಡಾಗಾಡರ್, ಉಪನ್ಯಾಸಕರಾದ ಅನಿಲ್ ಕುಮಾರ್, ಸಹ ಶಿಕ್ಷಕ ಪ್ರಶಾಂತ್, ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಬೀರಪ್ಪ, ಶಾಲಾ ಸಮಿತಿ ಅಧ್ಯಕ್ಷ ಕೆರಿಯಪ್ಪ, ಕಾರೆಹೊಂಡ ಪ್ರಾಥಮಿಕ ಶಾಲೆಯ ಶಿಕ್ಷಕರು, ಕಾರೆಹೊಂಡ ಗ್ರಾಮಸ್ಥರು ಮತ್ತು ಅಮರಜ್ಯೋತಿ ಕಾಲೇಜಿನ ವಿದ್ಯಾರ್ಥಿಗಳು ಇದ್ದರು, ಉಪನ್ಯಾಸಕ ಪ್ರಜ್ವಲ್ ಚಂದ್ರಗುತ್ತಿ ಕಾರ್ಯಕ್ರಮ ನಿರೂಪಿಸಿ, ಎಂ.ಕೆ. ಮಂಜಪ್ಪ ವಂದಿಸಿದರು.
(ವರದಿ: ಮಧುರಾಮ್, ಸೊರಬ)
Indian Railways Boosts Nepal Border Connectivity With ₹730 Crore Bahraich Rail Project
Kalpa Media House | Bahraich(Uttar Pradesh) | Indian Railways : Uttar Pradesh Chief Minister Yogi Adityanath, along with Union Minister...
Read moreDetails






