ಸಾಧಿಸಿದರೆ ಸಬಲವನ್ನೂ ನುಂಗಬಹುದು ಎಂಬ ಉಕ್ತಿಯಂತೆ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಾ ತಾನು ಜನಿಸಿರುವಾಗ, ಯಾರು ಈಕೆ ಒಂದು ಹೆಣ್ಣೆಂದು ಕೀಳಾಗಿ ಕಂಡಿದ್ದಾರೆಯೋ…. ಅಂಥವರ ಮುಂದೆ ಇಂದು ಗಂಡಿಗಿಂತ ಯಾವುದೇ ರೀತಿಯಲ್ಲೂ ಕಡಿಮೆ ಇಲ್ಲ ಎಂಬುದನ್ನು ತೋರಿಸಿಕೊಟ್ಟು, ಇಂದು ಸಾಧನೆಯ ಹಾದಿಯಲ್ಲಿ ಸಾಗುತ್ತಿರುವವರು ನಮ್ಮ ಪುನರೂರಿನ ಕುಮಾರಿ ಶ್ರೀಲತಾ ಎಸ್. ತಂತ್ರಿ.
ಹೌದು, ಹೆಣ್ಣು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎಂಬಂತೆ, ಇವರನ್ನು ಕೀಳೆಂದು ಕಂಡ ಸಮಾಜದಲ್ಲಿ ಒಬ್ಬ ಮಾದರಿ ಹೆಣ್ಣಾಗಿ ಕಾಣಬೇಕೆಂಬ ಹಂಬಲದೊಂದಿಗೆ ಸಾಧನೆಯ ಹಾದಿಯಲ್ಲಿದ್ದಾರೆ ಈಕೆ.
ನೃತ್ಯ ಪ್ರಕಾರಗಳ ಆಗರ
ಮನೆಯೇ ಮೊದಲ ಪಾಠಶಾಲೆ-ಜನನಿ ತಾನೆ ಮೊದಲ ಗುರು ಎಂಬಂತೆ ತಾನು ಎರಡು ವರ್ಷದವಳಿದ್ದಾಗ ತನಗೆ ತಾಯಿಯೇ ನೃತ್ಯ ಅಭ್ಯಾಸವನ್ನು ಕಲಿಸುತ್ತಾ ಮುಂದೆ ತಾನು ನಾಲ್ಕನೆಯ ತರಗತಿಯಲ್ಲಿರುವ ಸಂದರ್ಭದಲ್ಲಿ ಪುನರೂರಿನ ಡಮರು ನಾಟ್ಯಾಲಯದ ವಿದುಷಿ ಸುಜಾತ ಶ್ಯಾಮ್ ಸುಂದರ್ ಇವರಲ್ಲಿ ಶಿಷ್ಯೆಯಾಗಿ ಸೇರಿಕೊಂಡು ಭರತನಾಟ್ಯ, ಕೂಚುಪುಡಿ, ಮೋಹಿನಿಯಾಟ್ಟಂನಂತಹ ಇನ್ನೂ ಹಲವಾರು ನೃತ್ಯ ಪ್ರಕಾರಗಳನ್ನು ಕಲಿತರು.
ತನ್ನ ಪ್ರಾಥಮಿಕ ಶಿಕ್ಷಣವನ್ನು ಪುನರೂರಿನ ಭಾರತ ಮಾತಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಗಿಸಿದ ಈಕೆ, ಮುಂದಿನ ಪ್ರೌಢಶಿಕ್ಷಣವನ್ನು ಕಟೀಲಿನ ಶ್ರೀದುರ್ಗಾಪರಮೇಶ್ವರಿ ದೇವಳ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಕ್ರೀಡಾ ಚಟುವಟಿಕೆಯಲ್ಲಿದ್ದ ಆಸಕ್ತಿಯನ್ನು ಗಮನಿಸಿದ ಅಲ್ಲಿಯ ದೈಹಿಕ ಶಿಕ್ಷಕರಾಗಿದ್ದ ಶ್ರೀ ಪುಂಡರೀಕ ಕೊಟ್ಟಾರಿ ಅವರು ವಿಶೇಷ ತರಬೇತಿಯನ್ನು ನೀಡುತ್ತಾರೆ.
ಪ್ರತಿಭಾ ಚೇತನ
ನಂತರ ಕಬಡ್ಡಿ ಹಾಗೂ ಫುಟ್ಬಾಲ್ ಆಟಗಳಲ್ಲಿ ಉತ್ತಮ ಆಟಗಾರ್ತಿಯಾಗಿ ಮಿಂಚಿದ್ದಾರೆ. ಜೊತೆಗೆ ಪ್ರಾಥಮಿಕ ಶಿಕ್ಷಣದ ಸಂದರ್ಭದಲ್ಲಿ ನಡೆದ ಪ್ರತಿಭಾ ಕಾರಂಜಿಯಲ್ಲಿ ರಾಜ್ಯ ಮಟ್ಟಕ್ಕೆ ಹಾಗೂ ಪ್ರೌಢಶಾಲೆಯಲ್ಲಿ ಜಿಲ್ಲಾಮಟ್ಟದಲ್ಲಿ ಮಿಂಚಿರುತ್ತಾರೆ. ಇಷ್ಟು ಮಾತ್ರವಲ್ಲದೆ ಪ್ರಾಥಮಿಕ ಶಾಲೆಯಲ್ಲಿ ಉತ್ತಮ ಸಂಸದೀಯ ಪಟು ಎಂದೂ ಗುರುತಿಸಿಕೊಂಡಿರುತ್ತಾರೆ. ಅದೇ ರೀತಿ ಕಲಿಕೆಯಲ್ಲೂ ತಾನು ಯಾವುದೇ ರೀತಿಯಲ್ಲೂ ಕಡಿಮೆಯಿಲ್ಲವೆಂಬಂತೆ ಎಸ್’ಎಸ್’ಎಲ್’ಸಿಯಲ್ಲಿ ನಡೆದ ಅಂತಿಮ ಪರೀಕ್ಷೆಯಲ್ಲಿ ಶೇ.94ರಷ್ಟು ಅಂಕ ಪಡೆದು ಶಾಲೆಗೆ ಹಾಗೂ ಊರಿಗೆ ಕೀರ್ತಿ ತಂದ ಹೆಗ್ಗಳಿಕೆ ಇವರದು.
ಮುಂದೆ ವಿಜ್ಞಾನ ವಿಭಾಗವನ್ನು ಆಯ್ಕೆ ಮಾಡಿ ಕಟೀಲಿನ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುವ ಸಂದರ್ಭ ನಡೆದ ಬಾಲಕಿಯರ ಕಬ್ಬಡ್ಡಿ ಪಂದ್ಯಾಟದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಪ್ರಸ್ತುತ ಮುಲ್ಕಿಯ ವಿಜಯಾ ಕಾಲೇಜಿನಲ್ಲಿ ಬಿಎಸ್’ಸಿ ವ್ಯಾಸಾಂಗ ಮಾಡುತ್ತಿದ್ದು, ರಾಷ್ಟ್ರೀಯ ಸೇವಾ ಯೋಜನೆ(ಎನ್’ಎಸ್’ಎಸ್)ಯ ಸ್ವಯಂ ಸೇವಕಿಯಾಗಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ ನಡೆದ ನಾಯಕತ್ವ ಶಿಬಿರದಲ್ಲಿ ಹಾಗೂ ಧಾರವಾಡದಲ್ಲಿ ನಡೆದ National Integration Campನಲ್ಲಿ ಭಾಗವಹಿಸುವುದರ ಜೊತೆಗೆ ಇದುವರೆಗೆ ಢಮರು ನಾಟ್ಯಾಲಯದ ಮುಖೇನ ಹಲವಾರು ಕಡೆಗಳಲ್ಲಿ ನೃತ್ಯ ಪ್ರದರ್ಶನವನ್ನು ನೀಡಿದ್ದಾರೆ.
ಮಾತ್ರವಲ್ಲದೇ, ಅನೇಕ ಕಡೆಗಳಲ್ಲಿ ಭಾಷಣ ಸ್ಪರ್ಧೆ, ಪ್ರಬಂಧ ಸ್ಪರ್ಧೆಗಳಲ್ಲೂ ಬಹುಮಾನಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದು, ಹಲವು ಪ್ರಕಾರದ ನಾಟಕಗಳಲ್ಲಿ ಅಭಿನಯಿಸಿದ ಕೀರ್ತಿ ಇವರಿಗೆ ಸಲ್ಲುವಂತಹದ್ದು.
ಇಷ್ಟು ಮಾತ್ರವಲ್ಲದೇ ಪ್ರೌಢಶಾಲೆಯಲ್ಲಿ All Rounder ಹಾಗೂ Out Going Student ಪದವಿ ಪೂರ್ವ ಕಾಲೇಜಿನಲ್ಲಿ Best Out Going Student ಪ್ರಶಸ್ತಿಗೆ ಪಾತ್ರರಾಗಿರುವ ಇವರು ಏಕಪಾತ್ರಾಭಿನಯ, ನಿರೂಪಣೆ, ಚೆಸ್ ಆಟಗಳಲ್ಲಿ ಒಳ್ಳೆಯ ಅಭಿರುಚಿ ಹೊಂದಿದ್ದು, ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದೆ.
ಹೆಚ್ಚಿನ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಇವರಿಗೆ ಯಕ್ಷಗಾನದಲ್ಲಿ ಕುಣಿಯಬೇಕೆಂಬ ಹಂಬಲ ಮನದ್ದಲ್ಲಿ ತುಡಿಯುತ್ತಿತ್ತು. ತಮ್ಮ ಕಾಲೇಜು ವಾರ್ಷಿಕೋತ್ಸವ ಸಮಯದಲ್ಲಿ ಯಕ್ಷಗಾನಕ್ಕೆ ತಮ್ಮ ಹೆಸರು ನೋಂದಾಯಿಸಿದರು. ಯಕ್ಷಗಾನ ಅಭ್ಯಾಸ ಮಾಡದೇ ಇದ್ದರೂ ಇವರ ಹೆಜ್ಜೆಗಾರಿಕೆಯನ್ನು ಕಂಡು ಯಕ್ಷ ನಿರ್ದೇಶಕರಾಗಿದ್ದ ಕಟೀಲು ಮೇಳದ ಕಲಾವಿದರೂ ಹಾಗೂ ಯೋಗ ಶಿಕ್ಷಕರು ಆದ ಶ್ರೀ ಹರಿರಾಜ್ ಶೆಟ್ಟಿಗಾರ್ ಇವರು ಪ್ರಧಾನ ನಾಟ್ಯ ವೇಷವನ್ನೇ ಕೊಟ್ಟರು.
ಬೆಳೆಯೋ ಬಳ್ಳಿಗೆ ಆಸರೆ ಎಂಬಂತೆ ಈಕೆಯ ಈ ಎಲ್ಲಾ ಸಾಧನೆಗೆ ಬೆನ್ನೆಲುಬಾಗಿ ನಿಂತವರು ತಂದೆ ಶ್ರೀಪತಿ ತಂತ್ರಿ, ತಾಯಿ ಸುಧಾ ತಂತ್ರಿ, ಅಕ್ಕ ಶ್ರೀಕೃಪಾ ತಂತ್ರಿ ಹಾಗೂ ಎಲ್ಲಾ ಗುರುಗಳು.
ಹೆತ್ತವರಿಗೆ ಒಳ್ಳೆಯ ಮಗಳಾಗಿ, ಗುರುಗಳಿಗೆ ಉತ್ತಮ ಶಿಷ್ಯೆಯಾಗಿ, ಊರಿಗೆ ಹೆಮ್ಮೆಯ ಪ್ರಜೆಯಾಗಿರುವ ಸರಳ ಸಜ್ಜನಿಕೆಯೊಂದಿಗೆ ಎಲ್ಲರಲ್ಲೂ ನಗುಮೊಗದಿಂದ ಬೆರೆವ ತಮ್ಮ ಮುಂದಿನ ಬಾಳಲ್ಲಿ ಇನ್ನಷ್ಟೂ ಸಾಧನೆಯನ್ನ ಮಾಡುತ್ತಾ ಇನ್ನೂ ಹಲವಾರು ಪ್ರಶಸ್ತಿಗಳು ತಮ್ಮನ್ನು ಅರಸುತ್ತಾ ಬರಲೆಂದು ಆಶಿಸುತ್ತೇನೆ.
ಲೇಖನ: ಕಿರಣ್ ಶೆಟ್ಟಿ, ಅತ್ತೂರು
Discussion about this post