ಶಿವಮೊಗ್ಗ: ಹೆರಿಗೆಯಾದ ಮೂವತ್ತು ನಿಮಿಷದೊಳಗೆ ತಾಯಿ ಎದೆ ಹಾಲುಣಿಸುವುದನ್ನು ಮರೆಯಬಾರದು ಎಂದು ಸುಬ್ಬಯ್ಯ ದಂತ ವೈದ್ಯಕೀಯ ಮಹಾವಿದ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ವಿನಯ ಶ್ರೀನಿವಾಸ್ ಸಲಹೆ ನೀಡಿದರು.
ಸುಬ್ಬಯ್ಯ ವೈದ್ಯಕೀಯ ಆಸ್ಪತ್ರೆಯ ಮಕ್ಕಳ ವಿಭಾಗದ ವತಿಯಿಂದ ತುಂಗಾ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತಾಯಿಯ ಮೊದಲ ಆರು ದಿನಗಳವರೆಗೆ ದೊರೆಯುವ ಎದೆ ಹಾಲಿನಲ್ಲಿ ರೋಗ ನಿರೋಧಕ ಶಕ್ತಿಯ ಅಂಶವಿರುವ ಕೊಲಸ್ಟ್ರಮ್ ಇರುತ್ತದೆ. ತಾಯಿ ಮಗುವಿಗೆ ತಪ್ಪದೆ 4-6 ತಿಂಗಳವರೆಗೆ ಎದೆ ಹಾಲನ್ನಲ್ಲದೇ ಮತ್ತೇನನ್ನು ನೀಡಬಾರದು. ಆರು ತಿಂಗಳಾದ ಮಗುವಿಗೆ ತಾಯಿಯ ಹಾಲಿನ ಜೊತೆ ಪೂರಕ ಆಹಾರವನ್ನು ನಿಯಮಿತವಾಗಿ ನೀಡಿ ಅಪೌಷ್ಟಿಕತೆಯಿಂದ ಬಳಲುವುದನ್ನು ತಪ್ಪಿಸಬೇಕು. ಹುಟ್ಟಿ ಎರಡು ವರ್ಷ ಆಗುವವರೆಗೂ ಎದೆ ಹಾಲು ಕುಡಿಸುವುದನ್ನು ನಿಲ್ಲಿಸಬಾರದು ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತುಂಗಾ ನಗರ ಪ್ರಾಥಮಿಕ ಆರೋಗ್ಯ ಅಧಿಕಾರಿ ಡಾ.ಅಚ್ಯುತ್ ಸಾಗರ್ ಅವರು ಮಾತನಾಡಿ, ಎದೆ ಹಾಲುಣಿಸುವುದರಿಂದ ಅಸ್ತಮಾ, ಕಿವಿಯ ಸೋಂಕು, ರಕ್ತ ಕ್ಯಾನ್ಸರ್, ಟೈಪ್ 1 ಡಯಾಬಿಟಿಸ್’ನಂತಹ ಕಾಯಿಲೆಗಳಿಂದ ಸಂರಕ್ಷಿಸಬಹುದು. ನವಜಾತ ಶಿಶುವಿನ ಆರೋಗ್ಯ ಹಾಗೂ ಬೆಳವಣಿಗೆಯಲ್ಲಿ ಸ್ತನ್ಯಪಾನದ ರಕ್ಷಣೆ, ಪ್ರೋತ್ಸಾಹ ಮತ್ತು ಬೆಂಬಲಿಸುವ ಅಗತ್ಯ ತಾಯಿಯ ಅತಿ ಪ್ರಮುಖ ಕರ್ತವ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸುಬ್ಬಯ್ಯ ವೈದ್ಯಕೀಯ ಕಾಲೇಜಿನ ಶೈಕ್ಷಣಿಕ ನಿರ್ದೇಶಕ ಡಾ. ಆರ್.ಪಿ. ಪೈ, ಉಪಪ್ರಾಂಶುಪಾಲರಾದ ಡಾ. ಸಿ.ಎಂ. ಸಿದ್ಧಲಿಂಗಪ್ಪ, ಮಕ್ಕಳ ತಜ್ಞ ಡಾ.ವಿಕ್ರಮ್, ಡಾ. ವಿನಾಯಕ, ಜೀವ ರಸಾಯನ ಶಾಸ್ತ್ರ ವಿಭಾಗದ ಡಾ. ಶಿವಾನಂದ ನಾಯಕ್, ಡಾ.ದಿವಾಕರ್ ಹಾಗೂ ಇತರು ಉಪಸ್ಥಿತರಿದ್ದರು.
(ವರದಿ: ನಿರಂಜನಮೂರ್ತಿ)
Discussion about this post