ನವದೆಹಲಿ: 8 ವರ್ಷಗಳ ಹಿಂದೆ ತಾವೇ ಉದ್ಘಾಟಿಸಿದ್ದ ಸಿಬಿಐ ಕೇಂದ್ರ ಕಚೇರಿ ಕಟ್ಟಡದಲ್ಲಿ ಈಗ ತಾವೇ ಆರೋಪಿಯಾಗಿ, ರಾತ್ರಿಯಿಡೀ ಬಂಧಿತರಾಗಿ ವಿಚಾರಣೆ ಎದುರಿಸಿದ್ದಾರೆ ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ.
ಐಎನ್’ಎಕ್ಸ್ ಮೀಡಿಯಾ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ದಿನಗಳಿಂದ ನಡೆದ ಭಾರೀ ಹೈಡ್ರಾಮಾದ ನಡುವೆಯೇ, ನಿನ್ನೆ ರಾತ್ರಿ ಚಿದಂಬರಂ ಅವರನ್ನು ಬಂಧಿಸಿದ ಸಿಬಿಐ ಅಧಿಕಾರಿಗಳು ರಾತ್ರಿಯಿಡೀ ವಿಚಾರಣೆ ನಡೆಸಿದ್ದಾರೆ.
ಗಮನಿಸಬೇಕಾದ ವಿಚಾರವೆಂದರೆ, ಸೆಂಟ್ರಲ್ ದೆಹಲಿಯಲ್ಲಿರುವ ಸಿಬಿಐ ಕೇಂದ್ರ ಕಚೇರಿ ಸಂಕೀರ್ಣವನ್ನು 2011ರ ಜೂನ್ 30ರಂದು ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕೇಂದ್ರ ಗೃಹ ಸಚಿವರಾಗಿದ್ದ ಚಿದಂಬರಂ ಉದ್ಘಾಟಿಸಿದ್ದರು. ಅಂದು ಚಿದಂಬರಂ ಉದ್ಘಾಟಿಸಿದ ಸಿಬಿಐ ಕಚೇರಿಯ ಕಸ್ಟಡಿಯಲ್ಲಿಯೇ ರಾತ್ರಿ ಕಳೆದಿರುವ ಹಿನ್ನೆಲೆಯಲ್ಲಿ ಅಂದಿನ ವಿಡಿಯೋ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.















