ಗೌರಿಬಿದನೂರು: ಸಮಾಜದಲ್ಲಿನ ಸಾಧಕ ಭಾದಕಗಳನ್ನು ಅರಿತು ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವ ಮೂಲಕ ಎಲ್ಲರಲ್ಲಿಯೂ ಸಮಾನತೆಯನ್ನು ಕಾಯ್ದುಕೊಳ್ಳಬೇಕಾಗಿದೆ ಎಂದು ಉಧ್ಯಮಿ ಇ.ಎಸ್. ರಮೇಶ್ ಕುಮಾರ್ ತಿಳಿಸಿದರು.
ನಗರದಲ್ಲಿ ಉಜ್ಜೀವನ್ ಬ್ಯಾಂಕ್ ವತಿಯಿಂದ ಬುಧವಾರ ಆಯೋಜಿಸಿದ್ದ ವಿಶ್ವ ಹಿರಿಯ ನಾಗರೀಕ ದಿನಾಚರಣೆಯನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಹಿರಿಯ ನಾಗರೀಕರಿಗೆ ಸಮಾಜದ ಎಲ್ಲಾ ಕ್ಷೇತ್ರದಲ್ಲಿ ಸಮಾನತೆ ಹಾಗೂ ಮೀಸಲಾತಿ ನೀಡುವುದು ಅವಶ್ಯಕವಾಗಿದೆ. ಇದರಿಂದ ಹಿರಿಯರಿಗೆ ಗೌರವ ಸಲ್ಲಿಸುವುದು ಮತ್ತು ಅವರಿಂದ ಸೂಕ್ತ ಮಾರ್ಗದರ್ಶನ ಪಡೆಯಲು ಸಾಧ್ಯವಾಗುತ್ತದೆ. ಕುಟುಂಬ ನಿರ್ವಹಣೆಗೆ ಹಿರಿಯರ ಜವಾಬ್ದಾರಿಯುತ ಕಾರ್ಯ ಹಾಗೂ ಸಮಸ್ಯೆಗಳನ್ನು ನಿಭಾಯಿಸುವ ಸಮರ್ಥವಾದ ಶಕ್ತಿ ಇರುತ್ತದೆ ಎಂದು ಹೇಳಿದರು.
ಲಯನ್ಸ್ ಸಂಸ್ಥೆಯ ಅಧ್ಯಕ್ಷರಾದ ಪ್ರೊ.ಕೆ.ರಾಮಾಂಜನೇಯಲು ಮಾತನಾಡಿ, ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ಉಜ್ಜೀವನ್ ಬ್ಯಾಂಕ್’ನವರು ಮಾಡುತ್ತಿರುವುದು ನಿಜಕ್ಕೂ ಅರ್ಥಪೂರ್ಣವಾದ ಕಾರ್ಯಕ್ರಮವಾಗಿದೆ. ಇದರಿಂದ ಎಲ್ಲಾ ಹಿರಿಯ ಚೇತನಗಳನ್ನು ಗುರ್ತಿಸಿ ಅವರನ್ನು ಪ್ರೋತ್ಸಾಹಿಸುವ ಕಾರ್ಯ ಮಾಡಿದ್ದಾರೆ. ವಿವಿಧ ಬ್ಯಾಂಕ್’ಗಳು ಹಿರಿಯ ನಾಗರೀಕರಿಗಾಗಿ ವಿಶೇಷ ಸೌಲಭ್ಯಗಳನ್ನು ಒದಗಿಸಿವೆ. ಜೊತೆಗೆ ವಿವಿಧ ಕ್ಷೇತ್ರದಲ್ಲಿಯೂ ಕೂಡ ರಿಯಾಯ್ತಿ ಮತ್ತು ಮೀಸಲಾತಿ ಕೊಟ್ಟಿರುವುದು ಸಂತಸದ ವಿಚಾರವಾಗಿದೆ ಎಂದು ತಿಳಿಸಿದರು.
ಮಕ್ಕಳ ತಜ್ಞ ಡಾ.ಎಂ.ಎನ್. ರಾಜು ಮಾತನಾಡಿ, ಪ್ರತಿಯೊಬ್ಬರೂ ತಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳುವುದು ಸೂಕ್ತವಾಗಿದೆ. ಹದಿಹರೆಯದ ವಯಸ್ಸಿನಲ್ಲಿ ಯಾರ ಮೇಲೂ ಅವಲಂಭಿತರಾಗದೆ ನೆಮ್ಮದಿಯಿಂದ ಜೀವಿಸಿದಲ್ಲಿ ಸಾರ್ಥಕತೆಯನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಹಿರಿಯರಾದ ಕೆ.ಎಲ್. ಸುಬ್ಬರತ್ನಾ ಗುಪ್ತ, ಇಸ್ತೂರಿ ಸತೀಶ್, ದೇವರಾಜ್, ಪ್ರಭಾಕರ್, ಟಿ.ಸಿ. ದೊಡ್ಡೇಗೌಡ, ಕೃಷ್ಣಮೂರ್ತಿ, ಉಜ್ಜೀವನ್ ಬ್ಯಾಂಕ್’ನ ವ್ಯವಸ್ಥಾಪಕರಾದ ಉಮೇಶ್ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.
(ವರದಿ: ಬಿ.ಎಂ. ಅಜಯ್, ಗೌರಿಬಿದನೂರು)
Discussion about this post