ಬೆಂಗಳೂರು: ಶಿಕ್ಷಕರಾಗುವುದೆಂದರೆ ಅದೊಂದು ಪವಿತ್ರವಾದ ವೃತ್ತಿ ಕೈಗೊಂಡಂತೆ. ಆದರೆ ಈಗಿನ ವಿದ್ಯಮಾನ ನೋಡಿದರೆ ಅದು ಉಪಕಸುಬಾಗಿ ಸಮಾಜ ದ್ರೋಹ ಮಾಡುವವರೆ ಅಧಿಕವಾಗಿದ್ದಾರೆ. ಕೆಲವರ ಅಸಾಧು ನಡವಳಿಕೆಯಿಂದ ಶಿಕ್ಷಣ ಕ್ಷೇತಕ್ಕೆ ಕಪ್ಪುಚುಕ್ಕೆ ಬಿದ್ದಿದೆ. ಈ ಸನ್ನಿವೇಶ ಬದಲಾಗಬೇಕು ಎಂದು ಖ್ಯಾತ ಕವಿ ಎಚ್.ಎಸ್. ವೆಂಕಟೇಶ್ ಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.
ಬೆಂಗಳೂರಿನ ಬಸವನಗುಡಿ ಹನುಮಂತನಗರದ ಪ್ರಭಾತ್ ಕೆ.ಎಚ್. ಕಲಾಸೌಧದಲ್ಲಿ ಆಯೋಜಿಸಲಾಗಿದ್ದ ಚನ್ನಗಿರಿ ತಿರುಮಲ ರಾವ್ ಅವರು ಬರೆದಿರುವ ಪೆಗಾಸಸ್ ಕೃತಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಶಿಕ್ಷಣ ಕ್ಷೇತ್ರವೆಂದರೆ ಸಮಾಜದ ಸತ್ಪ್ರಜೆಗಳು ನಿರ್ಮಾಣವಾಗುವ ಮೂಲ ವೇದಿಕೆ. ಅಂತಹ ಕ್ಷೇತ್ರದಲ್ಕಿ ಸೇವೆ ಸಲ್ಲಿಸಿದ ತಿರುಮಲರಾವ್ ಅವರು ತಮ್ಮ ಒಡನಾಡಕ್ಕೆ ಬಂದ ವಿವಿಧ ವ್ಯಕ್ತಿಗಳ ಸಾಂಗತ್ಯವನ್ನು ಬಹಳ ಸ್ವಾರಸ್ಯ ಮತ್ತು ಆಸಕ್ತಿಯಿಂದ ನಿರೂಪಿಸಿದ್ದಾರೆ ಎಂದರು.
ಪೆಗಾಸಸ್ ಮೇಲ್ನೋಟಕ್ಕೆ ವಿಚಿತ್ರ ಶೀರ್ಷಿಕೆಯಂತೆ ಅನಿಸಿತು. ಗ್ರೀಕ್ ಹಿನ್ನೆಲೆಯಲ್ಲಿ ಹಾರುವ ಕುದುರೆಯ ಅರ್ಥಬರುವ ಪದ. ಇದು ಲೇಖಕರ ಊರ್ಧ್ವಮುಖಿತ್ವ ಸಂಕೇತವಾಗಿದೆ ಎಂದು ವಿವರಿಸಿದರು.
ಯುವಶ್ರೀ ಬೆಂಗಳೂರು ಸಂಸ್ಥೆಯ ಆಶ್ರಯದಲ್ಲಿ ನಡೆದ ಕಾರ್ಯಕ್ರಮ ಕ್ಕೆ ರಾಜ್ಯ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ನಿರ್ದೇಶಕಿ ಶ್ರೀಮತಿ ಎಚ್.ಎಸ್. ಜಾನಕಿ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷೆ ಶ್ರೀಮತಿ ವಸುಂಧರ ಭೂಪತಿ ಆಗಮಿಸಿದ್ದರು.
ಲೇಖಕ ಚನ್ನಗಿರಿ ತಿರುಮಲರಾವ್ ಅವರು ತಮ್ಮ ಬರೆಹಕ್ಕೆ ಸಿಕ್ಕ ಪ್ರೇರಣೆಯನ್ನು ಸ್ಮರಿಸಿದರು. ಶಿಕ್ಷಣ ಕ್ಷೇತ್ರದ ಅನುಭವಗಳನ್ನು ಮೂಲದ್ರವ್ಯವಾಗಿ ಬರೆದ ಪೆಗಾಸಸ್ ಒಂದು ಅಪರೂಪದ ಅನುಭವವನ್ನು ತಮಗೆ ನೀಡಿದೆ ಎಂದರು.
ಇದೇ ಸಂದರ್ಭದಲ್ಲಿ ಆಕಾಶವಾಣಿಯ ವಿಶ್ರಾಂತ ಬಾತ್ಮೀದಾರ ಮತ್ತು ಹಿರಿಯ ಪತ್ರಕರ್ತ ಶ್ರೀ ಎಸ್.ಕೆ. ಶೇಷಚಂದ್ರಿಕ ಮತ್ತು ಹಿರಿಯ ರಂಗಕರ್ಮಿ ಎಸ್.ಎಂ. ಶಾಮಸುಂದರ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಕೊನೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಿಂದ ಸಿಂಹಾಚಲಂ ಸಂಪಿಗೆ ಎಂಬ ನಾಟಕವನ್ನು ಯುವಶ್ರೀ ತಂಡದವರು ಪ್ರಸ್ತುತಪಡಿಸಿದರು.
ತಿರುಮಲರಾವ್ ಅವರ ಬಗ್ಗೆ:
ಚನ್ನಗಿರಿ ಶಾನುಭೋಗ್ ವೆಂಕಟರಾಯರ ದ್ವಿತೀಯ ಪುತ್ರರಾದ ಶ್ರೀ ಸಿ.ವಿ. ತಿರುಮಲರಾವ್ ಅವರು, ಶಿಕ್ಷಣ ಕ್ಷೇತ್ರದಲ್ಲಿ ಅಧಿಕಾರಿಗಳಾಗಿ ವಿವಿಧ ಹಂತದಲ್ಲಿ ಸೇವೆ ಸಲ್ಲಿಸಿ, ಕಾನೂನಿನ ಚೌಕಟ್ಟಿನೊಳಗೆ ಶಿಕ್ಷಣ ಹಾಗೂ ಸಮಾಜ ಸೇವೆ ಸಲ್ಲಿಸಿ ಜಂಟಿ ನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ.
(ವರದಿ: ಡಾ.ಸುಧೀಂದ್ರ)
ಸಿಂಹಾಚಲಂ ಸಂಪಿಗೆ ನಾಟಕದ ಕೆಲವು ಚಿತ್ರಗಳು
Discussion about this post