ಬೆಂಗಳೂರು: ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್’ರಾಜ್ ಇಲಾಖೆಯಲ್ಲಿ ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ನೌಕರರ ಪದೋನ್ನತಿ ಮತ್ತು ಜೇಷ್ಠತೆ, ಹಾಗೂ ಇನ್ನಿತರ ಎಲ್ಲಾ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಕಾಲಮಿತಿಯೊಳಗೆ ಕ್ರಮ ಕೈಗೊಳ್ಳುವಂತೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ನಾಗಲಾಂಬಿಕಾದೇವಿ ಅವರಿಗೆ ಸಚಿವ ಕೆ.ಎಸ್. ಈಶ್ವರಪ್ಪ ಸೂಚಿಸಿದರು.
ಇಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರ ಕೋರಿಕೆಯ ಮೇರೆಗೆ ವಿಧಾನಸೌಧದ ಸಭಾಂಗಣದಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಮಹತ್ವದ ನಿರ್ಣಯ ಕೈಗೊಳ್ಳಲಾಯಿತು. ಈ ಸಮಸ್ಯೆಗಳ ಇತ್ಯರ್ಥಪಡಿಸಲು ಸಂಬಂಧಿಸಿದ ಇಲಾಖೆಗಳ ವೃಂದ ಸಂಘಗಳ ಪದಾಧಿಕಾರಿಗಳನ್ನೊಳಗೊಂಡ ಸಮಿತಿಯನ್ನು ರಚಿಸುವಂತೆ ಹಾಗೂ 15 ದಿನಗಳ ಅವಧಿಯಲ್ಲಿ ಕೈಗೊಂಡ ನಿರ್ಧಾರಗಳ ಕುರಿತು ವಿಸ್ತೃತ ವರದಿ ನೀಡುವಂತೆ ಸೂಚಿಸಿದ ಅವರು, ನೀಡಿದ ವರದಿಯನ್ನಾಧರಿಸಿ, ಶೀಘ್ರದಲ್ಲಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಇಲಾಖೆಗೊಂದು ಆಯುಕ್ತಾಲಯ ರಚನೆ ಆಗಬೇಕು, ವೃಂದ ಮತ್ತು ನೇಮಕಾತಿ ನಿಯಮಾವಳಿಗಳ ತಿದ್ದುಪಡಿ, ಅಂಶದಾನ ಪಾವತಿ ಪದ್ದತಿ(ಡಿಆರ್’ಡಿಎಸ್)ಯನ್ನು ರದ್ದುಪಡಿಸಬೇಕು. ಪಿಡಿಒ ಹುದ್ದೆಯನ್ನು ಮೇಲ್ದರ್ಜೆಗೇರಿಸುವುದು ಪರಿಶೀಲಿಸಲು ಕ್ರಮ ಕೈಗೊಳ್ಳುವಂತೆ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದ ಸಚಿವರು, ನೌಕರರ ಮೇಲೆ ಆಗಾಗ್ಗೆ ನಡೆಯುತ್ತಿರುವ ಹಲ್ಲೆಯನ್ನು ನಿಯಂತ್ರಿಸಲು ಹಾಗೂ ತಪ್ಪಿತಸ್ತರ ವಿರುದ್ದ ಕಠಿಣ ಕ್ರಮಕ್ಕೆ ಸೂಚಿಸಿದರು.
ಇತ್ತೀಚೆಗೆ ರಾಜ್ಯದಲ್ಲಿ ಬಿದ್ದ ಮಳೆ ಹಾಗೂ ಪ್ರವಾಹ ಸಂದರ್ಭದಲ್ಲಿ ಸಮಯದ ಪರಿವೇ ಇಲ್ಲದೇ ಶ್ರಮಿಸಿದ ನೌಕರರ ಸೇವೆ ಹಾಗೂ ರಾಜ್ಯ ಸಂಘದಿಂದ ಸರ್ಕಾರಕ್ಕೆ ನೀಡಿದ ಅಮೂಲ್ಯ ಆರ್ಥಿಕ ನೆರವನ್ನು ಸ್ಮರಿಸಿಕೊಳ್ಳುವಂತಹದ್ದಾಗಿದೆ ಎಂದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ಮಾತನಾಡಿ, ರಾಜ್ಯ ಸರ್ಕಾರದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂತಹ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ಈ ನಿರ್ಣಯ ಇತರೆ ಇಲಾಖೆಗಳಲ್ಲಿನ ಸಮಸ್ಯೆಗಳ ಇತ್ಯರ್ಥಕ್ಕೆ ಮುನ್ನುಡಿಯಾಗಲಿದೆ. ಒಂದೇ ಇಲಾಖೆಯಲ್ಲಿನ ವಿವಿಧ ವೃಂದದಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರ ಪದೋನ್ನತಿಯಲ್ಲಿ ತಾರತಮ್ಯವಿದೆ. ಇದನ್ನು ಹೋಗಲಾಡಿಸಿ ಸರ್ವರಿಗೂ ಏಕರೀತಿಯಲ್ಲಿ ಅನ್ವಯವಾಗುವಂತೆ ವೃಂದ ಮತ್ತು ನೇಮಕಾತಿ ನಿಯಮಾವಳಿಯನ್ನು ಪರಿಷ್ಕರಿಸುವ ತುರ್ತು ಅಗತ್ಯವಿದೆ ಎಂದವರು ಅಭಿಪ್ರಾಯಪಟ್ಟರು. ಅಧ್ಯಕ್ಷರ ಕೋರಿಕೆಯನ್ನು ನಾಗಲಾಂಬಿಕಾದೇವಿ ಅವರು ಸಮ್ಮತಿಸಿದರು.
ಈಗಾಗಲೆ ಪಶುಸಂಗೋಪನೆ ಇಲಾಖೆಯ ನೌಕರರ ಸಮಸ್ಯೆಗಳ ಇತ್ಯರ್ಥಕ್ಕೆ ಸಂಬಂಧಿಸಿದ ಇಲಾಖೆಯ ಮುಖ್ಯಸ್ಥರುಗಳೊಂದಿಗೆ ಸಭೆ ನಡೆಸಿ, ಕೈಗೊಂಡ ನಿರ್ಣಯಗಳನ್ನು ಈಡೇರಿಸುವಂತೆ ಕೋರಿಕೆ ಸಲ್ಲಿಸಲಾಗಿದೆ. ಶೀಘ್ರದಲ್ಲಿ ಸಮಸ್ಯೆಗಳು ಇತ್ಯರ್ಥಗೊಳ್ಳುವ ಆಶಾಭಾವನೆ ತಮಗಿರುವುದಾಗಿ ತಿಳಿಸಿದರು.
ಸಭೆಯಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ನಾಗಲಾಂಬಿಕಾದೇವಿ, ಸಂಘದ ಕೋಶಾಧ್ಯಕ್ಷ ಶ್ರೀನಿವಾಸ್, ಗೌರವಾಧ್ಯಕ್ಷ ಶಿವರುದ್ರಯ್ಯ, ಇಲಾಖೆಯ ಜಂಟಿ ಕಾರ್ಯದರ್ಶಿ ಸಿದ್ದೇಶ್ ಪೋತಲಕಟ್ಟಿ, ಸರ್ಕಾರದ ಉಪಕಾರ್ಯದರ್ಶಿ ಅಪರ್ಣ ಮತ್ತು ಅಶ್ರಫ್ ಸೇರಿದಂತೆ ವೃಂದದ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
Discussion about this post