ಚಳ್ಳಕೆರೆ: ತಾಲೂಕು ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಪಿ. ಬೋರನಾಯಕ ಅವರನ್ನು ಆಯ್ಕೆ ಮಾಡಬೇಕು ಎಂದು ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡ ಎನ್.ಡಿ. ಸೂರಯ್ಯ ಮನವಿ ಮಾಡಿದರು.
ಚಿತ್ರದುರ್ಗ ರಸ್ತೆಯಲ್ಲಿರುವ ಪ್ರವಾಸಿ ಮಂದಿರದಲ್ಲಿ ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪ ಸಂಖ್ಯಾತ ಸಮುದಾಯದ ಬಿಜೆಪಿ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.
ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಮಂಡಲ ಅಧ್ಯಕ್ಷರ ಆಯ್ಕೆ ಕುರಿತ ಪಕ್ಷದಲ್ಲಿ ಸಮರ್ಥ ವ್ಯಕ್ತಿಯನ್ನು ಆಯ್ಕೆ ಮಾಡುವ ಅಗತ್ಯವಿದೆ. ಭಾರತೀಯ ಜನತಾ ಪಕ್ಷವನ್ನು ತಳಮಟ್ಟದಲ್ಲಿ ಬಲಪಡಿಸಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಎಲ್ಲಾ ಸಮುದಾಯಗಳನ್ನು ವಿಶ್ವಾಸಕ್ಕೆ ಪಡೆದು ಸಂಘಟನೆ ಮಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ತಾಲ್ಲೂಕಿನ ಎಲ್ಲಾ ಮತಕ್ಷೇತ್ರ, ಗ್ರಾಮ, ಹೋಬಳಿ ಮತ್ತು ನಗರ ಪ್ರದೇಶದಲ್ಲಿ ವರ್ಚಸ್ಸು ಹೊಂದಿರುವ ಪಿ. ಬೋರನಾಯಕ ಅವರನ್ನು ಮಂಡಲ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು ಎಂದವರು ತಿಳಿಸಿದರು.
ಬಿಜೆಪಿ ಮುಖಂಡ ದಿನೇಶ್ ರೆಡ್ಡಿ ಮಾತನಾಡಿ, ಚಳ್ಳಕೆರೆ ವಿಧಾನಸಭೆ ಕ್ಷೇತ್ರದಲ್ಲಿ 1980ರಿಂದಲೂ ಭಾರತೀಯ ಜನತಾ ಪಕ್ಷ ನಿಷ್ಟಾವಂತ ಕಾರ್ಯಕರ್ತರನ್ನು ಹೊಂದಿದೆ. ತಾಲ್ಲೂಕಿನಲ್ಲಿ ಪಕ್ಷಕ್ಕೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸುವ ನಾಯಕತ್ವದ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಭೆ ನಡೆಸಿ ಒಮ್ಮತದ ಅಭಿಪ್ರಾಯಕ್ಕೆ ಬರಲಾಗಿದ್ದು ತಾಲ್ಲೂಕಿನ ಎಲ್ಲಾ ಸಮುದಾಯಗಳ ಜೊತೆಗೆ ಉತ್ತಮ ಬಾಂಧವ್ಯ ಹೊಂದಿರುವ ಬೋರನಾಯಕ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಮುಖಂಡ ಹುಲಿಗೆಪ್ಪ ಮಾತನಾಡಿ, ಮುಂದಿನ ದಿನಗಳಲ್ಲಿ ಪಕ್ಷ ಅಧಿಕಾರ ಪಡೆಯಬೇಕಾದರೆ ಜನಸಾಮಾನ್ಯರು ಸೇರಿದಂತೆ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಪಕ್ಷ ಸಂಘಟಿಸುವ ನಾಯಕತ್ವದ ಅಗತ್ಯವಿದೆ. ಆದ್ದರಿಂದ ಪಕ್ಷದ ವರಿಷ್ಟರು ತಾಲ್ಲೂಕಿನಲ್ಲಿ ಹೆಚ್ಚಿನ ಜನಸಂಖ್ಯೆ ಹೊಂದಿರುವ ಪರಿಶಿಷ್ಟ ಪಂಗಡಕ್ಕೆ ಪ್ರಾತಿನಿಧ್ಯ ನೀಡಬೇಕು ಎಂದು ಮನವಿ ಮಾಡಿದರು.
ನಗರಸಭೆ ಸದಸ್ಯೆ ಪಾಲಮ್ಮ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಛಾ ಅಧ್ಯಕ್ಷ ರಂಗವ್ವನಹಳ್ಳಿ ನಾಗರಾಜ, ಜೆ.ಕೆ. ತಿಪ್ಪೇಶ್, ಈಶ್ವರ ನಾಯಕ, ನಾಗೇಶ್ ಇದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
Discussion about this post