ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಪೇಜಾವರ ಅಧೋಕ್ಷಜ ಮಠದ ಹಿರಿಯ ಯತಿ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಲು ವಿವಿಧ ಮಠಾಧೀಶರು ತಮ್ಮ ಶಿಷ್ಯವರ್ಗಕ್ಕೆ ಮತ್ತು ಅಭಿಮಾನಿಗಳಿಗೆ ಜಪ-ತಪ ಹಾಗೂ ಪಾರಾಯಣಗಳನ್ನು ಮಾಡಲು ಸೂಚಿಸಿದ್ದಾರೆ.
ಇಂದು ಬೆಳಗ್ಗೆ ಮಣಿಪಾಲ ಆಸ್ಪತ್ರೆಯಲ್ಲಿ ಪೇಜಾವರ ಶ್ರೀಗಳ ದರ್ಶನ ಪಡೆದ ಪುತ್ತಿಗೆ ಮಠಾಧೀಶರಾದ ಶ್ರೀಸುಗುಣೇಂದ್ರ ತೀರ್ಥರು, ಶೀಘ್ರ ಗುಣಮುಖರಾಗಲೆಂದು ಶ್ರೀ ಕೃಷ್ಣನಲ್ಲಿ ಪ್ರಾರ್ಥಿಸಿದ್ದಾಗಿ ತಿಳಿಸಿದ್ದಾರೆ.
ಪೇಜಾವರ ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿರುವ ತಜ್ಞ ವೈದ್ಯರನ್ನೂ ಭೇಟಿ ಮಾಡಿದ ಅವರು, ಚಿಕಿತ್ಸೆಗೆ ಶ್ರೀಗಳು ಸ್ಪಂದಿಸುತ್ತಿರುವ ಬಗ್ಗೆ ಮಾಹಿತಿ ಪಡೆದಿದ್ದಾರೆ. ವೇದ ಮತ್ತು ಶಾಸಗಳ ಅಧ್ಯಯನ, ಪಾಠ-ಪ್ರವಚನ ಸೇರಿ ಸಮಸ್ತ ಹಿಂದು ಸಮಾಜದ ಸಂಘಟನೆಗೆ ಜೀವನ ಮುಡಿಪಾಗಿಟ್ಟ ಪೇಜಾವರ ಶ್ರೀಗಳು ಬೇಗ ಗುಣಮುಖರಾಗಬೇಕೆಂದು ತಾವು ಶ್ರೀ ಕೃಷ್ಣಮಂತ್ರ ಜಪ ಮತ್ತು ಪುನಶ್ಚರಣ ಮಾಡಲು ಆರಂಭಿಸಿದ್ದಾಗಿ ತಿಳಿಸಿದ್ದಾರೆ.
ಭಕ್ತರೆಲ್ಲರೂ ತಾವು ಇದ್ದ ಸ್ಥಳದಲ್ಲೇ ಶ್ರೀ ಕೃಷ್ಣಮಂತ್ರ ಜಪ ಮಾಡುತ್ತಾ ಶ್ರೀಗಳ ಆರೋಗ್ಯಕ್ಕೆ ಪ್ರಾರ್ಥಿಸಲು ಕರೆ ನೀಡಿದ್ದಾರೆ.
ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥರು ಸಂದೇಶ ನೀಡಿದ್ದು, ಪೇಜಾವರ ಶ್ರೀಗಳ ಆರೋಗ್ಯ ಸುಧಾರಿಸಲಿ ಎಂದು ತಮ್ಮ ಉಪಾಸ್ಯಮೂರ್ತಿ ಶ್ರೀಮೂಲ ರಾಮಚಂದ್ರ ದೇವರಿಗೆ ಪ್ರಾರ್ಥಿಸಿ, ವಿಶೇಷ ಪೂಜೆ ಸಮರ್ಪಿಸಿದ್ದಾರೆ.
ನೂರಾರು ವಿದ್ವಾಂಸರನ್ನು ಸಮಾಜಕ್ಕೆ ನೀಡಿದ ದೊಡ್ಡ ತಪಸ್ವಿಗಳಾದ ಪೇಜಾವರ ಶ್ರೀಗಳು ಹಿಂದೂ ಸಮಾಜದ ಸಮಗ್ರ ನಾಯಕತ್ವ ವಹಿಸಿದ ಪೂಜ್ಯರು. ಮಾಧ್ವ ಸಮಾಜದ ಹಿರಿಯ ಯತಿಗಳಾದ ಅವರು ಬೇಗ ಗುಣಮುಖರಾಗಿ ಮೂಲ ರಾಮಾಯಣ, ಮಹಾಭಾರತ ತಾತ್ಪರ್ಯ ನಿಯರ್ಣಯ, ಸುಧಾಧಿ ಗ್ರಂಥಗಳ ಪಾಠ ಪ್ರವಚನವನ್ನು ವೈಭವದಿಂದ ನೆರವೇರಿಸುವಂತಾಗಲಿ ಎಂದವರು ಹಾರೈಸಿದ್ದಾರೆ.
ಭಕ್ತರು ಮತ್ತು ವಿದ್ವಾಂಸರು ಈ ಕ್ಷಣದಿಂದಲೇ ಸುಂದರಕಾಂಡ ಪಾರಾಯಣ, ಧನ್ವಂತರಿ ಜಪ, ಮನ್ಯುಸೂಕ್ತ ಪಾರಾಯಣ, ಜಪಾದಿಗಳನ್ನು ಮಾಡಿ ಪೇಜಾವರ ಶ್ರೀಗಳ ಕ್ಷೇಮಕ್ಕಾಗಿ ಪ್ರಾರ್ಥಿಸಬೇಕು ಎಂದು ಆದೇಶಿಸಿದ್ದಾರೆ.
Get in Touch With Us info@kalpa.news Whatsapp: 9481252093
Discussion about this post