ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಮೊಬೈಲ್, ಇಂಟರ್’ನೆಟ್, ಫೇಸ್’ಬುಕ್, ವಾಟ್ಸಪ್ ಸೇರಿದಂತೆ ತಂತ್ರಜ್ಞಾನದ ಮಾಯೆಯೇ ಇಂದಿನ ಮಕ್ಕಳಲ್ಲಿ ಆವರಿಸಿಕೊಂಡಿರುವ ಸಂದರ್ಭದಲ್ಲಿ ಇವೆಲ್ಲಕ್ಕೂ ಅಪವಾದ ಎಂಬಂತೆ ದೇಶಭಕ್ತಿ, ಕಲೆಯನ್ನೇ ಉಸಿರಾಗಿಸಿಕೊಂಡ ಹಾರಿಕಾ ಮಂಜುನಾಥ್ ಎಂಬ ಬಾಲೆ ಇಂದಿನ ಲೇಖನದ ಕೇಂದ್ರ ಬಿಂದು.
ಬೆಂಗಳೂರಿನ ಜೆಪಿ ನಗರದ ನಿವಾಸಿ ಆಟೋ ಚಾಲಕರಾಗಿರುವ ಮಂಜುನಾಥ್ ಹಾಗೂ ಗೃಹಿಣಿ ರುಕ್ಮಿಣಿ ದಂಪತಿಗಳ ಪುತ್ರಿ ಹಾರಿಕಾ, ವಿದ್ಯಾಕಿರಣ ಪಬ್ಲಿಕ್ ಶಾಲೆಯಲ್ಲಿ 8ನೆಯ ತರಗತಿಯಲ್ಲಿ ಓದುತ್ತಿದ್ದಾಳೆ.
ಈಕೆ ಐದು ವರ್ಷದವಳಿರುವಾಗಲೇ ರಾಜೀವ್ ದೀಕ್ಷಿತ್ ಸೇರಿದಂತೆ ಹಲವು ರಾಷ್ಟ್ರ ನಾಯಕರ ಭಾಷಣಗಳನ್ನು ಗಮನವಿಟ್ಟು ಆಲಿಸುತ್ತಿದ್ದಳು. ಜೊತೆಯಲ್ಲಿ ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸ, ಸೋದರಿ ನಿವೇದಿತಾ ಅವರಂತಹವರ ಭಾವಚಿತ್ರಗಳನ್ನು ತದೇಕಚಿತ್ತದಿಂದ ನೋಡುತ್ತಿದ್ದಳು. ಇದನ್ನು ಗಮನಿಸಿದ ಇವಳ ಪೋಷಕರು ಈಕೆಯ ಆಸಕ್ತಿಗೆ ನೀರೆರೆದು ಪೋಷಿಸಲು ಆರಂಭಿಸಿದರು.
5ನೆಯ ತರಗತಿಯಲ್ಲಿದ್ದಾಗ ಸುಮ್ಮನೆ ಸ್ವಾತಂತ್ರ ಬರಲಿಲ್ಲ ಎಂಬ ವಿಚಾರದ ಬಗ್ಗೆ ಈಕೆ ಮಾತನಾಡಿದ ನಂತರ ಇವಳ ಪ್ರತಿಭೆಯ ತಾಕತ್ತು ಅನಾವರಣಗೊಂಡಿತ್ತು. ಇದನ್ನು ಗಮನಿಸಿದ ರಾಮಕೃಷ್ಣಾಶ್ರಮದ ಮಂಗಳಾನಂದರು, ತುಮಕೂರಿನ ವೀರೇಶಾನಂದರು ಹಾಗೂ ಧಾರವಾಡದ ವಿಜಯಾನಂದ ಸರಸ್ವತಿ ಸ್ವಾಮಿಗಳು ಈಕೆಗೆ ಸೂಕ್ತ ಮಾರ್ಗದರ್ಶನ ನೀಡಿದರು.
ಅಲ್ಲಿಂದ ಆರಂಭವಾದ ಈಕೆಯ ಭಾಷಣದ ಪಯಣ, ಶಿವಮೊಗ್ಗ, ಕೊಪ್ಪಳ, ಹಾಸನ, ದೊಡ್ಡಬಳ್ಳಾಪುರ, ಯಾದಗಿರಿ, ಕುಂದಾಪುರ, ಬಾಗಲಕೋಟೆ, ರಾಮದುರ್ಗ, ಬೆಳಗಾವಿ, ಧಾರವಾಡಗಳಲ್ಲಿ ಸಾಗಿದ್ದು, ಶಿವರಾತ್ರಿಯ ಅಂಗವಾಗಿ ಭದ್ರಾವತಿಯಲ್ಲಿನ ಕಾರ್ಯಕ್ರಮಕ್ಕೆ ಫೆ.21ರಂದು ಆಗಮಿಸುತ್ತಿದ್ದಾಳೆ.
ಈವರೆಗೂ ಸುಮಾರು 200 ಶಾಲಾ ಕಾರ್ಯಕ್ರಮ ಹಾಗೂ 100ಕ್ಕೂ ಅಧಿಕ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಮಾತನಾಡಿ, ದೇಶ ಭಕ್ತರ ಮನಗೆದ್ದಿದ್ದಾಳೆ.
2016ರಲ್ಲಿ ನೋಟು ರದ್ದತಿಯಾದ ನಂತರ ಕೇಂದ್ರ ಸರ್ಕಾರ ಕ್ಯಾಶ್’ಲೆಸ್ ವ್ಯವಹಾರಕ್ಕೆ ಆದ್ಯತೆ ನೀಡಿ, ಪ್ರೋತ್ಸಾಹ ನೀಡಿತು. ನೋಟು ರದ್ದತಿಯಿಂದ ಜನಸಾಮಾನ್ಯರಿಗೆ ಕೊಂಚ ತೊಂದರೆಯೂ ಸಹ ಆಗಿತ್ತು. ಈ ವೇಳೆ ಯುಪಿಐ ಆಪ್ ಮೂಲಕ ಅಂದರೆ ಡಿಜಿಟಲ್ ವ್ಯವಹಾರ ಹಾಗೂ ಅದರ ಉಪಯೋಗ ಕುರಿತಾಗಿ ಬೀದಿ ಬದಿ ವ್ಯಾಪಾರಿಗಳಿಗೆ, ಆಟೋ ಚಾಲಕರಿಗೆ ಹಾಗೂ ಸಣ್ಣ ವ್ಯಾಪಾರಸ್ತರ ಬಳಿ ತೆರಳಿ ಜಾಗೃತಿ ಮೂಡಿಸುವ ಕೆಲಸ ಮಾಡಿದಳು. ಈ ವೇಳೆ ಕ್ಯಾಶ್’ಲೆಸ್ ಕುರಿತಾಗಿ ಜಾಗೃತಿ ಮೂಡಿಸಿದ ಈಕೆಯ ಸಾಧನೆ ಕೇಂದ್ರ ಸರ್ಕಾರವನ್ನು ತಲುಪಿತು. ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಈಕೆಯ ಸಾಧನೆಯನ್ನು ಕೊಂಡಾಡಿ ಟ್ವೀಟ್ ಮಾಡಿದ ನಂತರ ಹಾರಿಕಾ ದೇಶಕ್ಕೇ ಪರಿಚಯಗೊಂಡಳು.
ಇನ್ನು, ಹಾರಿಕಾಳ ಸಾಧನೆಯನ್ನು ಗಮನಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ವತಃ ಈಕೆಯನ್ನು ಭೇಟಿಯಾಗಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಯುವ ವಾಗ್ಮಿಯಾಗಿರುವ ಈಕೆ, ನಾಟಕ, ಭರತನಾಟ್ಯ ಕಲಾವಿದೆಯಾಗಿ ಗುರುತಿಸಿಕೊಂಡಿರುವ ಜೊತೆಯಲ್ಲಿ ಖ್ಯಾತ ಯೋಗಪಟುವೂ ಸಹ ಆಗಿದ್ದಾಳೆ. ಈಕೆ ಚನ್ನಪಟ್ಟಣದ ಯೋಗ ಗುರುಗಳಾದ ಸಮೀಕ್ಷಾ ಅವರಲ್ಲಿ ಯೋಗ ತರಬೇತಿ ಪಡೆದಿದ್ದಾರೆ. ಇವೆಲ್ಲ ಪ್ರತಿಭೆಗಳೊಂದಿಗೆ ಶಾಲೆಯಲ್ಲೂ ಸಹ ಈಕೆ ಓದಿನಲ್ಲಿ ಮುಂದಿದ್ದು, ಮುಂದೆ ಐಎಎಸ್ ಅಧಿಕಾರಿಯಾಗಿ ದೇಶ ಸೇವೆ ಮಾಡುವ ಹಂಬಲ ಹೊಂದಿದ್ದಾಳೆ.
ಬೆಳಗಾವಿ ನೆರೆ ಪ್ರವಾಹ ಸಂದರ್ಭದಲ್ಲಿ ವಸ್ತುಗಳನ್ನು 2 ಲಾರಿಯಲ್ಲಿ ಬೆಂಗಳೂರಿನಿಂದ ಬೆಳಗಾವಿಗೆ ಹೋಗಿ ತಲುಪಿಸಿ ಮೂರು ದಿನಗಳ ಕಾಲ ಅಲ್ಲಿ ಇದು ಕೆಲಸ ಮಾಡಿದ್ದಾಳೆ ಈ ಸೋದರಿ.
ಮಂಗಳೂರಿನ ಜಪ್ಪಿನಮೊಗರು ನಿವಾಸಿ ಆಟೋ ಚಾಲಕ ಸುರೇಶ್ ಬಂಗೇರ ಅವರ ಎಂಟು ವರ್ಷದ ಪುತ್ರಿ ಮನ್ವಿತಾಗೆ ಕಿಡ್ನಿ ವೈಫಲ್ಯಗೊಂಡು ಚಿಕಿತ್ಸೆ ಅಗತ್ಯವಾಗಿತ್ತು. ಈ ವಿಚಾರ ತಿಳಿದ ಹಾರಿಕಾ ತನಗೆ ಗೌರವಧನದ ರೂಪದಲ್ಲಿ ಬಂದಿದ್ದ 5000 ಸಾವಿರ ರೂ.ಗಳನ್ನು ಚಿಕಿತ್ಸೆಗಾಗಿ ಕಳುಹಿಸಿಕೊಟ್ಟಿದ್ದಳು.
ಕನ್ನಡ, ಇಂಗ್ಲೀಷ್, ಮರಾಠಿ ಪತ್ರಿಕೆಗಳಲ್ಲಿ ಈಕೆಯ ಸಾಧನೆ ಕುರಿತು ಲೇಖನಗಳು ಪ್ರಕಟವಾಗಿದ್ದು, ಹಲವು ದೃಶ್ಯ ಮಾಧ್ಯಮಗಳಲ್ಲಿ ಇವರ ಸಂದರ್ಶನವೂ ಸಹ ಬಿತ್ತರಗೊಂಡಿದೆ.
ಈಕೆಯ ಸಾಧನೆ ಗುರುತಿಸಿ ಯುವ ಸಾಮ್ರಾಜ್ಯ ತಂಡದಿಂದ ಯುವ ನಕ್ಷತ್ರ ಹಾಗೂ ಮಠದಿಂದ ವರ್ತೂರ ಶ್ರೀ ಪ್ರಶಸ್ತಿ ಎಂಬ ಬಿರುದನ್ನು ನೀಡಿ ಗೌರವಿಸಲಾಗಿದೆ.
ಈಕೆಯ ದೇಶ ಭಕ್ತಿ, ಜ್ಞಾನ ಸಂಪತ್ತು, ವಾಕ್ಛಾತುರ್ಯ ಹಾಗೂ ಸಮಾಜ ಸೇವೆಯ ಗುಣ ಕೇವಲ ಮಕ್ಕಳಿಗೆ ಮಾತ್ರವಲ್ಲ ಇಡಿಯ ದೇಶಕ್ಕೇ ಮಾದರಿಯಾಗಿದೆ. ಹಾರಿಕಾಳ ಸೇವಾ ಕಾರ್ಯ, ಸಾಧನೆ ಮುಗಿಲೆತ್ತರಕ್ಕೆ ಹಾರಲಿ, ಈಕೆ ಕನಸು ಕಂಡಂತೆ ಐಎಎಸ್ ಅಧಿಕಾರಿಯಾಗಿ ದೇಶ ಸೇವೆ ಮಾಡುವಂತಾಗಲಿ ಎಂದು ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಹಾರೈಸುತ್ತದೆ.
ಲೇಖನ: ಎಸ್.ಆರ್. ಅನಿರುದ್ಧ ವಸಿಷ್ಠ
Get in Touch With Us info@kalpa.news Whatsapp: 9481252093
Discussion about this post