ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಕೃಷಿ ವಿಶ್ವವಿದ್ಯಾಲಯಗಳು ಕೃಷಿ ಇಲಾಖೆಗೆ ತಾಯಿ ಇದ್ದಂತೆ. ಕೃಷಿ ವಿಶ್ವವಿದ್ಯಾಲಯಗಳು ರೈತರಿಗೆ ಬಹಳ ಹತ್ತಿರವಾಗಬೇಕು. ಕೃಷಿ ಇಲಾಖೆಗೆ ವಿಶ್ವವಿದ್ಯಾಲಯಗಳು ಮಾರ್ಗದರ್ಶಿಯಾಗಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.
ವಿಕಾಸಸೌಧದಲ್ಲಿ ಸಚಿವರಾದ ಬಳಿಕ ಮೊದಲ ಕೃಷಿ ವಿಶ್ವವಿದ್ಯಾಲಯಗಳ ಸಮನ್ವಯ ಸಮಿತಿ ಸಭೆ ನಡೆಸಿ ಅವರು ಮಾತನಾಡಿದರು.
ಸಭೆಗಳು ಹಾಗೂ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳು ಸೂಚನೆಗಳು ಬರೀ ಕಡತದಲ್ಲಿ ಕಿರುಪುಸ್ತಕದಲ್ಲಷ್ಟೇ ಉಳಿಯದೇ ಕಾರ್ಯರೂಪಕ್ಕೆ ಬರಬೇಕು. ಟಿಎ ಡಿಎ ಸಮಯವ್ಯರ್ಥಕ್ಕಾಗಿ ಸಭೆಗಳನ್ನು ಮಾಡದೇ ರೈತರಿಗೆ ಅನುಕೂಲ ಕಲ್ಪಿಸಲು ಹಾಗೂ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಗೆ ಕೃಷಿಯತ್ತ ಹೊಸ ಕಲಿಕೆಗೆ ಅವಕಾಶ ಮಾಡಿಕೊಡುವಲ್ಲಿ ಉಪಯೋಗವಾಗಬೇಕು. ವಿಶ್ವವಿದ್ಯಾಲಯಗಳಲ್ಲಿ ಹೊಸತನ್ನು ಕಲಿಯಲು ಮತ್ತು ಕಲಿಸಲು ರೈತರಿಗೆ ಎಲ್ಲಾ ರೀತಿಯಲ್ಲಿ ಅನುಕೂಲ ಕಲ್ಪಿಸುವಂತಹ ಹೊಸ ಸಂಶೋಧನೆಗಳು, ತಳಿಗಳನ್ನು ಕಂಡುಹಿಡಿಯಬೇಕು ಎಂದು ಸಭೆಯಲ್ಲಿ ಸಚಿವರು ನಿರ್ದೇಶಿಸಿದರು.
ಯಾವ ಕಾಯಿಲೆಗೆ ಯಾವ ಮದ್ದು ಎನ್ನುವುದು ವೈದ್ಯರಿಗೆ ಹೇಗೆ ತಿಳಿದಿರುತ್ತದೆಯೋ ಅದೇ ರೀತಿ ರೈತರ ಬೆಳೆಯ ಸಮಸ್ಯೆ ಗಳಿಗೆ ಕೃಷಿ ವಿಶ್ವವಿದ್ಯಾಲಯಗಳು ಪರಿಹಾರ ಸೂಚಿಸಬೇಕು. ಪ್ರತಿಯೊಬ್ಬ ಪ್ರೊಫೆಸರ್ ನ್ನು ಫೀಲ್ಡ್ ಗೆ ಕಳುಹಿಸಬೇಕು. ಹಿಂದಿನ ಕಾಲದ ಬೇಸಾಯದ ಪದ್ಧತಿಗೂ ಈಗಿನ ಪದ್ಧತಿಗೂ ಬಹಳಷ್ಟು ವ್ಯತ್ಯಾಸಗಳಿವೆ. ಕಾಲಕ್ಕೆ ತಕ್ಕ ಬೆಳೆ ತಂತ್ರಜ್ಞಾನದ ಬಳಕೆ ಸಂಶೋಧನೆ ಬಗ್ಗೆ ವಿದ್ಯಾರ್ಥಿಗಳಿಗೆ ರೈತರಿಗೆ ನೇರವಾಗಿ ಮಾಹಿತಿ ಹೋಗುವಂತೆ ನೋಡಿಕೊಳ್ಳಬೇಕು. ವಿದ್ಯಾರ್ಥಿಗಳನ್ನು ಪ್ರೊಫೆಸರ್ ಗಳನ್ನು ಹೊಸಹೊಸ ಸಂಶೋಧನೆ ತಳಿಗಳು ವಿಶ್ವವಿದ್ಯಾಲಯದ ಸಾಧನೆಗಳನ್ನು ಪ್ರಚುರಪಡಿಸಲು ಸಹಕರಿಸುವಂತೆ ನೋಡಿಕೊಳ್ಳಬೇಕು ಎಂದು ಸಚಿವರು ಸಭೆಯಲ್ಲಿ ತಿಳಿಸಿದರು.
ವಿಶ್ವವಿದ್ಯಾಲಯಗಳಲ್ಲಿ ಹೊಸಹೊಸ ತಳಿಗಳ ಸಂಶೋಧನೆ ಹೆಚ್ಚೆಚ್ಚು ನಡೆಯಬೇಕು. ವಿಶ್ವವಿದ್ಯಾಲಯಗಳ ಸಾಧನೆ ಸಂಶೋಧನೆಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚುರಪಡಿಸಬೇಕು. ಸಭೆಗೆ ಯಾವುದೇ ಅಧಿಕಾರಿಗಳಾಗಲೀ ಕುಲಪತಿ ನಿರ್ದೇಶಕರಾಗಲೀ ಯಾರೇ ಆಗಲೀ ಪೂರ್ವಮಾಹಿತಿ ದಾಖಲೆಯಿಲ್ಲದೇ ಬರಬಾರದು. ಕೃಷಿ ವಿಶ್ವವಿದ್ಯಾಲಯಗಳು ಹಾಗೂ ಕೃಷಿ ಇಲಾಖೆ ನಡುವೆ ಎಂದಿಗೂ ಸಮನ್ವಯದ ಕೊರತೆಯಾಗದಂತೆ ನೋಡಿಕೊಳ್ಳಬೇಕು. ರೈತರ ಜೊತೆ ಸಂವಾದ ಮಾಡುವ ಮೂಲಕ ರೈತರ ಸಮಸ್ಯೆಗಳನ್ನು ಹತ್ತಿರದಿಂದ ಅರಿತು ಅವುಗಳ ಪರಿಹಾರಕ್ಕೆ ಕ್ರಮವಹಿಸಬೇಕು ಎಂದು ಸೂಚಿಸಿದರು.
ಇನ್ನು ಮುಂದೆ ಪ್ರತಿ ತಿಂಗಳಿಗೊಮ್ಮೆ ಸಮನ್ವಯ ಸಮಿತಿ ಸಭೆ ನಡೆಸಲಾಗುವುದು. ಮೇಲಿಂದ ಮೇಲೆ ಸಭೆಗಳನ್ನು ನಡೆಸುವುದರಿಂದ ವಿಷಯಗಳ ಮಾಹಿತಿಯ ವಿನಿಮಯ ಕೆಲಸದ ಪ್ರಗತಿ ಬಗ್ಗೆ ಅರಿಯಲು ಹಾಗೂ ರೈತರಿಗಾಗಿ ಇನ್ನಷ್ಟು ದುಡಿಯಲು ಸಾಧ್ಯವಾಗುತ್ತದೆ ಎಂದರು.
ಸಭೆಯಲ್ಲಿ ರಾಜ್ಯದ ಎಲ್ಲಾ ಕೃಷಿ ವಿಶ್ವವಿದ್ಯಾಲಯಗಳ ಉಪಕುಲಪತಿಗಳು, ಇಲಾಖೆಯ ಸರ್ಕಾರದ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯ ಸೇರಿದಂತೆ ಮತ್ತಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.
(ವರದಿ: ಕೃಷಿ ಸಚಿವರ ಮಾಧ್ಯಮ ಕಾರ್ಯದರ್ಶಿ)
Get in Touch With Us info@kalpa.news Whatsapp: 9481252093
Discussion about this post