ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನೆಲಗುಳಿ: ನಿನ್ನೆ ನಿಧನರಾದ ಸ್ಯಾಂಡಲ್’ವುಡ್ ನಟ ಚಿರಂಜೀವಿ ಸರ್ಜಾ ಅವರ ಅಂತ್ಯಸಂಸ್ಕಾರ ಅವರ ಸಹೋದರ ಧ್ರುವ ಸರ್ಜಾ ಅವರ ನೆಲಗುಳಿಯ ಫಾರಂ ಹೌಸ್’ನಲ್ಲಿ ನಡೆಯಿತು.
ಬಸವನಗುಡಿಯ ತ್ಯಾಗರಾಜನಗರದಲ್ಲಿರುವ ಚಿರು ಸರ್ಜಾ ಅವರ ನಿವಾಸದಿಂದ ಮಧ್ಯಾಹ್ನ ಆರಂಭವಾದ ಅಂತಿಮ ಯಾತ್ರೆ, 3.30ರ ವೇಳೆಗೆ ನೆಲಗುಳಿಯ ಫಾರಂ ಹೌಸ್ ತಲುಪಿತು. ದಾರಿಯುದ್ದಕ್ಕೂ ನೆರೆದಿದ್ದ ಸಾವಿರಾರು ಮಂದಿ ತಮ್ಮ ನೆಚ್ಚಿನ ನಟನ ಅಂತಿಮ ದರ್ಶನ ಪಡೆದರು.
5 ಗಂಟೆ ವೇಳೆಗೆ ನೆಲಗುಳಿಯ ಫಾರಂ ಹೌಸ್’ನಲ್ಲಿ ಹಿಂದೂ ಸಂಪ್ರದಾಯದಂತೆ ಚಿರು ಸರ್ಜಾ ಅಂತ್ಯಸಂಸ್ಕಾರ ನೆರವೇರಿಸಲಾಗಿದ್ದು, ಚಿರು ತಂದೆ ಅಂತಿಮ ವಿಧಿವಿಧಾನ ನೆರವೇರಿಸಿದರು. ತಮ್ಮ ಸಹೋದರನ ಫಾರಂ ಹೌಸ್’ನಲ್ಲೇ ಚಿರು ಮಣ್ಣಲ್ಲಿ ಮಣ್ಣಾದರು.
ಈ ವೇಳೆ ಕುಟುಂಬಸ್ಥರು ಹಾಗೂ ಅಭಿಮಾನಿಗಳು ಶೋಕ ಮುಗಿಲುಮುಟ್ಟಿತ್ತು. ಅಂತಿಮ ಸಂಸ್ಕಾರಕ್ಕೂ ಮುನ್ನ ದುಃಖ ತಡೆಯಲು ಸಾಧ್ಯವಾಗದ ಚಿರು ಪತ್ನಿ ಮೇಘನಾ ಪತಿ ಪಾರ್ಥಿವ ಶರೀರವನ್ನು ತಬ್ಬಿಕೊಂಡು ರೋಧಿಸುತ್ತಿದ್ದ ದೃಶ್ಯ ಮನಕಲುಕುವಂತಿತ್ತು. ತಮ್ಮ ಪತಿಯ ಹಣೆಗೆ ಕೊನೆಯ ಬಾರಿ ಮುತ್ತನ್ನಿಟ್ಟ ಮೇಘನಾ ಅವರ ಪರಿಸ್ಥಿತಿ ಕಂಡು ಕುಟುಂಬಸ್ಥರ ದುಃಖ ಇಮ್ಮಡಿಸಿತ್ತು. ತಮ್ಮ ಅತ್ತಿಗೆ ಮೇಘನಾರನ್ನು ಮೈದುನ ಧ್ರುವ ಸರ್ಜಾ ಸಂತೈಸುತ್ತಿದ್ದರು.
ಇನ್ನು, ಚಿರು ಅಂತಿಮ ಯಾತ್ರೆ ಸಾಗುವ ದಾರಿಯುದ್ದಕ್ಕೂ ಪೊಲೀಸರು ಬಿಗಿ ಭದ್ರತೆ ಕಲ್ಪಿಸಿದ್ದು, ನೆಲಗುಳಿಯ ಫಾರಂ ಹೌಸ್ ಸುತ್ತಲೂ ಸಹ ಭಾರೀ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.
Get In Touch With Us info@kalpa.news Whatsapp: 9481252093

















