ನವದೆಹಲಿ: ಆ;30: ಭಾರತದ ಮೇಲೆ ದಾಳಿ ನಡೆಸಲು ಸಮಯ ಸಾಧಿಸುತ್ತಿರುವ ಪಾಕಿಸ್ತಾನದ ಮತ್ತೊಂದು ಕುಕೃತ್ಯ ಬಯಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಆರ್ಎಸ್ ಪುರ ವಲಯದಲ್ಲಿ ಪಾಕಿಸ್ತಾನ್ ವಿಮಾನವೊಂದು ಭಾರತೀಯ ವಾಯು ಪ್ರದೇಶ ಉಲ್ಲಂಘನೆ ಮಾಡಿರುವ ಸಂಗತಿ ವರದಿಯಾಗಿದ್ದು, ಸಂಭವನೀಯ ಗಂಡಾಂತರದ ಬಗ್ಗೆ ಭದ್ರತಾ ಸಂಸ್ಥೆಗಳು ಎಚ್ಚರಿಕೆ ಗಂಟೆ ಬಾರಿಸಿವೆ.
ಪಾಕಿಸ್ತಾನದ ವಿಮಾನವೊಂದು ಭಾರತೀಯ ವಾಯು ಪ್ರದೇಶದ ಮೇಲೆ ಹಾರಿ ಹೋಗಿದ್ದನ್ನು ಓರ್ವ ಬಿಎಸ್ಎಫ್ ಯೋಧನೊಬ್ಬ ಗಮನಿಸಿದ. ಕಾಶ್ಮೀರ ಕಣಿವೆಯ ಆರ್ಎಸ್ ಪುರ ವಲಯದಲ್ಲಿ ಪಾಕ್ ವಿಮಾನ ಕಾಣಿಸಿಕೊಂಡ ಸಂಗತಿಯನ್ನು ಆತ ತನ್ನ ಮೇಲಧಿಕಾರಿಗಳಿಗೆ ತಿಳಿಸಿದ ನಂತರ ಈ ವಿಷಯ ಬೆಳಕಿಗೆ ಬಂದಿದೆ.
ಭಾರತೀಯ ವಾಯು ಪ್ರದೇಶದಲ್ಲಿ ಪಾಕ್ ವಿಮಾನ ಏಕೆ ಹಾರಿ ಹೋಯಿತು ಎಂಬ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ.
ಬೆಳ್ಳಿ ಬಣ್ಣದ ಆರು ರೆಕ್ಕೆಗಳ ಪುಟ್ಟ ವಿಮಾನ ನಮ್ಮ ವಾಯು ಪ್ರದೇಶದೊಳಗೆ ನುಸುಳಿ, ಒಂದು ನಿಮಿಷದ ನಂತರ ಹಿಂದಿರುಗಿತು. ಇದು ಖಂಡಿತಾ ನಮ್ಮ ಭಾರತೀಯ ವಾಯುಪಡೆ ವಿಮಾನ ಅಲ್ಲ ಎಂದು ಆತ ಹೇಳಿರುವುದಾಗಿ ವರದಿಯಾಗಿದೆ.















