ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
Filmmakers United Club (FUC) ಮೂಲಕ ಕನ್ನಡದ ಕೆಲವು ನಿರ್ದೇಶಕರು ಒಟ್ಟಾಗಿರುವುದು ಚಿತ್ರರಂಗದ ಬೆಳವಣಿಗೆಯ ಹಾದಿಯಲ್ಲಿ ಒಂದು ದಾಪುಗಾಲು ಎಂದೇ ಹೇಳಬಹುದು. ಇಂಥ ಒಂದು ಒಗ್ಗೂಡುವಿಕೆಗೆ ’ಲೂಸಿಯಾ’ ನಿರ್ದೇಶಕ ಪವನ್ ಕುಮಾರ್ ನಾಂದಿ ಹಾಡಿದ್ದಾರೆ.
ಲಂಡನ್ನಿನ BAFTA ಮಾದರಿಯಿಂದ ಪ್ರೇರಿತವಾಗಿರುವ FUCಯ ಪರಿಕಲ್ಪನೆ ಭಾರತದಲ್ಲೇ ಪ್ರಥಮವಾಗಿದ್ದು, ನಿರ್ದೇಶಕರ ಹಾಗೂ ಪ್ರೇಕ್ಷಕರ ನಡುವಿನ ಅಂತರ ತಗ್ಗಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದೆ. ಅಲ್ಲದೇ ಮುಂಬರುವ ಮಹತ್ವಾಕಾಂಕ್ಷಿ ಯುವ ನಿರ್ದೇಶಕರ ಪಾಲಿಗೆ ಜ್ಞಾನಕೋಶವಾಗಲಿದೆ. ನಿರ್ದೇಶಿಸಿದ ಎರಡು ಚಿತ್ರಗಳಿಗೂ ರಜತ ಕಮಲ ಪಡೆದಿರುವ ನಿರ್ದೇಶಕ ಮಂಸೋರೆ ಅವರು FUC ಕುರಿತಾಗಿ exclusive ಮಾಹಿತಿ ನೀಡಿದ್ದಾರೆ.
FUC ಮಾದರಿಯ ಪರಿಕಲ್ಪನೆ ಯಾರದ್ದು ಮತ್ತು ಇದರ ಮೂಲ ಉದ್ದೇಶ ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಮಂಸೋರೆ ಅವರು ’FUC ಪರಿಕಲ್ಪನೆ ’ಲೂಸಿಯಾ’ ನಿರ್ದೇಶಕ ಪವನ್ ಕುಮಾರ್ ಅವರದ್ದು, ಕೊರೋನಾ ಬಿಸಿ ಚಿತ್ರರಂಗಕ್ಕೂ ತಟ್ಟಿರುವುದು ವಾಸ್ತವ, ಚಿತ್ರೀಕರಣ ನಡೆಸುವುದೇ ಕಷ್ಟ ಎಂಬ ಪರಿಸ್ಥಿತಿ ನಿರ್ಮಾಣವಾಗಿರುವ ಈ ಸಮಯದಲ್ಲಿ ಕೊರೋನಾ ನಂತರದ ದಿನಗಳಲ್ಲಿ ಎದುರಾಗಬಹುದಂತಹ ಥೇಟರ್ ಸಮಸ್ಯೆ, OTT ವೇದಿಕೆಯ ಕೆಲ ನಿಬಂಧನೆಗಳಲ್ಲಿನ ತೊಡಕುಗಳು, ಚಿತ್ರ ನಿರ್ಮಾಣಕ್ಕೆ ಎದುರಾಗುವ ಸವಾಲುಗಳ ಕುರಿತು ಒಂದು ಆರೋಗ್ಯಕರ ಚರ್ಚೆ ನಡೆಸಲು ಹಾಗೂ ಸಮಾನ ಮನಸ್ಕ ನಿರ್ದೇಶಕರುಗಳ ವಿಚಾರ ವಿನಿಮಯದ ಜೊತೆ ಜೊತೆಗೆ ಬಹುಮುಖ್ಯವಾಗಿ ನಿರ್ದೇಶಕರ ಮತ್ತು ಪ್ರೇಕ್ಷಕರ ನಡುವಿನ ಅಂತರ ತಗ್ಗಿಸುವ ಹಾಗೂ ಪ್ರಾಮಾಣಿಕ ಪ್ರೇಕ್ಷಕ ವರ್ಗವನ್ನು ಗುರುತಿಸುವ ನಿಟ್ಟಿನಲ್ಲಿ ಈ ಕ್ಲಬ್ ಉತ್ತಮ ವೇದಿಕೆಯಂತೆ ಕಾರ್ಯನಿರ್ವಹಿಸಲಿದೆ’ ಎಂದರು.
ಅಂದಹಾಗೆ FUCಯಲ್ಲಿ ಈಗಾಗಲೇ 25 ನಿರ್ದೇಶಕರುಗಳು ಒಟ್ಟುಗೂಡಿದ್ದು ಯೋಗರಾಜ್ ಭಟ್, ಜಯತೀರ್ಥ, ಪಿ. ಶೇಷಾದ್ರಿ, ಕವಿತಾ ಲಂಕೇಶ್, ಬಿ.ಎಂ. ಗಿರಿರಾಜ್, ಆದರ್ಶ್ ಈಶ್ವರಪ್ಪ ಸೇರಿದಂತೆ 21 ಮಂದಿ ಕನ್ನಡದ ಯುವ ಮತ್ತು ಅನುಭವಿ ನಿರ್ದೇಶಕರ ದಂಡೇ ಇದೆ. ಇನ್ನುಳಿದವರಲ್ಲಿ ಮಲಯಾಳಂ ನಿರ್ದೇಶಕ ಲಿಜೋ ಜೋಸ್ ಪೆಲ್ಲಿಸೆರಿ, ತೆಲುಗಿನ ತರುಣ್ ಭಾಸ್ಕರ್, ನಂದಿನಿ ರೆಡ್ಡಿ ಹಾಗೂ ತಮಿಳಿನ ವಸಂತ ಬಾಲನ್ ಇದ್ದಾರೆ. FUCನಲ್ಲಿ ಸದಸ್ಯರಾಗ ಬಯಸುವ ನಿರ್ದೇಶಕರು www.thefuc.in ಮೂಲಕ ಅರ್ಜಿ ಸಲ್ಲಿಸಬಹುದು. ಈಗಾಗಲೇ ಸದಸ್ಯರಾಗಿರುವ ನಿರ್ದೇಶಕರುಗಳ ವೋಟ್’ಗಳ ಆಧಾರದ ಮೇಲೆ ಅರ್ಜಿ ಸಲ್ಲಿಸಿದ್ದ ನಿರ್ದೇಶಕನ ಸದಸ್ಯತ್ವ ನಿರ್ಧಾರವಾಗಲಿದ್ದು ಸದಸ್ಯರ ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲಾಗುತ್ತದೆ. ಪ್ರೇಕ್ಷಕರು ತಮಗಿಷ್ಟವಾದ ನಿರ್ದೇಶಕರ ಬಯೋಡೇಟಾ ಹಾಗೂ ಅವರು ನಿರ್ದೇಶಿಸಿದ ಸಿನಿಮಾ ಲಭ್ಯವಿರುವ ಲಿಂಕ್ ಜೊತೆಗೆ ಸಂಪೂರ್ಣ್ ಮಾಹಿತಿಯನ್ನು ಈ ವೆಬ್ಸೈಟ್ ನಲ್ಲಿ ಪಡೆಯಬಹುದಾಗಿದೆ.
ಮತ್ತೊಂದು ವಿಶೇಷ ಸಂಗತಿ ಏನೆಂದರೆ ವೆಬ್ಸೈಟ್’ನ Newsfeedನಲ್ಲಿ ಯಾವುದೇ ಸದಸ್ಯ ಹಂಚಿಕೊಂಡ ವಿಚಾರಗಳಿಗೆ ಲೈಕ್, ಡಿಸ್’ಲೈಕ್ ಆಪ್ಷನ್ ಇರುವುದಿಲ್ಲ, ಹೀಗಾಗಿ ತಾವು ಹಂಚಿಕೊಂಡ ವಿಚಾರವನ್ನು ಎಷ್ಟು ಜನರು ಮಾನ್ಯ ಅಥವಾ ಅಮಾನ್ಯ ಮಾಡಿದರು ಎಂಬ ಒತ್ತಡ ನಿರ್ದೇಶಕರಿಗೆ ಇರುವುದಿಲ್ಲ. ಸೆಷನ್ ನಡೆಯುವ ಸಂದರ್ಭದಲ್ಲಿ ಪ್ರೇಕ್ಷಕರಿಗೆ ಕಾಮೆಂಟ್ ಮಾಡಲು ಮಾತ್ರ ಅವಕಾಶವಿರುತ್ತದೆ, ಚರ್ಚೆಯ ವಿಷಯಕ್ಕೆ ಅನುಗುಣವಾಗಿ ಪ್ರೇಕ್ಷಕರು ಕೊಡುವ ಸಲಹೆಯನ್ನು ಸಹ ಪರಿಗಣಿಸಲಾಗುತ್ತದೆ.
ನಿಮ್ಮ ಮುಂದಿನ ಸಿನಿಮಾದ ಬಗ್ಗೆ ಹೇಳಿ ಮತ್ತು ಬಿಡುಗಡೆಗೆ ಯಾವ ರೀತಿ ಸಿದ್ಧತೆ ಮಾಡಿಕೊಂಡಿದ್ದೀರಿ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಂಸೋರೆ ಅವರು ’ನನ್ನ ಮುಂದಿನ ಸಿನಿಮಾ ‘Act- 1978’ಗೆ ಇನ್ನೂ ಒಂದು ತಿಂಗಳ ಕೆಲಸ ಬಾಕಿ ಇದೆ ನಂತರ ಬಿಡುಗಡೆಯ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕಷ್ಟೇ. ಕೊರೋನಾ ಸಮಸ್ಯೆ ಎಲ್ಲಾ ಮುಗಿದು ಅನುಕೂಲಕರ ಪರಿಸ್ಥಿತಿ ನಿರ್ಮಾಣ ಆದರೆ ಥೇಟರ್’ನಲ್ಲೇ ಬಿಡುಗಡೆಗೊಳಿಸುವ ಚಿಂತನೆ ನಡೆಸಿದ್ದೇನೆ, ಯಥಾಸ್ಥಿತಿ ಮುಂದುವರೆದರೆ OTT ಮೊರೆ ಹೋಗುವ ಕುರಿತು ತಂಡದಲ್ಲಿ ಮಾತುಕತೆ ನಡೆಯುತ್ತಿದೆ’ ಎಂದರು.
ಸದ್ಯ ಕೊರೋನಾ ಬರಸಿಡಿಲಿಗೆ ತತ್ತರಿಸಿರುವ ಚಿತ್ರರಂಗಕ್ಕೆ ಚೇತರಿಕೆ ತರುವ ಹಾಗೂ ಭವಿಷ್ಯದಲ್ಲಿ ಇಂತಹುದೇ ವೈಪರೀತ್ಯವನ್ನು ಎದುರಿಸುವ ಶಕ್ತಿ ತುಂಬುವ ನಿಟ್ಟಿನಲ್ಲಿ FUC ಹೊಸ ಚೈತನ್ಯದ ಚಿಲುಮೆಯಂತೆ ಕಾರ್ಯನಿರ್ವಹಿಸುವುದರಲ್ಲಿ ಸಫಲವಾಗುತ್ತದೆಯೇ ಎಂಬುದನ್ನು ಇನ್ನೂ ಕಾದು ನೋಡಬೇಕಾಗಿದೆ.
Get In Touch With Us info@kalpa.news Whatsapp: 9481252093
Discussion about this post