ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ಕೊರೋನಾ ಸಂಕಷ್ಟದಿಂದ ತತ್ತರಿಸಿರುವ ದೇಶವಾಸಿಗಳ ನೆರವಿಗೆ ಧಾವಿಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೀಪಾವಳಿವರೆಗೂ ಉಚಿತ ರೇಷನ್ ವಿತರಣೆ ಮಾಡುವುದಾಗಿ ಘೋಷಣೆ ಮಾಡಿದೆ.
ದೇಶವನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಈ ಘೋಷಣೆ ಮಾಡಿದ್ದು, ಪ್ರಧಾನಿ ಗರೀಬ್ ಅನ್ನ ಕಲ್ಯಾಣ ಯೋಜನೆಯನ್ನು ವಿಸ್ತರಣೆ ಮಾಡಲಾಗಿದ್ದು, ದೀಪಾವಳಿವರೆಗೂ ಅಂದರೆ ನವೆಂಬರ್’ವರೆಗೂ ಉಚಿತ ರೇಷನ್ ವಿತರಣೆ ಮಾಡಲಿದ್ದು, ಇದರಿಂದ ದೇಶದ 80 ಕೋಟಿ ಜನರಿಗೆ ಪ್ರಯೋಜನವಾಗಲಿದೆ ಎಂದರು.
ಪ್ರತೀ ತಿಂಗಳು 5 ಕೆಜಿ ಗೋಧಿ ಅಥವಾ 5 ಕೆಜಿ ಅಕ್ಕಿ ಮತ್ತು 1 ಕೆಜಿ ಬೇಳೆಕಾಳನ್ನು ಉಚಿತವಾಗಿ ಸರಕಾರ ನೀಡಲಿದೆ. ಇಂತಹ ಒಂದು ಮಹತ್ವದ ನಿರ್ಧಾರ ಕೈಗೊಳ್ಳಲು ನಮಗೆ ಬೆನ್ನೆಲುಬಾಗಿ ನಿಂತಿರುವುದು ದೇಶದ ರೈತ ಸಮುದಾಯ ಹಾಗೂ ತೆರಿಗೆ ಪಾವತಿದಾರರು. ಇವರಿಗೆಲ್ಲಾ ಧನ್ಯವಾದ ಅರ್ಪಿಸಲು ಬಯಸುತ್ತೇನೆ ಎಂದರು.
ದೇಶದಲ್ಲಿ ಸರಿಯಾದ ಸಮಯದಲ್ಲಿ ಲಾಕ್ ಡೌನ್ ಜಾರಿ ಮಾಡಿರುವ ಕಾರಣದಿಂದ ಬೇರೆ ದೇಶಗಳಿಗೆ ಹೋಲಿಸಿದರೆ ದೇಶದಲ್ಲಿ ಕೊರೋನಾಕ್ಕೆ ಬಲಿಯಾದವರ ಸಂಖ್ಯೆ ಕಡಿಮೆಯಿದೆ. ಜನರು ಮುಂದಿನ ದಿನಗಳಲ್ಲಿ ತಮ್ಮ ಸುತ್ತಮುತ್ತಲಿನ ಕಂಟೈನ್ಮೆಂಟ್ ಝೋನ್’ಗಳ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಹಾಗೆಯೇ ಗಮನ ಕೊಡದವರಿಗೆ ನಾವು ಪಾಠ ಕಲಿಸಬೇಕು ಎಂದರು.
ಇದು 130 ಕೋಟಿ ಜನರ ರಕ್ಷಣೆಯ ವಿಚಾರವಾಗಿದೆ. ಇದರಲ್ಲಿ ಜನಸಾಮಾನ್ಯರು, ಪ್ರಧಾನಿ ಎಲ್ಲರೂ ಒಂದೇ. ಜನರು ಬೆಳೆಯಬೇಕು ಹಾಗೆಯೇ ಎಚ್ಚರದಿಂದಿರಬೇಕು. ಸದ್ಯ ದೇಶದಲ್ಲಿ ಯಾವೊಂದು ಮನೆಯಲ್ಲಿಯೂ ಒಲೆ ಉರಿಸಲಾರದ ಸ್ಥಿತಿ ಇಲ್ಲ. ಯಾರೂ ಉಪವಾಸ ಮಲಗುತ್ತಿಲ್ಲ. ಲಾಕ್ ಡೌನ್ ಸರಿಯಾದ ಸಮಯದಲ್ಲಿ ಹಾಕಿದ್ದು ಜನಧನ ಖಾತೆಗೆ ಹಣ ಸೇರಿದೆ ಎಂದರು.
Get In Touch With Us info@kalpa.news Whatsapp: 9481252093
Discussion about this post