ನವದೆಹಲಿ, ಸೆ.2: ಕುಖ್ಯಾತ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಭಾರತದ ಪ್ರಸಿದ್ಧ ಪಾನ್ ಮಸಾಲ ತಯಾರಿಕರು ಷಾಮೀಲಾಗಿರುವ ಬಹುಕೋಟಿ ಗುಟ್ಕಾ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ(ಸಿಬಿಐ) ತನಿಖೆಯನ್ನು ತೀವ್ರಗೊಳಿಸಿದೆ. ಡಿ-ಕಂಪೆನಿಯ ಮಾಲೀಕ ದಾವೂದ್ ವಿರುದ್ಧ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲು ಸಿಬಿಐ ಪಾಕಿಸ್ಥಾನ, ಯುಎಇ ಮತ್ತು ಇಂಗ್ಲೆಂಡನ್ನು ಕೋರಿದೆ.
ದಾವೂದ್ ಮತ್ತು ಅತನ ಅಕ್ರಮ ಗುಟ್ಕಾ ಉದ್ಯಮದ ಬಗ್ಗೆ ಮತ್ತಷ್ಟು ಮಾಹಿತಿಗಳನ್ನು ಕಲೆ ಹಾಕಲು ಸಿಬಿಐ ಈ ಮೂರು ದೇಶಗಳಿಗೆ ನ್ಯಾಯಿಕ ಮನವಿಗಳನ್ನು (ಜ್ಯೂಡಿಷಿಯಲ್ ರಿಕ್ವೆಸ್ಟ್ಸ್) ರವಾನಿಸಿದೆ.
ಭಾರತಕ್ಕೆ 23 ವರ್ಷಗಳಿಂದ ಜರೂರಾಗಿ ಬೇಕಾಗಿರುವ ದಾವೂದ್ ಪಾಕಿಸ್ಥಾನದ ಹೈದರಾಬಾದ್ ನಲ್ಲಿ ಬಹುಕೋಟಿ ರೂ.ಗಳ ವೆಚ್ಚದಲ್ಲಿ ಗುಟ್ಕಾ ವಹಿವಾಟು ಆರಂಭಿಸಿದ್ದ ಮತ್ತು ತನ್ನ ಸಹೋದರ ಅನೀಸ್ ಇಬ್ರಾಹಿಂ ಮೂಲಕ ದುಬೈನಲ್ಲಿ ಅದರ ವ್ಯವಹಾರ ಮುಂದುವರಿಸಿದ್ದ.
ಈ ಪ್ರಕರಣದ ದಾವೂದ್, ಆತನ ಬಾವಮೈದುನ ಅಬ್ದುಲ್ ಹಮೀದ್, ಬಾಡಿಗೆ ಹಂತಕ ಸಲೀಂ ಮಹಮದ್ ಗೌಸ್ ಹಾಗೂ ಭಾರತದ ಖ್ಯಾತ ಗುಟ್ಕಾ ಉದ್ಯಮಿಗಳಾದ ಗೋವಾ ಗುಟ್ಕಾದ ಜೆ.ಎಂ.ಜೋಷಿ ಮತ್ತು ಮಾಣಿಕ್ಚಂದ್ ಗುಟ್ಕಾದ ರಸಿಕ್ ಲಾಲ್ ಧರಿವಾಲ್ ಅವರು ವಿರುದ್ಧ ಪೂರಕ ಆರೋಪಪಟ್ಟಿಯನ್ನು ಸಿಬಿಐ ಒಂದು ತಿಂಗಳ ಹಿಂದೆ ಆರೋಪಪಟ್ಟಿಯಲ್ಲಿ ಸಲ್ಲಿಸಿತ್ತು.
ಪಾಕಿಸ್ಥಾನದ ಸಿಂಧ್ ಪ್ರಾಂತ್ಯದ ಹೈದರಾಬಾದ್ನಲ್ಲಿ ಗುಟ್ಕಾ ಘಟಕವೊಂದನ್ನು ಸ್ಥಾಪಿಸಲು ಉದ್ಯಮಿಗಳಾದ ಜೋಷಿ ಮತ್ತು ಧರಿವಾಲ್ ಅವರು ಅನೀಸ್ ಇಬ್ರಾಹಿಂಗೆ ನೆರವು ನೀಡಿದ್ದರು. ಈ ಪ್ರಕರಣದ ಬಗ್ಗೆ ಕಳೆದ 14 ವರ್ಷಗಳಿಂದ ತನಿಖೆ ನಡೆಯುತ್ತಿದೆ.















