ಸೆ. 5ರಿಂದ ಆರಂಭವಾಗಲಿರುವ ಗಣೇಶ ಚತುರ್ಥಿಯ ಹಿನ್ನೆಲೆಯಲ್ಲಿ ನಗರದಲ್ಲಿ ಈಗಿನಿಂದಲೇ ಬಂದೋಬಸ್ತ್ ಬಗ್ಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಹೆಚ್ಚಿನ ಮುತುವರ್ಜಿ ವಹಿಸಿವೆ. ಈ ಸಂಬಂಧ ಸಾರ್ವಜನಿಕರ ಸಲಹೆ-ಸೂಚನೆ ಕೇಳಿ ಸಭೆ ನಡೆಸಲಾಗಿದೆ. ಆ ಪ್ರಕಾರವೇ ಕ್ರಮ ಜರುಗಿಸುವ ಭರವಸೆಯನ್ನು ಹಿರಿಯ ಅಧಿಕಾರಿಗಳು ನೀಡಿದ್ದಾರೆ.
ಇದಾದ ಬಳಿಕ ಜಿಲ್ಲಾಧಿಕಾರಿ ವಿ.ಪಿ. ಇಕ್ಕೇರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠ ಅಭಿನವ್ ಖರೆ, ಹೆಚ್ಚುವರಿ ಎಸ್‌ಪಿ ವಿನ್ಸೆಂಟ್ ಶಾಂತಕುಮಾರ್ ಈಗಾಗಲೇ ಹಲವು ಸಭೆ ನಡೆಸಿದ್ದಾರೆ. ಎಸ್‌ಪಿಯವರೂ ಸಹ ಡಿಎಸ್ಪಿ ಮತ್ತು ಸಿಪಿಐಗಳ ಜೊತೆ ಸಾಕಷ್ಟು ಚರ್ಚೆ ನಡೆಸಿ ಹಿಂದಿನ ವರ್ಷ ಕೈಗೊಂಡ ಕ್ರಮದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಸೂಕ್ತ ರೀತಿಯಲ್ಲಿ ಈ ವರ್ಷ ಪರಿಸ್ಥಿತಿ ನಿಭಾಯಿಸುವ ಬಗ್ಗೆ ಗಹನವಾಗಿ ಚರ್ಚಿಸಿ ಮುಂದಡಿ ಇಟ್ಟಿದ್ದಾರೆ.
ಗಣೇಶ ಚತುರ್ಥಿಗೆ ಸುಮಾರು 2500 ಪೊಲೀಸರನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಂಪೂರ್ಣ ಯೋಜನೆಯನ್ನು ಹಿಂದಿನ ಎಸ್‌ಪಿ ರವಿ ಚನ್ನಣ್ಣವರ್ ಕಾಲದಲ್ಲೇ ರೂಪಿಸಲಾಗಿದೆ. ಈಗ ಇದನ್ನು ಅನುಷ್ಠಾನಗೊಳಿಸುವುದು ಮಾತ್ರ ಬಾಕಿ ಇದೆ. ವಿಶೇಷವಾಗಿ ಸೂಕ್ಷ್ಮ ಪ್ರದೇಶಗಳತ್ತ ಹೆಚ್ಚಿನ ಗಮನ ಹರಿಸಲಾಗಿದೆ. ವಾರದಿಂದಲೇ ಪೊಲೀಸರ ಗಸ್ತನ್ನು ಹೆಚ್ಚಿಸಲಾಗಿದೆ. ನಗರದ ಬಹುತೇಕ ಬಡಾವಣೆಗಲ್ಲಿ ಅದರಲ್ಲೂ ಕ್ರಿಮಿನಲ್‌ಗಳಿರುವ ಜಾಗದ ಬಗ್ಗೆ ಎಚ್ಚರಿಕೆ ವಹಿಸಲಾಗಿದೆ.
ಕೆಲವು ವರ್ಷಗಳ ಹಿಂದೆ ಗಣೇಶ ವಿಸರ್ಜನೆ ವೇಳೆ ನಡೆದ ಗಲಭೆಯ ಹಿನ್ನೆಲೆಯಲಿ ಸೂಕ್ಷ್ಮ ಜಾಗಗಳಾವುವು ಎನ್ನುವುದರ ಮಾಹಿತಿ ಪೊಲೀಸರಿಗೆ ಇದೆ. ಈ ಪ್ರಕಾರ ಹಿಂದಿನ ವಾರದಿಂದಲೇ ಸೂಕ್ತ ವಿಚಕ್ಷಣೆ ನಡೆದಿದೆ. ಮಫ್ತಿಯಲ್ಲಿ ಪೊಲೀಸ್ ಕೆಲಸ ನಡೆದಿದೆ. ಗಸ್ತನ್ನೂ ಹೆಚ್ಚಿಸಲಾಗಿದೆ. ನಗರಕ್ಕೆ ಹೊರಗಿನಿಂದ ಬರುವ ಕ್ರಿಮಿನಲ್‌ಗಳ, ಗಲಭೆಕೋರರ ಬಗ್ಗೆ ಮತ್ತು ಈ ಹಿಂದೆ ಗಲಭೆಗಳಲ್ಲಿ ಭಾಗಿಯಾದವರ ಬಗ್ಗೆ ನಿಗಾ ಇಡಲಾಗಿದೆ. ಸಂಶಯಿತರನ್ನು ಬಂಧಿಸುವ ಕೆಲಸ ಇನ್ನಷ್ಟೇ ಆರಂಭವಾಗಲಿದೆ.
ಗಣೇಶ ಹಬ್ಬದ ಎರಡನೆಯ ದಿನ ಅತಿ ಹೆಚ್ಚು ಗಣೇಶ ವಿಸರ್ಜನೆ ನಡೆಯುವ ಹಿನ್ನೆಲೆಯಲ್ಲಿ ವಿಸರ್ಜನಾ ಸ್ಥಳಗಳತ್ತ ಈಗ ಹೆಚ್ಚಿನ ಗಮನವನ್ನು ಪೊಲೀಸರು ನೀಡಿದ್ದಾರೆ. ನೀರಿನಲ್ಲಿ ಆಡುವುದು, ನೀರಿಗೆ ಗಣೇಶನ ಜೊತೆ ಬೇಕೆಂತಲೇ ಅತ್ಯುತ್ಸಾಹದಿಂದ ಧುಮುಕುವುದು, ವಿಸರ್ಜನಾ ಸ್ಥಳದಲ್ಲಿ ಗಲಾಟೆಯಾಗದಂತೆ ನೋಡಿಕೊಳ್ಳುವ ಬಗ್ಗೆ ಈಗ ಸಿದ್ಧತೆ ನಡೆದಿದೆ. ಒಂದು ವಾರದ ನಂತರ ಉಳಿದೆರಡು ಗಣೇಶ ವಿಜರ್ಸನೆ ಬಗ್ಗೆ ಸಿದ್ಧತೆ ಶುರುವಾಗಲಿದೆ.
ಕಳೆದೆರಡು ವರ್ಷಗಳಿಂದ ಜನಮಾನಸದಲ್ಲಿ ಸುರಕ್ಷತೆಯ ಭಾವನೆ ಮೂಡಿದೆ. ಜೊತೆಗೆ ಇಲಾಖೆಯೂ ಹೆಚ್ಚಿನ ಅರಿವು ಮೂಡಿಸುತ್ತಿದೆ. ಮತ್ತು ಪೊಲೀಸರ ಬಿಗು ಕ್ರಮ ಗಲಾಟೆಗೆ ಆಸ್ಪದವಾಗದಂತೆ ಮಾಡಿದೆ. ಈ ಹಿನ್ನೆಲೆಯಲ್ಲಿ ಈ ವರ್ಷವೂ ಯಾವ ಅಹಿತಕರ ಘಟನೆಯೂ ನಡೆಯದಂತೆ ಬಿಗು ಕ್ರಮ ಜರುಗಿಸುವುದು ನಿಶ್ಚಿತ.
ಸಾರ್ವಜನಿಕರೇ….
ಗಾಳಿ ಮಾತಿಗೆ ಕಿವಿ ಕೊಡದೆ, ವದಂತಿಗಳನ್ನು ಹಬ್ಬಿಸದೆ, ನಂಬದೆ ಸಾರ್ವಜನಿಕರು ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸರ ಜೊತೆ ಕೈಜೋಡಿಸಿ ಈ ಮೂಲಕ ಶಾಂತಯುತ ಗಣೇಶೋತ್ಸವ ಆಚರಣೆಗೆ ಸಹಕರಿಸಿ…
ನಗರದಲ್ಲಿ ಓಂ ಗಣಪತಿ ಮತ್ತು ಹಿಂದೂ ಮಹಾಸಭಾ ಗಣೇಶ ವಿಸರ್ಜನೆಯೊಂದೇ ಹೆಚ್ಚಿನ ಗಮನ ಸೆಳೆದಿದೆ. ಉಳಿದ ಗಣಪತಿ ವಿಸರ್ಜನೆಗೆ ಸಾಧಾರಣ ಬಂದೋಬಸ್ತನ್ನು ಏರ್ಪಡಿಸಲಾಗುತ್ತದೆ, ಇವೆರಡಕ್ಕೆ ಹೊರ ಜಿಲ್ಲೆಗಳಿಂದಲೂ ಹೆಚ್ಚಿನ ಪಡೆಯನ್ನು ಕರೆಸಲಾಗುತ್ತದೆ. ಪ್ರತಿ ವರ್ಷ ಕ್ಷಿಪ್ರ ಕಾರ್ಯಾಚರಣೆ ಪಡೆ (ಆರ್‌ಎಎಫ್) ಕರೆಸಲಾಗುತ್ತಿದೆ. ಈ ವರ್ಷವೂ ವಿಸರ್ಜನೆ ಪೂರ್ವ ಈ ತಂಡ ಬಂದು ನಗರದ ಸೂಕ್ಷ್ಮ ಮತ್ತು ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ (ಮಾರ್ಚ್ ಫಾಸ್ಟ್) ನಡೆಸುವ ಮೂಲಕ ಜನರಲ್ಲಿರುವ ಭೀತಿಯನ್ನು ದೂರೀಕರಿಸಲು ಕೆಲಸ ಮಾಡಲಿವೆ.
*ದತ್ತಾತ್ರೇಯ ಹೆಗಡೆ















