ಹಾಂಗ್ ಜಾವ್, ಸೆ.6: ಜಿ 29 ಶೃಂಗಸಭೆಯ ಕೊನೆಯ ಅಧಿವೇಶನದಲ್ಲಿ ಚೀನಾ ಸಮ್ಮುಖವೇ ಪಾಕಿಸ್ಥಾನದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಪಾಕಿಸ್ಥಾನ ಭಯೋತ್ಪಾದನೆಯನ್ನು ರಾಷ್ಟ್ರೀಯ ನೀತಿಯ ಸಾಧನವನ್ನಾಗಿ ಬಳಸಿಕೊಳ್ಳುತ್ತಿದೆ ಎಂದು ಹರಿಹಾಯ್ದಿದ್ದಾರೆ.
ಜಾಗತಿಕ ಆಡಳಿತ ಮತ್ತು ಸ್ಥಿರತೆಗೆ ಭಯೋತ್ಪಾದನೆ ಸವಾಲಾಗಿ ಪರಿಗಣಿಸಿದೆ. ರಾಷ್ಟ್ರೀಯ ನೀತಿಯ ಸಾಧನವನ್ನಾಗಿ ಕೆಲವು ರಾಷ್ಟ್ರಗಳು ಭಯೋತ್ಪಾದಕರನ್ನು ಉಪಯೋಗಿಸಿಕೊಳ್ಳುತ್ತಿವೆ ಎನ್ನುವ ಮೂಲಕ ಪಾಕಿಸ್ಥಾನಕ್ಕೆ ಸ್ಪಷ್ಟ ಎಚ್ಚರಿಕೆ ರವಾನಿಸಿದ್ದಾರೆ.
ದಕ್ಷಿಣ ಏಷಿಯಾದ ಒಂದು ರಾಷ್ಟ್ರ ತನ್ನ ಉಗ್ರಗಾಮಿ ಏಜೆಂಟರನ್ನು ನಮ್ಮ ದೇಶದ ವಿವಿಧ ಪ್ರದೇಶಗಳಲ್ಲಿ ವಿಸ್ತರಿಸುವ ಮೂಲಕ ಭಯೋತ್ಪಾದನೆಯನ್ನು ರಾಜಕಾರಣದ ಸಾಧನವನ್ನಾಗಿ ಬಳಸಿಕೊಳ್ಳುತ್ತಿದೆ. ಭಯೋತ್ಪಾದನೆಯ ಬೆಂಬಲಿಗರು ಹಾಗೂ ಪ್ರಾಯೋಜಕರನ್ನು ಕಡ್ಡಾಯವಾಗಿ ಪ್ರತ್ಯೇಕಗೊಳಿಸಲು ಸಮನ್ವಯದ ಕೆಲಸಗಳು ನಡೆಯಬೇಕಿದೆ. ಅದು ಬಿಟ್ಟು ಬಹುಮಾನ ನೀಡುವುದಲ್ಲ. ನಮ್ಮ ಪ್ರಕಾರ ಉಗ್ರಗಾಮಿ ಉಗ್ರಗಾಮಿಯೇ. ಭಾರತ ಭಯೋತ್ಪಾದನೆ ವಿರುದ್ಧ ಶೂನ್ಯ ಸಹನೆಯನ್ನು ಹೊಂದಿದೆ ಎಂದು ಹೇಳಿದರು
ಬ್ರಿಕ್ಸ್ (ಬ್ರೆಜಿಲ್, ರಶ್ಯಾ, ಇಂಡಿಯಾ, ಚೀನಾ ಹಾಗೂ ದಕ್ಷಿಣ ಆಫ್ರಿಕಾ)ನ ಅನೌಪಚಾರಿಕ ಸಭೆ ನಂತರ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ಯಾವುದೇ ಕಾರಣಕ್ಕೂ ಭಯೋತ್ಪಾದನೆಯನ್ನು ರಾಜಕೀಯಗೊಳಿಸದಿರುವಂತೆ ಮನವಿ ಮಾಡಿದರು.
ಭಯೋತ್ಪಾದನೆಗೆ ಹಣಕಾಸು ನೆರವು ನೀಡುವುದರ ವಿರುದ್ಧದ ಜಿ20 ಹೋರಾಟಕ್ಕೆ ಭಾರತ ಮೆಚ್ಚುಗೆ ವ್ಯಕ್ತಪಡಿಸುತ್ತದೆ ಎಂದು ಇದೇ ಸಂದರ್ಭದಲ್ಲಿ ಮೋದಿ ಹೇಳಿದರು. ಆದಾಗ್ಯೂ, ಜಾಗತಿಕ ಭ್ರಷ್ಟಾಚಾರ ನಿಗ್ರಹಿಸುವ ನಿಟ್ಟಿನಲ್ಲಿ ಭಾರತ ಮತ್ತು ಚೀನಾ ಸಾಮಾನ್ಯ ನೆಲೆಗಟ್ಟಿನಲ್ಲಿ ಪ್ರಬಲ ಹೋರಾಟ ನಡೆಸಲಿದೆ. ಭ್ರಷ್ಟಾಚಾರ ವಿರುದ್ಧದ ಕ್ಷಿ ಜಿಂಪಿಂಗ್ ಅವರ ಶಿಸ್ತುಕ್ರಮದ ಭಾಗವಾಗಿ, ಕಪ್ಪು ಹಣದ ವಿರುದ್ಧದ ಭಾರತದ ಅಭಿಯಾನಕ್ಕೆ ಚೀನಾ ಪೂರಕ ಬೆಂಬಲ ನೀಡಲಿದೆ.
ಭ್ರಷ್ಟಾಚಾರ, ಆರ್ಥಿಕ ಅಪರಾಧಿಗಳಿಗೆ ಸುರಕ್ಷಿತ ವಿನಾಯಿತಿ ತೊಡೆದುಹಾಕುವುದು, ಅಕ್ರಮ ಹಣ ವರ್ಗಾವಣೆ ತಡೆ ಹಾಗೂ ಸಂಕೀರ್ಣ ಅಂತಾರಾಷ್ಟ್ರೀಯ ನಿಯಮಗಳ ಉಲ್ಲಂಘನೆ ಮತ್ತಿತರೆ ವಿಷಯಗಳ ಕುರಿತು ತನ್ನ ಪೂರ್ಣ ಬದ್ಧತೆಯನ್ನು ವಿಸ್ತರಿಸುವುದಾಗಿ ಮೋದಿ ಹೇಳಿದರು.
ಪ್ರಸ್ತಾವನೆಗೆ ಸಮ್ಮತಿ
ಚೀನಾದ ಉದ್ದೇಶಿತ ದೇಶೀಯ ಆಸ್ತಿ ವಸೂಲಾತಿ ಹಾಗೂ ದೇಶಭ್ರಷ್ಟರ ವಾಪಾಸಾತಿ ಸಂಶೋಧನಾ ಕೇಂದ್ರ ಸ್ಥಾಪನೆಯ ಪ್ರಸ್ತಾವನೆಗೆ ಜಿ 20 ಸದಸ್ಯ ರಾಷ್ಟ್ರಗಳು ಸಮ್ಮತಿ ಸೂಚಿಸಿದವು ಎಂದು ಇದೇ ಸಂದರ್ಭದಲ್ಲಿ ಚೀನಾ ಅಧ್ಯಕ್ಷ ಕ್ಷಿ ಜಿಂಪಿಂಗ್ ಹೇಳಿದರು. ಜನರ ಆಸ್ತಿ ವಸೂಲಾತಿ ಸಂಬಂಧ ಭ್ರಷ್ಟಾಚಾರ ವಿರೋಧಿ ಕ್ರಿಯಾ ಯೋಜನೆಯನ್ನು ಮುಂದಿನ ವರ್ಷ ಸಿದ್ಧಗೊಳಿಸಲಾಗುವುದು ಎಂದು ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಮೋದಿ ಮತ್ತು ಕ್ಷಿ ಜಿಂಪಿಂಗ್ ನಡುವಿನ ಇತ್ತೀಚಿನ ಕೆಲವು ಅಡೆತಡೆಗಳ ನಿವಾರಣೆಗೆ ಜಿ 20 ಸಮ್ಮೇಳನ ಅವಕಾಶ ಮಾಡಿಕೊಟ್ಟಂತಾಗಿದೆಯಲ್ಲದೆ, ಹಾಂಗ್ ಝಾವ್ನಲ್ಲಿ ಪ್ರಧಾನಿ ಮೋದಿ ಅವರ ಎರಡು ದಿನಗಳ ವಾಸ್ತವ್ಯ ಉಭಯ ದೇಶಗಳ ನಡುವಿನ ಇನ್ನಿತರೆ ಅನೇಕ ಸಂಬಂಧಗಳ ಹೆಚ್ಚಳಕ್ಕೆ ಅವಕಾಶ ನೀಡಿದಂತಾಗಿದೆ.
—–
Discussion about this post