ಶಿವಮೊಗ್ಗ, ಸೆ.7: ಗಣಪತಿಯನ್ನು ನೀರಿಗೆ ಬಿಡಲು ತೆರಳಿದ್ದ ಯುವಕರ ತಂಡದಲ್ಲಿ ಸುಮಾರು 7ಕ್ಕೂ ಹೆಚ್ಚು ಮಂದಿ ಮುಳುಗಿ ಸಾವಿಗೀಡಾಗಿದ್ದು, ಸುಮಾರು 10ಕ್ಕೂ ಹೆಚ್ಚು ಮಂದಿ ಕಾಣೆಯಾದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಹೊಳಲೂರು ಜಿಪಂ ಕ್ಷೇತ್ರದ ಹಾಡೋನಹಳ್ಳಿಯಲ್ಲಿ ಈ ದುರಂತ ಸಂಭವಿಸಿದ್ದು, ಕಾಣೆಯಾದವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಗಣಪತಿಯನ್ನು ವಿಸರ್ಜನೆಗೆಂದು ತುಂಗಭದ್ರಾ ನದಿಯಲ್ಲಿ ದೋಣಿಯಲ್ಲಿ ತೆಗೆದುಕೊಂಡು ದಡದಿಂದ ಸುಮಾರು 50 ಮೀಟರ್ ದೂರ ಚಲಿಸಿದ ನಂತರ, ಅತಿಯಾದ ಭಾರದಿಂದಾಗಿ ದೋಣಿ ಮಗುಚಿದೆ. ಈ ವೇಳೆ ದೋಣಿಯಲ್ಲಿ ಸುಮಾರು 20ಕ್ಕೂ ಹೆಚ್ಚು ಜನರಿದ್ದರು ಎಂದು ವರದಿಯಾಗಿದೆ.
ಇಲ್ಲಿನ ಮಾರಿಕಾಂಬಾ ದೇವಸ್ಥಾನದ ಬಳಿ ಸಾರ್ವಜನಿಕ ಗಣಪತಿಯನ್ನು ಪ್ರತಿಷ್ಠಾಪಿಸಲಾಗಿತ್ತು.
ಗಣಪತಿ ಹಬ್ಬ ಆದ ನಂತರ ಮೂರನೆಯ ದಿನವಾದ ಇಂದು ಗಣೇಶ ವಿಸರ್ಜನೆಗೆಂದು ನದಿಗೆ ತೆರಳಿದಾಗಿ ಈ ಘಟನೆ ನಡೆದಿದೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠ ಅಭಿನವ್ ಖರೆ, ಜಿಲ್ಲಾ ಪಂಚಾಯತ್ ಸದಸ್ಯ ಕೆ.ಈ. ಕಾಂತೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಹಾಗೂ ಮುಳುಗು ತಜ್ಞರು ಕಾಣೆಯಾದವರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.















