ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಮಾಸ್ಕ್ ಧರಿಸದೇ ಇದ್ದರೆ ವಿಧಿಸುವ ದಂಡ ಮೊತ್ತವನ್ನು ಭಾರೀ ಪ್ರಮಾಣದಲ್ಲಿ ಏರಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಅಮ್ ಆದ್ಮಿ ಪಕ್ಷ ಖಂಡಿಸಿದ್ದು, ತತಕ್ಷಣವೇ ಈ ಮೊತ್ತವನ್ನು ಇಳಿಕೆ ಮಾಡಬೇಕು ಎಂದು ಆಗ್ರಹಿಸಿದೆ.
ಈ ಕುರಿತಂತೆ ಮಾತನಾಡಿರುವ ಎಎಪಿ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್, ಕೊರೋನಾ ಸೋಂಕು ಹರಡುವುದನ್ನು ತಡೆಯಲು ಮಾಸ್ಕ್ ಧರಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿ, ಮಾಸ್ಕ್ ಹಾಕದವರಿಗೆ 200 ರೂ. ದಂಡ ನಿಗದಿ ಮಾಡಿತ್ತು. ಯಾವಾಗ ದಂಡದ ರೂಪದಲ್ಲಿ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ಹರಿದ ತಕ್ಷಣ ಹಣದ ಆಸೆಗೆ ಬಿದ್ದ ಸರ್ಕಾರ ನಗರ ಭಾಗದಲ್ಲಿ ದಂಡದ ಮೊತ್ತವನ್ನು 1 ಸಾವಿರ ರೂ., ಗ್ರಾಮೀಣ ಭಾಗದಲ್ಲಿ 500 ರೂ.ಗೆ ಹೆಚ್ಚಳ ಮಾಡಿ ಜನ ಸಾಮಾನ್ಯರ ಲೂಟಿಗೆ ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ದಂಡ ಹಾಕಲು ಪ್ರಾರಂಭಿಸಿದ ಜುಲೈ ತಿಂಗಳೊಂದರಲ್ಲೇ ಬೆಂಗಳೂರು ನಗರದಲ್ಲಿ ಸುಮಾರು 58 ಲಕ್ಷ ರೂ. ಹಣ ಸಂಗ್ರಹವಾಗಿದೆ. ಆಯ್ದುಕೊಂಡು ತಿನ್ನುವವನ ಬಳಿ ಕಿತ್ಕೊಂಡು ತಿಂದರಂತೆ ಎನ್ನುವ ಗಾದೆ ಮಾತಿನಂತೆ ಜನರ ನೆರವಿಗೆ ನಿಲ್ಲಬೇಕಾಗಿದ್ದ ಸರ್ಕಾರವೇ ಹಗಲು ದರೋಡೆಗೆ ನಿಂತಿದೆ. ಇದುವರೆಗೂ ಒಂದೇ ಒಂದು ಮಾಸ್ಕ್ ವಿತರಿಸದ ಸರ್ಕಾರ ಹೆದರಿಸಿ, ಬೆದರಿಸಿ ಜನರ ಬಳಿ ಕೋಟ್ಯಂತರ ರೂಪಾಯಿ ನುಂಗಿ ನೀರು ಕುಡಿಯುತ್ತಿದೆ ಎಂದು ಕಿಡಿ ಕಾರಿದ್ದಾರೆ.
ಪೊಲೀಸರು, ದಂಡ ವಸೂಲಿಗೆ ಸರ್ಕಾರ ನೇಮಿಸಿರುವವರು ದಂಡ ವಸೂಲಿ ಮಾಡುವಾಗ ಜನರ ಹತ್ತಿರ ಗೂಂಡಾಗಳಂತೆ ವರ್ತಿಸುತ್ತಿದ್ದಾರೆ. ದಂಡದ ರುಚಿ ಹತ್ತಿರುವ ಇವರುಗಳು ಜನರನ್ನು ಹೆದರಿಸುತ್ತಿದ್ದಾರೆಯೇ ಹೊರತು, ಅರಿವು ಮೂಡಿಸುವ ಕೆಲಸ ಮಾಡುತ್ತಿಲ್ಲ. ವಲಸೆ ಕಾರ್ಮಿಕರು, ಕೂಲಿ ಕಾರ್ಮಿಕರನ್ನು ಶೋಷಣೆ ಮಾಡಲು ಈ ಕಾನೂನು ದಾರಿ ಮಾಡಿಕೊಟ್ಟಿದೆ ಎಂದಿದ್ದಾರೆ.
ಗ್ರಾಮೀಣ ಭಾಗದಲ್ಲಿ ಒಬ್ಬ ವ್ಯಕ್ತಿ ಕೆಲಸಕ್ಕೆ ಹೋದರೆ ಅವನ ದಿನದ ಆದಾಯ 350 ರಿಂದ 400 ರೂ. ಇದೆ. ಇಂತಹ ಕಡೆ 500 ರೂ. ದಂಡ ವಿಧಿಸುವ ಮೂಲಕ ಪಿಡಿಒಗಳು ಲೂಟಿ ಮಾಡಲು ಸರ್ಕಾರ ಅವಕಾಶ ಮಾಡಿಕೊಟ್ಟಂತಾಗಿದೆ. ನಿಯಂತ್ರಣಕ್ಕೆ ಸಿಗದೆ ದಿನದಿಂದ್ ದಿನಕ್ಕೆ ವ್ಯಾಪಕವಾಗಿ ಹರಡುತ್ತಿರುವ ಸೋಂಕು ತಡೆಗಟ್ಟಲು ಮಾಸ್ಕ್ ಕಡ್ಡಾಯ ಆದರೆ ಗೂಂಡಾಗಳ ರೀತಿ ಹೆದರಿಸಿ, ಹಣ ಸುಲಿಗೆ ಮಾಡಿ ಅರಿವು ಮೂಡಿಸುವ ಅಗತ್ಯವಿಲ್ಲ. ಲೂಟಿಗೆ ನಿಂತಿರುವ ಸರ್ಕಾರ ಸೂಕ್ತ ಸೂಚನೆ ನೀಡಬೇಕು ಹಾಗೂ ಕೂಡಲೇ ದಂಡದ ಮೊತ್ತವನ್ನು ಕಡಿಮೆ ಮಾಡಬೇಕು ಹಾಗೂ ಉಚಿತವಾಗಿ ಸರ್ಕಾರದಿಂದ ಮಾಸ್ಕ್ ವಿತರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
















