ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಬುದ್ದ ಮತ್ತು ಅಂಬೇಡ್ಕರ್ ತತ್ವಾದರ್ಶಗಳಡಿ ಬಂಧು ಬಾಂಧವರೆಲ್ಲ ಒಗ್ಗೂಡಿ ಪ್ರತಿಜ್ಞಾ ಭೋಧನೆಯಡಿ ಸರಳ ವಿವಾಹಗಳಿಗೆ ಜನರು ಹೆಚ್ಚು ಒತ್ತು ನೀಡಬೇಕೆಂದು ಹೆಗ್ಗಡೆದೇವನಕೋಟೆಯ ಬೌದ್ಧ ಭಿಕ್ಕುನಿ ಗೌತಮಿ ಹೇಳಿದರು.
ಅವರು ತಾಲೂಕಿನ ಬಿಆರ್‌ಪಿ ರಸ್ತೆಯ ತಮ್ಮಡಿಹಳ್ಳಿ ಗ್ರಾಮದ ಬಳಿಯ ಶ್ರೀಗಂಧ ಫಾರಂ ಹೌಸ್‌ನಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ ಖಜಾಂಚಿ ಭದ್ರಾವತಿ ಸತ್ಯ ಮತ್ತು ಹೇಮಲತಾ ದಂಪತಿಗಳ ಸಾಕು ಪುತ್ರ ಯತೀಶ್ ಸಂಘರ್ಷ ಮತ್ತು ಚಿಕ್ಕಮಗಳೂರಿನ ಪೋಲಯ್ಯ ಮತ್ತು ಸರಳ ದಂಪತಿಗಳ ಪುತ್ರಿ ಅಕ್ಷಿತರವರ ವಿವಾಹವನ್ನು ಬೌದ್ಧಧರ್ಮದ ರೀತಿ ವಿವಾಹ ನೆರವೇರಿಸಿ ಬುದ್ದ ವಂದನೆ, ವಧುವರರಿಗೆ ತ್ರಿಸರಣ, ಪಂಚಶೀಲ, ಧಮ್ಮ ದೀಕ್ಷೆ ಹಾಗು ಉಪದೇಶ ನೀಡಿದರು.
ಭಿಕ್ಕುನಿ ಮಳವಳ್ಳಿಯ ಬನ್ಸೆ ಸುಗತಾಪಾಲೋರವರು ಬುದ್ಧ ಮತ್ತು ಅಂಬೇಡ್ಕರ್ ತತ್ವಾದರ್ಶಗಳನ್ನು ಅನುಸರಿಸಿದರೆ ಸಮಾಜ ಸುಧಾರಣೆಯಾಗುತ್ತದೆ. ಮಾನವನ ಉದ್ದಾರಕ್ಕೆ ಶ್ರಮಿಸಿದ ಬುದ್ದನು ಎಂದಿಗೂ ದೇವರೆಂದು ಹೇಳಿಕೊಳ್ಳಲಿಲ್ಲ. ಅವರ ಜ್ಞಾನ ಸಂಪತ್ತು ಮತ್ತು ಅಂಬೇಡ್ಕರ್ ರವರು ನೀಡಿದ ಸಂದೇಶಗಳು ಸರ್ವಕಾಲಿಕ್ಕೂ ಅನುಕರರಣೀಯವಾದುದು ಎಂದರು.
ಬೆಂಗಳೂರಿನ ಇಂಟರ್ ನ್ಯಾಷನಲ್ ಫ್ರೆಂಡ್ಸ್ ಆಫ್ ಬುದ್ದಿಸ್ಟ್ ಬುದ್ದ ವಿಹಾರದ ಮಹಾ ಪ್ರಧಾನ ಕಾರ್ಯದರ್ಶಿ ಧಮ್ಮಚಾರಿ ಡಾ.ಎಚ್.ಆರ್. ಸುರೇಂದ್ರ ನೂತನ ದಂಪತಿಗಳಿಗೆ ವಿವಾಹ ಪ್ರತಿಜ್ಞಾ ಭೋಧನೆ ಮತ್ತು ಮಂಗಳಸೂತ್ರ ಧಾರಣೆ ನೆರವೇರಿಸಿದರು. ದಸಂಸ ಪದಾಧಿಕಾರಿಗಳು ಕಾರ್ಯಕರ್ತರು ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಭಾಗವಹಿಸಿದ್ದ ನೂರಾರು ಮಂದಿ ಬೌದ್ಧ ವಿವಾಹದಲ್ಲಿ ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post