ಬೆಂಗಳೂರು, ಸೆ.14: ಕಾವೇರಿ ವಿವಾದ ತಾರಕಕ್ಕೇರಿದ ಹಿನ್ನೆಲೆಯಲ್ಲಿ ಗಲಭೆಯಿಂದ ಹೊತ್ತಿ ಉರಿದಿದ್ದ ರಾಜಧಾನಿ ಬೆಂಗಳೂರು, ಇಂದು ಸಹಜ ಸ್ಥಿತಿಯತ್ತ ಮರಳುತ್ತಿದೆ.
ಕಾವೇರಿ ನೀರು ಹಂಚಿಕೆ ಕುರಿತಂತೆ ರಾಜ್ಯದ ವಿರುದ್ಧ ಸುಪ್ರೀಂ ನೀಡಿದ್ದ ತೀರ್ಪು ನಗರ ಸೇರಿದಂತೆ ಇನ್ನಿತರೆ ಪ್ರದೇಶಗಳಲ್ಲಿ ಸಾಕಷ್ಟು ಪ್ರಕ್ಷುಬ್ದ ವಾತಾವರಣವನ್ನು ನಿರ್ಮಾಣ ಮಾಡಿತ್ತು. ತಮಿಳುನಾಡು ರಾಜ್ಯ ನೋಂದಣಿ ಹೊಂದಿದ್ದ ವಾಹನಗಳಿಗೆ ಬೆಂಕಿ ಹಚ್ಚುವ ಮೂಲಕ ಜನರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಬೆಂಗಳೂರಿನ ಹೃದಯಭಾಗವಾಗಿರುವ ಮೆಜೆಸ್ಟಿಕ್ ನಲ್ಲಿಯೂ ಎಂದಿನಂತೆ ಜನರ ಓಡಾಟಗಳು ಸಹಜವಾಗಿದ್ದು, ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳು ತಮ್ಮ ಸೇವೆಗಳನ್ನು ಆರಂಭಿಸಿವೆ.
ಪರಿಸ್ಥಿತಿ ಕುರಿತಂತೆ ಇಂದು ಮಾತನಾಡಿರುವ ನಗರ ಪೊಲೀಸ್ ಆಯುಕ್ತ ಮೇಘರಿಕ್, ನಗರದಲ್ಲಿ ಉಂಟಾಗಿದ್ದ ಹಿಂಸಾಚಾರ ಹತೋಟಿಗೆ ಬಂದಿದ್ದು, ಜನಜೀವನ ಸಹಜಸ್ಥಿತಿಗೆ ಮರಳುತ್ತಿದೆ. ೧೬ ಠಾಣಾ ವ್ಯಾಪ್ತಿಯಲ್ಲಿನ ಕರ್ಫ್ಯೂ ಆದೇಶವನ್ನು ವಾಪಸ್ ಪಡೆಯಲಾಗಿದ್ದು, ಆದರೂ ಮುಂಜಾಗ್ರತಾ ಕ್ರಮವಾಗಿ ಬೆಂಗಳೂರಿನಾದ್ಯಂತ ನಿಷೇಧಾಜ್ಞೆ ಮುಂದುವರಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದೇ ವಿಚಾರ ಕುರಿತು ಮಾತನಾಡಿರುವ ನಗರ ಜಿಲ್ಲಾಧಿಕಾರಿ ಶಂಕರ್, ಸರ್ಕಾರಿ ಶಾಲಾ-ಕಾಲೇಜುಗಳಿಗೆ ರಜೆಯಿಲ್ಲ. ಎಂದಿನಂತೆ ಶಾಲಾ-ಕಾಲೇಜುಗಳು ಮುಂದುವರೆಯಲಿದೆ ಎಂದಿದ್ದಾರೆ.
ಇಂದು ಬೆಳಗ್ಗಿನಿಂದ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭವಾಗಿದೆ. ಮೆಟ್ರೋ ಕೂಡಾ ಸಂಚರಿಸುತ್ತಿದೆ. ಅಂಗಡಿ, ಮುಂಗಟ್ಟು, ಹೋಟೆಲ್‌ಗಳು ತೆರೆದಿವೆ. ಆಟೋ, ಟ್ಯಾಕ್ಸಿ ಸಂಖ್ಯೆ ವಿರಳವಾಗಿದ್ದು, ಜನಸಂದಣಿ, ಜನರ ಓಡಾಟದ ಪ್ರಮಾಣವೂ ಕಡಿಮೆ ಇದೆ.
ಲಗ್ಗೆರೆ, ಹೆಗ್ಗನಹಳ್ಳಿ ಸೇರಿದಂತೆ ಗಲಭೆಪೀಡಿತ ಪ್ರದೇಶಗಳಲ್ಲಿಯೂ ಪರಿಸ್ಥಿತಿ ಶಾಂತವಾಗಿದೆ. ಗೃಹ ಸಚಿವ ಪರಮೇಶ್ವರ್ ನಗರ ಪ್ರದಕ್ಷಿಣೆ ನಡೆಸುವ ಮೂಲಕ ಪರಿಸ್ಥಿತಿಯನ್ನು ಅವಲೋಕಿಸಿದರು.
ಸಕ್ಕರೆನಾಡು ಮಂಡ್ಯದಲ್ಲೂ ಪರಿಸ್ಥಿತಿ ಶಾಂತವಾಗಿದ್ದು, ಜನಜೀವನ ಯಥಾಸ್ಥಿತಿಗೆ ಮರಳಿದೆ. ಇಂದು ಶಾಲಾ, ಕಾಲೇಜುಗಳು ಎಂದಿನಂತೆ ಆರಂಭಗೊಂಡಿದೆ. ರಾಜ್ಯದ ಹಲವು ಜಿಲ್ಲೆಗಳು ಸೇರಿದಂತೆ ನಗರದಲ್ಲೆಡೆ ಶಾಂತಿಯುತ ವಾತಾವರಣ ಮರುಕಳಿಸಿದ್ದು, ಮತ್ತೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಈಗಾಗಲೇ ಅಧಿಕಾರಿಗಳು ಎಚ್ಚರ ವಹಿಸಿದ್ದಾರೆ.
ಸದ್ಯ ಬೆಂಗಳೂರು ಶಾಂತವಾಗಿದ್ದು, ಅಹಿತಕರ ಘಟನೆ ನಡೆಯಲು ಕಾರಣರಾದ ೬೦೦ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ಗಲಾಟೆ ನಡೆದ ಏರಿಯಾಗಳಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದು, ಕೇಂದ್ರದಿಂದ ಹೆಚ್ಚುವರಿ ಭದ್ರತಾ ಪಡೆ, ಸಿವಿಲ್ ಡಿಫೆನ್ಸ್ ಫೋರ್ಸ್ ಹೀಗೆ ಹೆಚ್ಚುವರಿಯಾಗಿ ಸಾವಿರಾರು ಮಂದಿ ಪೊಲೀಸರನ್ನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
Discussion about this post