Read - < 1 minute
ಮಾಸ್ಕೋ, ಸೆ.14: ವಿಶ್ವವಿಖ್ಯಾತ ಟೆನಿಸ್ ತಾರೆಯರಾದ ಸರೆನಾ ವಿಲಿಯಮ್ಸ್ ಮತ್ತು ವೀನಸ್ ವಿಲಿಯಮ್ಸ್ ಹಾಗೂ ರಿಯೋ ಒಲಿಂಪಿಕ್ಸ್ ನಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಗೆದ್ದಿರುವ ಸಿಮೋನೆ ಬೈಲ್ಸ್ ಅವರಿಗೆ ನಿಷೇಧಿತ ಉದ್ದೀಪನ ಮದ್ದು ಸೇವಿಸಲು ಅವಕಾಶ ನೀಡಲಾಗಿತ್ತು ಎಂಬ ರಹಸ್ಯ ಸಂಗತಿ ಬಹಿರಂಗಗೊಂಡಿದೆ. ರಷ್ಯಾದ ಹ್ಯಾಕರ್ಗಳು ಬಯಲು ಮಾಡಿರುವ ಅಮೆರಿಕಾದ ಒಲಿಂಪಿಕ್ ತಾರೆಯರ ರಹಸ್ಯ ಕಡತಗಳಲ್ಲಿ ಈ ಸ್ಫೋಟಕ ಮಾಹಿತಿ ಇದೆ.
ರಷ್ಯಾದ ಹ್ಯಾಕಿಂಗ್ ಸಮೂಹ ಫ್ಯಾನ್ಸಿ ಬಿಯರ್ಸ್ ಹ್ಯಾಕ್ ಟೀಮ್ ತಾನು ವಿಶ್ವ ಉದ್ದೀಪನ ಮದ್ದು ನಿರೋಧಕ ಸಂಸ್ಥೆ (ವರ್ಲ್ಡ್ ಆಂಟಿ-ಡೋಪಿಂಗ್ ಏಜೆನ್ಸಿ-ಡಬ್ಲ್ಯುಎಡಿಎ) ದತ್ತಾಂಶ ಮಾಹಿತಿಯನ್ನು ರಹಸ್ಯವನ್ನು ಪಡೆದಿರುವುದಾಗಿ ಹೇಳಿಕೊಂಡಿದೆ. ಅಮೆರಿಕಾದ ಖ್ಯಾತ ಅಥ್ಲೀಟ್ಗಳಿಗೆ ಸಂಬಂಧಿಸಿದ್ದು ಎನ್ನಲಾದ ಅನೇಕ ಕಡತಗಳನ್ನು ಇಂಟರ್ ನೆಟ್, ಕ್ರೀಡಾ ಸುದ್ದಿಜಾಲ ತಾಣಗಳಲ್ಲಿ ಹರಿಯಬಿಟ್ಟಿರುವುದಾಗಿ ಅದು ತಿಳಿಸಿದೆ.
ಅಮೆರಿಕ ಟೆನ್ನಿಸ್ ತಾರೆಯರಾದ ಸರೆನಾ ವಿಲಿಯಮ್ಸ್ ಮತ್ತು ವೀನಸ್ ವಿಲಿಯಮ್ಸ್ ಹಾಗೂ ರಿಯೋ ಒಲಿಂಪಿಕ್ಸ್ ನಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಗೆದ್ದಿರುವ ಸಿಮೋನೆ ಬೈಲ್ಸ್ ಅವರಿಗೆ ನಿಷೇಧಿತ ಉದ್ದೀಪನ ಮದ್ದು ಸೇವಿಸಲು ಅವಕಾಶ ನೀಡಲಾಗಿತ್ತು ಎಂದು ಅದು ಆರೋಪಿಸಿದೆ.
2010,2014 ಮತ್ತು 2015ರಲ್ಲಿ ಸರೇನಾಗೆ ಆಕ್ಸಿಕೊಡೊನ್, ಹೈಡ್ರೋಮಾರ್ಫೋನ್, ಪ್ರೆಡ್ನಿಸೊನ್ ಮತ್ತು ಮಿಥೈಲ್ಪ್ರೆಡ್ನಿಸೊಲೊನ್ ಎಂಬ ನಿಷೇಧಿತ ಉದ್ದೀಪನ ಮದ್ದು ಸೇವಿಸಲು ಅವಕಾಶ ನೀಡಲಾಗಿತ್ತು. ಸೈಮೋನೆ ಬೈಲ್ಸ್ ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಮದ್ದು ಸೇವಿಸಿದ್ದು ಕಂಡಬಂದರೂ ಅವರನ್ನು ಅನರ್ಹಗೊಳಿಸಲಿಲ್ಲ ಎಂದು ಹ್ಯಾಕರ್ಗಳು ಗಂಭೀರ ಆರೋಪ ಮಾಡಿದ್ದಾರೆ.
2010ರಿಂದ 2013ರವರೆಗೆ ವೀನಸ್ ವಿಲಿಯಮ್ಸ್ ಅವರಿಗೂ ಸಹ ನಿಷೇಧಿತ ಮದ್ದು ಸೇವಿಸಲು ಅವಕಾಶ ನೀಡಲಾಗಿತ್ತು. ಇಷ್ಟಾದರೂ ಈ ಎಲ್ಲ ಕ್ರೀಡಾಪಟುಗಳು ಅಂತರ್ರಾಷ್ಟ್ರೀಯ ಪಂದ್ಯಗಳಲ್ಲಿ ಭಾಗವಹಿಸಲು ಡಬ್ಲ್ಯುಎಡಿಎ ಅವಕಾಶ ಕಲ್ಪಿಸಿದೆ ಎಂದು ರಷ್ಯಾ ಹ್ಯಾಕರ್ ಗಳು ಆಪಾದಿಸಿದ್ದಾರೆ.
ಈ ಆರೋಪವು ಹಿಮಚೆಂಡಾಗಿ ರೂಪಗೊಳ್ಳುವ ಸಾಧ್ಯತೆ ಇದ್ದು, ಅಂತರ್ರಾಷ್ಟ್ರೀಯ ಮಟ್ಟದಲ್ಲಿ ವಿವಾದದ ದೊಡ್ಡ ಅಲೆಯನ್ನೇ ಎಬ್ಬಿಸುವ ಸಾಧ್ಯತೆ ಇದೆ.
Discussion about this post