ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಮನೆ ರಹಿತರಿಗೆ ಸೂರು ಕಲ್ಪಿಸುವ ಶಾಸಕ ಬಿ.ಕೆ. ಸಂಗಮೇಶ್ವರ್ ಅವರ ಕನಸಿನ ಮಹತ್ವದ 4000 ಮನೆಗಳ ನಿರ್ಮಾಣದ ವಿಚಾರದಲ್ಲಿ ಫಲಾನುಭವಿಗಳಿಗೆ ಮಾಹಿತಿ ನೀಡುವ ಅಪರೂಪದ ಕಾರ್ಯಕ್ರಮ ಸಂಪನ್ನಗೊಂಡಿತು.
ಶಾಸಕರ ಪ್ರಯತ್ನದ ಫಲವಾಗಿ ನಗರದಲ್ಲಿ 4000 ಬಡವರಿಗೆ ಮನೆ ನಿರ್ಮಾಣಕ್ಕೆ 250 ಕೋಟಿ ರೂ. ಅನುದಾನ ಈಗಾಗಲೇ ದೊರೆತಿದ್ದು, ಇನ್ನು 2-3 ತಿಂಗಳಲ್ಲಿ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಹೀಗಾಗಿ, ಫಲಾನುಭವಿಗಳಿಗೆ ಮಧ್ಯವರ್ತಿಗಳ ಹಾವಳಿ ತಪ್ಪಿಸುವ ಹಾಗೂ ದಾಖಲೆ ಪತ್ರಗಳ ಗೊಂದಲ ಪರಿಹಾರ ಮಾಡುವ ಸಲುವಾಗಿ ಸಮಗ್ರವಾದ ಮಾಹಿತಿ ನೀಡುವಂತಹ ಅಪರೂಪದ ಕಾರ್ಯಕ್ರಮವನ್ನು 8 ದಿನಗಳ ಕಾಲ ಅಭಿಯಾನದಂತೆ ನಡೆಸಿ, ನಿನ್ನೆ ಸಂಪನ್ನಗೊಂಡಿದೆ.
ಈ ಕುರಿತಂತೆ ಮಾತನಾಡಿದ ಶಾಸಕ ಬಿ.ಕೆ. ಸಂಗಮೇಶ್ವರ್, ಹಲವು ವರ್ಷಗಳಿಂದ ಮನೆ ಇಲ್ಲದವರಿಗೆ ಸೂರು ಒದಗಿಸಬೇಕು ಎನ್ನುವುದು ನಮ್ಮ ಆಶಯವಾಗಿತ್ತು. ಬೊಮ್ಮನಕಟ್ಟೆ, ಜೇಡಿಕಟ್ಟೆ, ವಿಐಎಸ್ ಎಲ್ ಜಾಗ, ಸಿದ್ಲಾಪುರಗಳಲ್ಲಿ ಸರ್ವೆ ಮಾಡಿ, ನಮ್ಮ ಮುಖಂಡರು ಹಾಗೂ ಉನ್ನತ ಅಧಿಕಾರಿಗಳು ಸ್ಥಳವನ್ನು ಹುಡುಕಿ 36 ಎಕರೆಯಲ್ಲಿ 4000 ಆರ್’ಸಿಸಿ ಮನೆಗಳನ್ನು ನಿರ್ಮಿಸಲು ವ್ಯವಸ್ಥೆ ಮಾಡಲಾಯಿತು. ಇದಕ್ಕಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಒಟ್ಟು 250 ಕೋಟಿ ರೂ. ಅನುದಾನವನ್ನು ತರಲಾಗಿದೆ ಎಂದರು.
ಇನ್ನು 2-3 ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ನಡೆಯಲಿದ್ದು, ಮುಂದಿನ 2 ವರ್ಷದ ಒಳಗಾಗಿ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರ ಮಾಡಲು ಯೋಜಿಸಲಾಗಿದೆ ಎಂದರು.
4.5 ಚದರ ಅಡಿ ವಿಸ್ತೀರ್ಣದಲ್ಲಿ ಪ್ರತಿ ಮನೆ 6.30 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ. ಇದರಲ್ಲಿ ರಾಜ್ಯದಿಂದ ಸರ್ಕಾರದಿಂದ 1.20 ಲಕ್ಷ, ಕೇಂದ್ರದಿಂದ 2 ಲಕ್ಷ ರೂ. ಅನುದಾನ ದೊರೆಯಲಿದ್ದು, ಉಳಿದ 2.8 ಲಕ್ಷ ರೂ. ಹಣವನ್ನು ಬ್ಯಾಂಕ್ ಸಾಲದ ಮೂಲಕ ಪಡೆಯಬೇಕು. ಇದರಲ್ಲಿ, ಎಸ್’ಸಿ-ಎಸ್‌ಟಿ ಸಮುದಾಯದವರಿಗೆ 1.5 ಲಕ್ಷ ರಾಜ್ಯ ಸರ್ಕಾರದಿಂದ ಹಾಗೂ 2 ಲಕ್ಷ ಕೇಂದ್ರದಿಂದ ಸಿಗುತ್ತದೆ. ಉಳಿದ 2.8 ಲಕ್ಷ ರೂ. ಹಣವನ್ನು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಹೊಸ ಖಾತೆ ತೆರೆದು ಸಾಲ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದರು.
ಫಲಾನುಭವಿಗಳು 10,000 ಸಾವಿರ ರೂ. ಹಣ ಕಟ್ಟಿ ಖಾತೆ ತೆರೆದರೆ ಸಾಲ ಸೌಲಭ್ಯ ದೊರೆಯಲಿದ್ದು, ಸಂಪೂರ್ಣ ಸಾಲ ತೀರಿಸಿದ ನಂತರ ಮನೆ ಫಲಾನುಭವಿಯ ಸ್ವಂತವಾಗುತ್ತದೆ ಎಂದರು.
ಇನ್ನು, ಈ ಮನೆಗಳ ಬಡಾವಣೆಯಲ್ಲಿ 18 ಕೋಟಿ ವೆಚ್ಚದಲ್ಲಿ ನಗರಸಭೆ ವತಿಯಿಂದ ಮೂಲಭೂತ ಸೌಲಭ್ಯ ಉಚಿತವಾಗಿ ಒದಗಿಸಲಾಗುವುದು ಎಂದರು.
ಬಡವರ ಸೇವೆಯಲ್ಲಿಯೇ ನಾವು ದೇವರಲ್ಲಿ ಕಾಣುತ್ತೇವೆ. ಫಲಾನುಭವಿಗಳು ಬ್ಯಾಂಕ್ ಖಾತೆ ತೆರೆಯುವ, ಮನೆ ಪಡೆಯುವ ವಿಚಾರದಲ್ಲಿ ಯಾವುದೇ ರೀತಿಯ ದಾಖಲೆ ಪತ್ರಗಳ ಗೊಂದಲ ಉಂಟಾದರೆ, ನಿಮ್ಮ ಸಹಾಯಕ್ಕೆ ಶಾಸಕರ ಕಚೇರಿ ಹಾಗೂ ಕಾಂಗ್ರೆಸ್ ಮುಖಂಡರು ಸದಾ ಸಿದ್ದವಿದ್ದು, ಯಾವುದೇ ಸಂದರ್ಭದಲ್ಲಿ ನಮ್ಮನ್ನು ಸಂಪರ್ಕಿಸಿ ಎಂದರು.
ಮುಂಬರುವ ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ನಗರಸಭೆ ಚುನಾವಣೆ ಎದುರಾಗಲಿದೆ. ಆ ಚುನಾವಣೆಯಲ್ಲಿ ಎಲ್ಲ ವಾರ್ಡ್‌ಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ನೀವು ಗೆಲ್ಲಿಸಿ ನಗರಸಭೆ ಅಧಿಕಾರವನ್ನು ನಮಗೆ ನೀಡಿದರೆ ಇನ್ನೂ ಹೆಚ್ಚಿನ ಜನಸೇವೆ ಮಾಡಲು ನಮಗೆ ಬಲ ಬರುತ್ತದೆ ಎಂದು ಕರೆ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post