Read - < 1 minute
ಬೆಂಗಳೂರು, ಸೆ.15: ಕಾವೇರಿ ನದಿ ನೀರು ವಿಚಾರದಲ್ಲಿ ಪ್ರಧಾನಿ ಮಧ್ಯ ಪ್ರವೇಶಿಸುವ ಅವಕಾಶವಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾವೇರಿ ನದಿ ನೀರು ವಿವಾದದಲ್ಲಿ ಪ್ರಧಾನಿ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಲು ಅವಕಾಶವಿದೆ ಎಂದು ನ್ಯಾಯಾಧಿಕರಣದ ಅಂತಿಮ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಪ್ರಧಾನಮಂತ್ರಿ ಈವರೆಗೆ ಮಧ್ಯಪ್ರವೇಶಕ್ಕೆ ಮನಸ್ಸು ಮಾಡಿಲ್ಲ. ಮಹದಾಯಿ ವಿಚಾರದಲ್ಲೂ ಇದೇ ರೀತಿಯ ಧೋರಣೆ ಅನುಸರಿಸಲಾಗಿತ್ತು. ಉದ್ದೇಶಪೂರ್ವಕವಾಗಿಯೇ ಕರ್ನಾಟಕ ಮತ್ತು ತಮಿಳುನಾಡು ಅಂತಾರಾಜ್ಯ ನದಿ ವಿವಾದವನ್ನು ಬಗೆಹರಿಸಲು ಮಧ್ಯಪ್ರವೇಶಿಸುತ್ತಿಲ್ಲ. ಕರ್ನಾಟಕದ ಜನರನ್ನು ನಿರ್ಲಕ್ಷಿಸಿ ರಾಜ್ಯದ ಸಮಸ್ಯೆಗಳನ್ನು ತಾತ್ಸಾರ ಮನೋಭಾವದಿಂದ ನೋಡಲಾಗುತ್ತಿರುವ ಪ್ರಧಾನಿ ನಡವಳಿಕೆ ಅನುಮಾನಾಸ್ಪದವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಮಹದಾಯಿ ವಿಷಯದಲ್ಲಿ ಏ.26ರಂದು, ಆ.4ರಂದು ಎರಡು ಬಾರಿ, ಆ.18 ಮತ್ತು ಸೆ.29ರಂದು ಕಾವೇರಿ ವಿಚಾರದಲ್ಲಿ ಮಧ್ಯ ಪ್ರವೇಶಿಸುವಂತೆ ಮುಖ್ಯಮಂತ್ರಿಗಳು ಅವರಿಗೆ ಪತ್ರಗಳನ್ನು ಬರೆದಿದ್ದರು. ಆ.24ರಂದು ನರೇಗಾ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡುವಂತೆಯೂ ಕೋರಿ ಪತ್ರ ಬರೆಯಲಾಗಿದೆ. ಈ ಐದು ಪತ್ರಗಳಿಗೂ ಪ್ರಧಾನಿ ಶಿಷ್ಟಾಚಾರಕ್ಕಾದರೂ ಉತ್ತರಿಸಿಲ್ಲ. ಭೇಟಿ ಮಾಡಲು ಸಮಯ ನೀಡಿ ಎಂದು ಮುಖ್ಯಮಂತ್ರಿ, ಪ್ರಧಾನಿ ಕಚೇರಿಯನ್ನು ಸಂಪರ್ಕಿಸುತ್ತಿದ್ದರೂ ಸಮಯ ದೊರೆತಿಲ್ಲ. ಇದನ್ನು ಗಮನಿಸಿದರೆ ಕರ್ನಾಟಕವನ್ನು ಉದ್ದೇಶಪೂರ್ವಕವಾಗಿಯೇ ಕಡೆಗಣಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು.
ದಿನನಿತ್ಯ ಟ್ವೀಟ್ ಮಾಡುವ ಪ್ರಧಾನಿಯವರಿಗೆ ಕಾವೇರಿ, ಮಹದಾಯಿಗೆ ಸಂಬಂಧಿಸಿದಂತೆ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳನ್ನು ಸೇರಿಸಿ ಸಮಸ್ಯೆ ಬಗೆಹರಿಸಬೇಕೆಂದು ಅನ್ನಿಸುತ್ತಿಲ್ಲವೆ ಎಂದು ಪ್ರಶ್ನಿಸಿದರು.
ಬಿಜೆಪಿ ನಾಯಕರು ಕರ್ನಾಟಕದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬೊಬ್ಬೆ ಹಾಕುತ್ತಿದ್ದಾರೆ. ಮಧ್ಯ ಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಿ ಎಂದು ಪ್ರಧಾನಿ ಬಳಿ ಮಾತನಾಡುವ ಧೈರ್ಯ ರಾಜ್ಯದ ಬಿಜೆಪಿಯವರಿಗಿಲ್ಲ. ಕರ್ನಾಟಕದ ವಿವಾದಗಳಲ್ಲಿ ಕೇಂದ್ರ ಸರ್ಕಾರವನ್ನು ಮಧ್ಯೆ ತರಬೇಡಿ ಎಂದು ಬಹುಶಃ ಪಕ್ಷದ ವರಿಷ್ಠರು ಸೂಚನೆ ನೀಡಿರಬಹುದು ಎಂದರು.
ಮಹದಾಯಿ ವಿಷಯದಲ್ಲಿ ಕರ್ನಾಟಕದ ಜತೆ ಮಾತನಾಡಲು ಗೋವಾ ಮುಖ್ಯಮಂತ್ರಿ ಸಿದ್ಧರಿದ್ದಾರೆ ಎಂದು ಪ್ರಹ್ಲಾದ್ ಜೋಷಿ ಹೇಳಿಕೆ ನೀಡಿದ್ದಾರೆ. ಆದರೆ, ಗೋವಾ ಮುಖ್ಯಮಂತ್ರಿಯಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಪ್ರಹ್ಲಾದ್ ಜೋಷಿಯವರು ಗೋವಾ ಮುಖ್ಯಮಂತ್ರಿಯ ವಕ್ತಾರರಂತೆ ವರ್ತಿಸುತ್ತಿರುವುದಾದರೂ ಏಕೆ ಎಂದು ಪ್ರಶ್ನಿಸಿದರು.
ಪ್ರಧಾನಮಂತ್ರಿ ಕರ್ನಾಟಕದ ಜನತೆಯ ಪರವಾಗಿಲ್ಲ ಎಂಬುದು ಅವರ ನಡವಳಿಕೆಯಿಂದ ತಿಳಿಯುತ್ತದೆ ಎಂದು ತರಾಟೆಗೆ ತೆಗೆದುಕೊಂಡರು.
ಇದೇ ವೇಳೆ ಕಾಂಗ್ರೆಸ್ ಮುಕ್ತ ಭಾರತ ಮಾಡುವುದಾಗಿ ಹೇಳಿಕೊಳ್ಳುತ್ತಿರುವ ಬಿಜೆಪಿ, ಇದರ ಭಾಗವಾಗಿಯೇ ಕರ್ನಾಟಕದ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸದೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಮುಗಿಸುವ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿದರು.
Discussion about this post