ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಉಕ್ಕಿನ ನಗರಿಯಲ್ಲಿ ಕೊರೋನಾ ವ್ಯಾಕ್ಸಿನೇಷನ್’ಗೆ ಇಂದು ಅಧಿಕೃತ ಚಾಲನೆ ನೀಡಲಾಗಿದ್ದು, ಈ ಮೂಲಕ ತಾಲೂಕಿನಲ್ಲಿ ಲಸಿಕಾ ಅಭಿಯಾನ ಆರಂಭವಾಗಿದೆ.
ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಶಾಸಕ ಬಿ.ಕೆ. ಸಂಗಮೇಶ್ವರ್ ಅವರು ಜ್ಯೋತಿ ಬೆಳಗುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೊರೋನಾ ಮಹಾಮಾರಿಯಿಂದ ತತ್ತರಿಸಿದ್ದ ದೇಶಕ್ಕೆ ಲಸಿಕೆ ದೊರೆತಿರುವುದು ಸಂತಸದ ಸಂಗತಿ. ಕೋವಿಡ್19 ಎದುರಿಸುವ ಕಾರ್ಯದಲ್ಲಿ ವೈದ್ಯರು ಸೇರಿದಂತೆ ಕೊರೋನಾ ವಾರಿಯರ್ಸ್’ಗಳ ಸೇವೆಗೆ ಮನುಕುಲ ಸದಾ ಚಿರ ಋಣಿಯಾಗಿರಬೇಕು. ಇಂತಹ ಸಂದರ್ಭದಲ್ಲಿ ಮೊದಲಿಗೆ ಇವರುಗಳಿಗೇ ಲಸಿಕೆ ನೀಡುತ್ತಿರುವುದು ಸ್ವಾಗತಾರ್ಹ ಸಂಗತಿ ಎಂದರು.
ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಮಲ್ಲಪ್ಪ, ತಾಲೂಕು ವೈದ್ಯಾಧಿಕಾರಿಗಳಾದ ಅಶೋಕ್, ರಕ್ಷಾ ಸಮಿತಿಯ ಸದಸ್ಯರಾದ ಬಾಬು, ನಾಗೇಶ್ ಹಾಗೂ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಮೊದಲ ವ್ಯಾಕ್ಸಿನೇಷನ್ ಯಾರಿಗೆ?
ಕೇಂದ್ರ ಸರ್ಕಾರದ ಆದೇಶದಂತೆ ಮೊದಲಿಗೆ ಕೊರೋನಾ ವಾರಿಯರ್ಸ್’ಗಳಿಗೆ ಲಸಿಕೆ ನೀಡಲಾಗುತ್ತಿದೆ. ಇದರಂತೆ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆರ್ಯುವೇದಿಕ್ ವೈದ್ಯ ಡಾ.ಕಿರಣ್ ಅವರಿಗೆ ತಾಲೂಕಿನಲ್ಲಿ ಮೊಟ್ಟ ಮೊದಲ ವ್ಯಾಕ್ಸಿನೇಷನ್ ನೀಡಲಾಯಿತು.
ಮೊದಲ ದಿನ 100 ಸಿಬ್ಬಂದಿಗಳಿಗೆ ಲಸಿಕೆ
ಲಸಿಕೆಯ ಮೊದಲ ದಿನವಾದ ಇಂದು ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 100 ಸಿಬ್ಬಂದಿಗಳಿಗೆ ಲಸಿಕೆ ಹಾಕಲಾಗುತ್ತಿದೆ.
ಈಗಾಗಲೇ ಲಸಿಕೆಗಾಗಿ 1500 ಮಂದಿ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಇವರುಗಳಿಗೆ ಸೋಮವಾರದಿಂದ ಲಸಿಕೆ ನೀಡಲಾಗುವುದು. ನೋಂದಣಿ ಮಾಡಿಕೊಂಡವರು ಗೈರು ಹಾಜರಾದರೆ ಆನಂತರ ಅವರಿಗೆ ನೀಡಲಾಗುತ್ತದೆ. ನೋಂದಣಿ ಮಾಡಿಕೊಂಡಿರುವವರು ಲಸಿಕೆ ಬೇಡ ಎಂದರೆ ನಿರಾಕರಿಸಬಹುದು. ಆದರೆ, ಒಂದು ಬಾರಿ ನಿರಾಕರಿಸಿದರೆ ಮತ್ತೆ ಹೊಸದಾಗಿ ನೋಂದಣಿ ಮಾಡಿಕೊಂಡೇ ಲಸಿಕೆ ಹಾಕಿಸಿಕೊಳ್ಳಬೇಕಾಗಿರುತ್ತದೆ.
ತಾಲೂಕಿನಲ್ಲಿ ಎಲ್ಲೆಲ್ಲಿ ಲಸಿಕಾ ಕೇಂದ್ರ?
ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ 2, ವಿಐಎಸ್’ಎಲ್ ಆಸ್ಪತ್ರೆಯಲ್ಲಿ 2, ಹೊಳೆಹೊನ್ನೂರಿನಲ್ಲಿ 1, ಮಾರಶೆಟ್ಟಿಹಳ್ಳಿಯಲ್ಲಿ 1, ಎಡೇಹಳ್ಳಿಯಲ್ಲಿ 1, ಆರ್ಯುವೇದಿಕ್ ಕಾಲೇಜಿನಲ್ಲಿ 1, ಅಂತರಗಂಗೆಯಲ್ಲಿ 1 ಸೇರಿದಂತೆ 11 ಲಸಿಕಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಜ.18ರ ಸೋಮವಾರದಿಂದ ಲಸಿಕೆ ಹಾಕಲಾಗುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post