ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಕರ್ತವ್ಯ ನಿರತನಾಗಿದ್ದ ಗುತ್ತಿಗೆ ನೌಕರನೊಬ್ಬರು ತೀವ್ರ ಹೃದಯಾಘಾತದಿಂದ ಇಂದು ಮುಂಜಾನೆ ನಿಧನರಾಗಿದ್ದು, ವಿಐಎಸ್’ಎಲ್ ಕಾರ್ಖಾನೆ ಮುಂಭಾಗದಲ್ಲಿ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ.
ವಿಐಎಸ್’ಎಲ್ ಗುತ್ತಿಗೆ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಅಂಥೋಣಿ ರಾಜ್(47) ಎನ್ನುವವರು ಇಂದು ಕರ್ತವ್ಯದಲ್ಲಿದ್ದಾಗಲೇ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.ಕಾರ್ಖಾನೆಯ ನಿಯಮಾವಳಿಗಳ ಅನ್ವಯ ಸಿಬ್ಬಂದಿಗಳು ಕರ್ತವ್ಯದಲ್ಲಿದ್ದ ವೇಳೆಯಲ್ಲಿ ಅಪಘಾತ ಅಥವಾ ಅವಘಡಗಳು ಸಂಭವಿಸಿದರೆ ಮಾತ್ರ ಪರಿಹಾರ ನೀಡಲಾಗುತ್ತದೆ. ಆದರೆ, ಈಗ ಅಂಥೋಣಿಯವರು ಹೃದಯಾಘಾತದಿಂದ ನಿಧನರಾಗಿರುವ ಹಿನ್ನೆಲೆಯಲ್ಲಿ ಪರಿಹಾರ ದೊರೆಯುವುದಿಲ್ಲ ಎಂದು ಹೇಳಲಾಗಿದೆ.
ಆದರೆ, ಅಂಥೋಣಿಯವರು ಕರ್ತವ್ಯದಲ್ಲಿದ್ದ ವೇಳೆಯಲ್ಲಿಯೇ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಮೃತರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕು ಹಾಗೂ ಕುಟುಂಬದಲ್ಲಿ ಓರ್ವರಿಗೆ ಉದ್ಯೋಗ ನೀಡಬೇಕು ಎಂದು ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಮಾಜಿ ಶಾಸಕ ಎಂ.ಜೆ. ಅಪ್ಪಾಜಿ ಗೌಡರ ಪುತ್ರ ಅಜಿತ್ ಗೌಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ.
ಈ ವಿಚಾರದ ಕುರಿತಾಗಿ ಮೃತರ ಕುಟುಂಬಸ್ಥರು-ನೌಕರರು-ಕಾರ್ಮಿಕರು ಹಾಗೂ ಕಾರ್ಖಾನೆ ಅಧಿಕಾರಿಗಳ ನಡುವೆ ವಾಗ್ವಾದ-ಮಾತುಕತೆಗಳು ನಡೆಯುತ್ತಿದೆ. ಶಾಸಕ ಬಿ.ಕೆ. ಸಂಗಮೇಶ್ವರ್ ಅವರು ಸ್ಥಳಕ್ಕೆ ಭೇಟಿ ನೀಡಿ, ಸಂಧಾನ ಮಾತುಕತೆ ನಡೆಸುತ್ತಿದ್ದಾರೆ.
ಈ ಕುರಿತಂತೆ ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post