ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಶಾಲಾ ಹಂತದ ಮಕ್ಕಳಿಗೆ ದೇಶಸೇವೆ, ವ್ಯಕ್ತಿತ್ವ ವಿಕಾಸ, ಸ್ವಾವಲಂಬನೆ ಹಾಗೂ ನೈತಿಕ ಮೌಲ್ಯಗಳ ಅಳವಡಿಕೆಗೆ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಸಹಕಾರಿ ಎಂದು ಚಳ್ಳಕೆರೆ ಬಿಇಒ ಕೆ.ಎಸ್. ಸುರೇಶ ಹೇಳಿದರು.
ಗ್ರಾಮದ ಕರ್ನಾಟಕ ಪಬ್ಲಿಕ್‌ಸ್ಕೂಲ್ ಆವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಚಳ್ಳಖೆರೆ ತಾಲೂಕು ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಹಾಗೂ ಶಿಕ್ಷಕರ ಸಂಘದ ವತಿಯಿಂದ ಹೋಬಳಿಯ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಮುಖ್ಯಶಿಕ್ಷಕರು, ಶಿಕ್ಷಕರಿಗೆ ಆಯೋಜಿಸಿದ್ದ ಭಾರತ್‌ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆಯ ಕಚೇರಿ, ಪುನಶ್ಚೇತನ ಶಿಬಿರ, ಹಾಗೂ ಘಟಕ ನೋಂದಣಿ ನವೀಕರಣ ಕಾರ್ಯಕ್ರಮ ಉಧ್ಘಾಟಿಸಿ, ಅವರು ಮಾತನಾಡಿದರು.

ಶಾಲೆಗಳಲ್ಲಿ ಭಾರತ್‌ಸೇವಾದಳ, ಸ್ಕೌಟ್ಸ್ ಅಂಡ್ ಗೈಡ್ಸ್‌ಗಳಂತಹ ಸ್ವಯಂ ಸೇವಾ ಸಂಸ್ಥೆಗಳನ್ನು ಸ್ಥಾಪಿಸಿ, ಇದರಡಿ ವಿದ್ಯಾರ್ಥಿಗಳಿಗೆ ನಿಯಮಿತವಾಗಿ ವಿವಿಧ ಚಟುವಟಿಕೆಗಳನ್ನು ಕೈಗೊಂಡು ಮಾನವ ಪ್ರೇಮ, ಮಾನವೀಯ ಮೌಲ್ಯಗಳನ್ನು ಕರಗತಗೊಳಿಸಬೇಕು ಎಂದರು.
ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆಯ ಮುಖ್ಯಸ್ಥ ನವೀನ್ ಪಾಟೀಲ್ ಮಾತನಾಡಿ, ಸರ್ಕಾರದ ನಿರ್ದೇಶನದಂತೆ ಸ್ಥಳೀಯ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರೆ, ರಾಜ್ಯಪಾಲರ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಹಾಗೂ ಅಂತಹವರಿಗೆ ವಿವಿಧ ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿ ನೀಡಲಾಗುವುದು ಎಂದು ವಿವರಿಸಿದರು.

ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ತಿಪ್ಪೇಸ್ವಾಮಿ ಮಾತನಾಡಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅನುದಾನ ಹಾಗೂ ಅನುದಾನರಹಿತ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಗಳ ಶಿಕ್ಷಕರು ತರಬೇತಿ ಪಡೆದು ಶಾಲೆಗಳಲ್ಲಿ ಮಕ್ಕಳ ದೈಹಿಕ-ಮಾನಸಿಕ ಬೆಳವಣಿಗೆಯ ವಿಕಾಸಕ್ಕೆ ಅನುವು ಮಾಡಿಕೊಡಬೇಕು ಎಂದು ತಿಳಿಸಿದರು.
ಹೋಬಳಿ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆಯ ಕಾರ್ಯದರ್ಶಿ ಒ. ನಾಗರಾಜು ಮಾತನಾಡಿ, ಸರ್ಕಾರ ಮತ್ತು ಸಂಸ್ಥೆಯ ನಿರ್ದೇಶನದಂತೆ ಶಿಕ್ಷಕರು ಆಗಾಗ ನಡೆಯುವ ತರಬೇತಿ ಶಿಬಿರಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ತಮ್ಮ ವೃತ್ತಿ ದಕ್ಷತೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದರು.
ಸಂಸ್ಥೆಯ ಉಪಾಧ್ಯಕ್ಷ ವೆಂಕಟರಮಣಪ್ಪ, ದೈಹಿಕ ಶಿಕ್ಷಕರಾದ ಜಿ. ಗುರುಲಿಂಗಪ್ಪ, ಕೇಶವಮೂರ್ತಿ, ಇಸಿಒ ರವಿಶಂಕರ್, ಶಿಕ್ಷಕರ ಸಂಘದ ಅಧ್ಯಕ್ಷ ಬಿ. ಈರಣ್ಣ, ಕೆಪಿಎಸ್ ಶಾಲೆಯ ಪ್ರಾಚಾರ್ಯೆ ಪುಷ್ಪಾವತಿ, ಉಪ ಪ್ರಾಚಾರ್ಯ ತುಂಗಭದ್ರಪ್ಪ, ಮುಖ್ಯ ಶಿಕ್ಷಕ ಕರಿಬಸವ ಶಾಸ್ತ್ರಿ ಸಂಸ್ಥೆಯ ಧ್ಯೇಯೋದ್ದೇಶಗಳ ಕುರಿತು ಮಾತನಾಡಿದರು
ಇದೇ ಸಂದರ್ಭದಲ್ಲಿ ಕಚೇರಿಯ ಆವರಣದಲ್ಲಿ ಸ್ಕೌಟ್ಸ್ ಅಂಡ್ ಗೈಡ್ಸ್‌ನ ಧ್ವಜಾರೋಹಣ, ಸಾಮೂಹಿಕ ಪ್ರಾರ್ಥನೆ, ಸಂಸ್ಥೆಯ ಕಾರ್ಯಚಟುವಟಿಕೆಗಳ ಕುರಿತು ಕಾರ್ಯಾಗಾರದಲ್ಲಿ ಚರ್ಚಿಸಲಾಯಿತು.
ಕೆಕೆಜಿಬಿವಿ ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಶಿಕ್ಷಕ ಡಿ.ಟಿ. ಹನುಮಂತರಾಯ ನಿರೂಪಿಸಿ, ಶಿಕ್ಷಕ ಜಗದೀಶ ವಂದಿಸಿದರು.
ವರದಿ: ಸುರೇಶ್ ಬೆಳಗೆರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















