ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ವಿಜಯಪುರ: ಮುಖ್ಯಮಂತ್ರಿ ಸ್ಥಾನ ಗೌರವಯುತವಾದ ಸ್ಥಾನವಾಗಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಎಲ್ಲರೂ ಗೌರವ ನೀಡಬೇಕೆಂದು ಕೃಷಿ ಸಚಿವರೂ ಆಗಿರುವ ಕೊಪ್ಪಳ ಉಸ್ತುವಾರಿ ಬಿ.ಸಿ. ಪಾಟೀಲ್ ಮನವಿ ಮಾಡಿದ್ದಾರೆ.
ವಿಜಯಪುರ ತಾಲೂಕಿನ ಇಟ್ಟಂಗಿಹಾಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಸಿ. ಪಾಟೀಲ್, ಮೀಸಲಾತಿ ಸಭೆಯಲ್ಲಿ ಯತ್ನಾಳ್ ಅಷ್ಟೇ ಭಾಗವಹಿಸಿಲ್ಲ. ಬೇರೆ ಬೇರೆ ಸಮುದಾಯದವರೂ ಭಾಗವಹಿಸಿದ್ದಾರೆ. ಆದರೆ ಸಿಎಂ ಸ್ಥಾನ ಗೌರವಯುತ ಸ್ಥಾನ, ಅದಕ್ಕೆ ಗೌರವ ಕೊಡಬೇಕು. ಮೀಸಲಾತಿ ಸಿಗದಿದ್ದರೆ ಸಮುದಾಯದ ಶಾಸಕರು, ಸಚಿವರು ರಾಜೀನಾಮೆ ನೀಡಬೇಕು ಎಂದು ಯತ್ನಾಳ ಹೇಳಿಕೆ ನೀಡಿರುವುದು ಅವರ ವೈಯಕ್ತಿಕ ಅಭಿಪ್ರಾಯ. ದೆಹಲಿಗೆ ಅವರನ್ನು ಏಕೆ ಕರೆಯಿಸಿಕೊಂಡರು ಎಂಬುದನ್ನು ಯತ್ನಾಳ್ ಅವರಿಗೆ ಕೇಳಬೇಕು. ಈ ಬಗ್ಗೆ ನನಗೇನು ಗೊತ್ತಿಲ್ಲ. ಅವರನ್ನು ದೆಹಲಿಗೆ ಕರೆದಿದ್ದರೆ ಅಲ್ಲಿಗೆ ಹೋದ ಬಳಿಕ ಅವರೇ ಪ್ರೆಸ್ ಮೀಟ್ ಮಾಡಿ ಹೇಳಬೇಕು. ರಾಜೀನಾಮೆ ಕೊಡುವವರು ಅದಕ್ಕೆ ಬದ್ಧರಾಗಿರಬೇಕು. ಯತ್ನಾಳ್ ಹೇಳಿದ ಮಾತ್ರಕ್ಕೆ ರಾಜೀನಾಮೆ ಕೊಡಬೇಕು ಎಂಬುದೇನಿಲ್ಲ ಎಂದು ಸೂಚ್ಯವಾಗಿ ಹೇಳಿದರು.
ಇದು ಜಾತ್ಯಾತೀತ ರಾಷ್ಟ್ರ, ಅವರವರ ಸಮುದಾಯಗಳಿಗೆ ಬೇಡಿಕೆ ಸಲ್ಲಿಸುವುದು ಅವರವರ ಹಕ್ಕು ಎಂದ ಮಾತ್ರಕ್ಕೆ ಈ ರೀತಿ ಬೇರೆಯವರ ಮೇಲೆ ಒತ್ತಡ ಹೇರುವುದು ಸರಿಯಲ್ಲ ಎಂದರು.
ಸುದ್ದಿಗಾರರೊಂದಿಗೆ ಮಾತನಾಡುವ ಮುನ್ನ ಬಬಲೇಶ್ವರ ಮತಕ್ಷೇತ್ರದ ಇಟ್ಟಂಗಿಹಾಳ ಫುಡ್ ಪಾರ್ಕ್ ನಿಯೋಜಿತ ಸ್ಥಳಕ್ಕೆ ಭೇಟಿ ನೀಡಿದ ಸಚಿವರು, ಮುಂಬರುವ ಬಜೆಟ್ ನಲ್ಲಿ ಇಟ್ಟಂಗಿಹಾಳ ಫುಡ್ ಪಾರ್ಕ್ ಗೆ ಸೂಕ್ತ ಅನುದಾನ ನೀಡಲಾಗುವುದು. ಇದರಿಂದ ಈ ಭಾಗದಲ್ಲಿ ಕೈಗಾರಿಕೆಗಳ ಅಭಿವೃದ್ಧಿಯಾಗಲಿದೆ. ಜೊತೆಗೆ ಉದ್ಯೋಗ ಸೃಷ್ಟಿಯೂ ಆಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ್, ಜಿ. ಪಂ. ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ಬೀಜ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡಾ ಪಾಟೀಲ ಸೇರಿದಂತೆ ಮತ್ತಿತ್ತೆ ಅಧಿಕಾರಿಗಳು ಭಾಗಿಯಾಗಿದ್ದರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news









Discussion about this post