ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಪುತ್ತೂರು: ನಾಟಕ ಅನ್ನುವುದು ಅದ್ಭುತವಾದ ಕಲೆ. ನೂರಕ್ಕೆ ನೂರು ಪ್ರತಿಶತವಾಗಿ ಕಲಾವಿದನಾದವನು ತನ್ನನ್ನು ಆ ಪಾತ್ರದಲ್ಲಿ ತೊಡಗಿಸಿಕೊಳ್ಳಬೇಕು. ಈ ಕಲಾಕ್ಷೇತ್ರ ಜೀವನಕ್ಕೆ ಒಂದು ದಿಕ್ಕು ತೋರಿಸುವ ಕ್ಷೇತ್ರ. ಈ ಕಲಾಪ್ರಕಾರಗಳು ಹಳ್ಳಿ ಹಳ್ಳಿಗೆ ತಲುಪಬೇಕು. ಸಮಾಜವನ್ನು ತಿದ್ದಿ ಅದನ್ನು ಎತ್ತರಕ್ಕೆ ಏರಿಸುವಂತಹ ಕ್ಷೇತ್ರ ಅದು. ಆ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಗಳು ನಡೆಯಬೇಕು ಎಂದು ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದರು.
ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದಲ್ಲಿ ಕಾಲೇಜಿನ ಪದವಿ ಹಾಗೂ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ ಹಾಗೂ ಐಕ್ಯೂಎಸಿ ಘಟಕ, ಕರ್ನಾಟಕ ನಾಟಕ ಅಕಾಡೆಮಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ಒಂದು ದಿನದ ರಂಗ ವಿಮರ್ಶಾ ಕಮ್ಮಟದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭಾರತ ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುವ ದೇಶ. ಇಲ್ಲಿ ಭಾಷೆಗಳು ಹಲವು, ನಡೆ-ನುಡಿಗಳು, ವೇಷ-ಭೂಷಣಗಳು ಹಲವು. ಆದಾಗ್ಯೂ ಏಕತೆಯನ್ನು ಸಾಧಿಸಿದ ಹೆಮ್ಮ ನಮ್ಮ ಭಾರತೀಯರದ್ದು. ಈ ದೇಶದ ಸಂಸ್ಕೃತಿ- ಸಭ್ಯತೆಯನ್ನು ರೂಢಿಸಿಕೊಳ್ಳುವುದು ನಮ್ಮ ಅಸ್ಮಿತೆ. ನಮ್ಮತನದಿಂದ, ನಮ್ಮ ವ್ಯಕ್ತಿತ್ವದಿಂದ ನಮ್ಮನ್ನು ಗುರುತಿಸುವಂತಾಗಬೇಕು ಎಂದು ತಿಳಿಸಿದರು.
ಹಿರಿಯ ಪತ್ರಕರ್ತ, ಸಾಹಿತಿ ಪ್ರೊ. ವಿ.ಬಿ. ಅರ್ತಿಕಜೆ ಮಾತನಾಡಿ, ಪತ್ರಿಕೋದ್ಯಮದ ಮುಖ್ಯ ಉದ್ದೇಶ ಸಮಾಚಾರ, ವಿಚಾರ ಹಾಗೂ ಪ್ರಚಾರ. ಆಧ್ಯತೆ, ಬಾಧ್ಯತೆ, ಸಾಧ್ಯತೆಗಳನ್ನು ಅರಿತುಕೊಂಡು ಬರೆಯಬೇಕು. ಯಾವುದನ್ನು ಎಷ್ಟರ ಮಟ್ಟಿಗೆ ಬರಿಯಬೇಕು, ಏನನ್ನು ಬರಿಯಬೇಕು ಅಂತೆಯೇ ಏನನ್ನು ಬರೆಯಬಾರದು ಎಂಬುವುದನ್ನು ಪತ್ರಕರ್ತರು ತಿಳಿದಿರಬೇಕು. ವಿಷಯಗಳ ಉತ್ಪೇಕ್ಷೆಯೂ ಆಗಬಾರದು ಅಂತೆಯೇ ಅವಪ್ರೇಕ್ಷೆಯೂ ಆಗಬಾರದು ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರವನ್ನು ವಿತರಿಸಿದ ವಿವೇಕಾನಂದ ಮಹಾವಿದ್ಯಾಲಯದ ಆಡಳಿತ ಮಂಡಳಿ ಸಂಚಾಲಕ ಮುರಳಿಕೃಷ್ಣ ಕೆ. ಎನ್. ಮಾತನಾಡಿ, ವಿದ್ಯಾರ್ಥಿಗಳಿಗೆ ರಂಗಭೂಮಿ, ನಾಟಕ ತರಬೇತಿಗಳನ್ನು ನಡೆಸಿದಾಗ, ಅವರಲ್ಲಿನ ಬಹುಮುಖ ಪ್ರತಿಭೆಯನ್ನು ಹೊರತರಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಎಂದರು.
ಮುಖ್ಯ ಅಭ್ಯಾಗತರಾಗಿ ಆಗಮಿಸಿದ ಹಿರಿಯ ಪತ್ರಕರ್ತ ಯು. ಎಲ್. ಉದಯ ಕುಮಾರ್ ಮಾತನಾಡಿ, ನಾಟಕ ವಿಮರ್ಶೆಗಳು ಕಲಾವಿದರನ್ನು ಬೆಳೆಸುತ್ತದೆ. ಕಲಾವಿದರ ಅಭಿನಯವನ್ನು ವೃದ್ಧಿ ಪಡಿಸಿಕೊಳ್ಳುವಲ್ಲಿ ಈ ವಿಮರ್ಶೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ನಟ ಎಂ. ಕೆ. ಮಠ ಅವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ವಿವೇಕಾನಂದ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ವಿಷ್ಣು ಗಣಪತಿ ಭಟ್ ಉಪಸ್ಥಿತರಿದ್ದರು.
ಕಾಲೇಜಿನ ಪತ್ರಿಕೋದ್ಯಮ ಉಪನ್ಯಾಸಕಿ ಭವ್ಯ ಪಿ. ಆರ್ ನಿಡ್ಪಳ್ಳಿ ಸ್ವಾಗತಿಸಿ, ಸ್ನಾತಕೋತ್ತರ ಪತ್ರಿಕೋದ್ಯಮದ ವಿದ್ಯಾರ್ಥಿನಿ ಪವಿತ್ರ ಭಟ್ ವಂದಿಸಿದರು. ಸ್ನಾತಕೋತ್ತರ ಪತ್ರಿಕೋದ್ಯಮದ ವಿದ್ಯಾರ್ಥಿನಿ ಪ್ರಜ್ಞಾ ಓಡಿಳ್ನಾಳ ಕಾರ್ಯಕ್ರಮ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post