ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಿತ್ರದುರ್ಗ: ಕನ್ನಡದ ಸಾರಸ್ವತ ಲೋಕಕ್ಕೆ ಗ್ರಾಮೀಣ ಭಾಗದ ಪ್ರತಿಭಾವಂತರ ಕೊಡುಗೆ ಅಪಾರವಾಗಿದೆ ಎಂದು ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ, ಪ್ರೊ.ಎಂ.ಬಿ. ನಂಜುಂಡಸ್ವಾಮಿ, ಕೆ.ಎಸ್. ಪುಟ್ಟಣ್ಣಯ್ಯ ಅವರ ಸಮಕಾಲೀನ ಹೋರಾಟಗಾರ ಸೋಮಗುದ್ದು ರಂಗಸ್ವಾಮಿ ಹೇಳಿದರು.
ನಗರದ ನೌಕರರ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಕೊರ್‍ಲಕುಂಟೆ ತಿಪ್ಪೇಸ್ವಾಮಿ ಪರವಾಗಿ ಆಯೋಜಿಸಿದ್ದ ಕಸಾಪ ಸದಸ್ಯರೊಂದಿಗೆ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಚಟುವಟಿಕೆಗಳು ಹಳ್ಳಿಗಳತ್ತ ಪಸರಿಸಬೇಕಿದೆ. ಗಡಿಭಾಗದ ಸಮಸ್ಯೆಗಳ ನಡುವೆ ಕನ್ನಡ ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿ ಕನ್ನಡಪರ ಹೋರಾಟ ಹಾದಿಯಲ್ಲಿರುವ ಕೊರ್‍ಲಕುಂಟೆ ತಿಪ್ಪೇಸ್ವಾಮಿ ಅವರಿಗೆ ಈ ಬಾರಿ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಜಯ ಸಿಗಲಿ ಎಂದು ಹಾರೈಸಿ, ಕಿರು ಕಾಣಿಕೆ ಸಲ್ಲಿಸುವ ಮೂಲಕ ಚುನಾವಣಾ ಕಾರ್ಯ ಚಟುವಟಿಕೆಗಳಿಗೆ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಸಂಪೂರ್ಣ ಬೆಂಬಲ ತಿಪ್ಪೇಸ್ವಾಮಿ ಅವರಿಗೆ ಇರುತ್ತದೆ ಎಂದು ಘೋಷಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಗಡಿನಾಡು ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಎಚ್. ರಾಮಚಂದ್ರಪ್ಪ ಮಾತನಾಡಿ, ಸಾಹಿತ್ಯ ಪರಿಷತ್ತಿನಲ್ಲಿ ಚುನಾವಣೆ ಬಿರುಸು ಕಾಣುತ್ತಿರುವುದು ಅಪಾಯಕಾರಿ. ನಾಡಾಭಿಮಾನದ ಕಾರ್ಯ ಸೇವೆಯಲ್ಲಿ ಒಗ್ಗಟ್ಟಿನ ಮಂತ್ರ ಇರಬೇಕು. ಕನ್ನಡ ಸಾಹಿತ್ಯ ಪರಿಷತ್ತು ಗಡಿಭಾಗದವರಿಗೆ ದಕ್ಕಬೇಕಾಗಿದೆ. ಸುಮಾರು ೨೦ ವರ್ಷಗಳ ಹಿಂದೆ ಗಡಿಭಾಗವಾದ ಕೊರ್‍ಲಕುಂಟೆಯಲ್ಲಿ ಕನ್ನಡ ರಕ್ಷಣಾ ಸಂಘಟನೆಯೊಂದಿಗೆ ಕನ್ನಡ ಸೇವೆಗೆ ಅಣಿಯಾದ ಕೊರಲಕುಂಟೆ ತಿಪ್ಪೇಸ್ವಾಮಿ ಅವರಲ್ಲಿ ನಿಸ್ವಾರ್ಥ ಸೇವಾ ಮನೋಭಾವ ಇದೆ. ಚುನಾವಣೆಯಲ್ಲಿ ಅವರ ಪರವಾಗಿ ಬೆಂಬಲಿಸುವುದಾಗಿ ಹೇಳಿದರು.

ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಡಿ. ಈಶ್ವರಪ್ಪ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಿಪಿಐ ಮುಖಂಡ ಸಿ.ವೈ. ಶಿವರುದ್ರಪ್ಪ, ಅಖಿಲ ಭಾರತ ಕಿಸಾನ್ ಸಭಾ ರಾಜ್ಯಾಧ್ಯಕ್ಷ ದೊಡ್ಡ ಉಳ್ಳಾರ್ತಿ ಕರಿಯಣ್ಣ, ಕಸಾಪ ಸದಸ್ಯ ಯಾದಲಗಟ್ಟೆ ಜಗನ್ನಾಥ, ಸಾಯಿಚೇತನ ವಿದ್ಯಾಸಂಸ್ಥೆ ಕಾರ್ಯದರ್ಶಿ ಎಂ. ಸರಸ್ವತಮ್ಮ, ದಸಂಸ ಸಂಚಾಲಕ ಟಿ. ವಿಜಯಕುಮಾರ್ ಮಾತನಾಡಿದರು.
ನೃತ್ಯ ನಿಕೇತನ ಸಂಸ್ಥೆಯ ಯು.ಎಸ್. ವಿಷ್ಣುಮೂರ್ತಿರಾವ್, ಎಂ.ಎನ್. ಮೃತ್ಯಂಜಯ, ಪಗಡಲಬಂಡೆ ನಾಗೇಂದ್ರಪ್ಪ, ದುರ್ಗಾವರ ತಿಪ್ಪೇಸ್ವಾಮಿ, ಕ್ಲಾಸಿಕ್ ಚಂದ್ರಶೇಖರ್ ಮತ್ತಿತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















