ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಎಪ್ರಿಲ್ 12ರಂದು ನಡೆಯಲಿರುವ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಚರ್ಚಿಸುವ ವಿಷಯಗಳ ಪಟ್ಟಿಯಲ್ಲಿ ಮೇಯರ್ ಸಹಿಯೇ ಇಲ್ಲದ ವಿಚಾರವೊಂದು ಸೇರಿಕೊಂಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಹೌದು… ನಗರದ ಹೃದಯ ಭಾಗದಲ್ಲಿರುವ ಬ್ಯಾರಿ ಮಾಲ್ ಲೀಸ್ ಅವಧಿಯನ್ನು ವಿಸ್ತರಣೆ ಮಾಡುವ ಹಾಗೂ ಬಾಡಿಗೆಯನ್ನು ರಿಯಾಯ್ತಿ ನೀಡುವ ಕುರಿತಾಗಿನ ಚರ್ಚೆಯ ವಿಚಾರ ಸಭೆಯ 17ನೆಯ ವಿಷಯವಾಗಿ ಸೇರ್ಪಡೆಯಾಗಿದೆ. ಆದರೆ, ಇದಕ್ಕೆ ಮೇಯರ್ ಸಹಿಯೇ ಇಲ್ಲ ಎಂದು ಹೇಳಲಾಗಿರುವುದು ಹಲವು ರೀತಿಯ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಬ್ಯಾರೀಸ್ ಗೋಲ್ಡನ್ ಹಾರ್ವೆಸ್ಟ್ ಹೋಲ್ಡಿಂಗ್ಸ್ ಸಂಸ್ಥೆಯ 32 ವರ್ಷಗಳ ಲೀಸ್ ಅವಧಿಯನ್ನು 99 ವರ್ಷಕ್ಕೆ ವಿಸ್ತರಣೆ ಮಾಡುವ ವಿಚಾರವನ್ನು ಚರ್ಚೆಯ ಪಟ್ಟಿಯಲ್ಲಿ ಸೇರಿಸಲಾಗಿದೆ. ಆದರೆ, ಲೀಸ್ ಮುಕ್ತಾಯ ಅವಧಿ ಇನ್ನೂ 18 ರಿಂದ 20 ವರ್ಷಗಳ ಕಾಲ ಬಾಕಿ ಇರುವಾಗಲೇ ಈ ವಿಸ್ತರಣೆ ಚರ್ಚೆ ಈಗೇಕೆ ಎನ್ನುವುದು ಪ್ರಶ್ನೆ?
ಕಳೆದ ವಾರ ಈ ವಿಷಯವನ್ನು ಪ್ರಸ್ತಾಪಿಸಿ ಸಾಮಾನ್ಯ ಸಭೆಯಲ್ಲಿ ಕೊನೆಯದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ಚರ್ಚೆಗೆ ತರಲು ಉದ್ದೇಶಿಸಲಾಗಿತ್ತು. ಇದನ್ನ ಮೇಯರ್ ತಿರಸ್ಕರಿಸಿದ್ದಾರೆ. ಅವಧಿ ಮುಗಿಯುವಾಗಲೇ ವಿಸ್ತರಣೆಯ ಅವಸರವೇನು ಎಂದು ತಿರಸ್ಕರಿಸಿ, ಸಹಿ ಮಾಡಿಲ್ಲ ಎಂದು ಹೇಳಲಾಗಿದೆ.
ಇನ್ನು, ಲಾಕ್ ಡೌನ್ ಅವಧಿಯ ಅಂದರೆ ಕಳೆದ ಎಪ್ರಿಲ್’ನಿಂದ ಸೆಪ್ಟೆಂಬರ್ ವರೆಗಿನ ಬಾಡಿಗೆಯಲ್ಲಿ ರಿಯಾಯ್ತಿ ನೀಡುವ ವಿಚಾರವೂ ಸಹ ಇದೇ ಪಟ್ಟಿಯಲ್ಲಿದೆ. ಕೋಟ್ಯಂತರ ರೂ. ಹೂಡಿಕೆ ಮಾಡಿ ವ್ಯವಹಾರ ನಡೆಸುವ ದೊಡ್ಡ ಕಂಪೆನಿಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಈ ರಿಯಾಯ್ತಿ ನೀಡುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಸಾರ್ವಜನಿಕ ವಲಯದಲ್ಲಿ ಎದ್ದಿರುವ ಚರ್ಚೆಯಾಗಿದೆ.
ಈ ಎರಡೂ ವಿಚಾರಗಳ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಕೆಲವು ಬಿಜೆಪಿ ಸದಸ್ಯರು ಹಾಗೂ ಅಧಿಕಾರಿಗಳು ಇಂತಹ ವಿಚಾರವನ್ನು ಚರ್ಚೆಗೆ ತಂದು ಬ್ಯಾರೀಸ್ ಗೋಲ್ಡನ್ ಹಾರ್ವೆಸ್ಟ್ ಹೋಲ್ಡಿಂಗ್ಸ್ ಸಂಸ್ಥೆಗೆ ಅನುಕೂಲ ಮಾಡಿಕೊಡಲು ಯತ್ನಿಸುತ್ತಿದ್ದಾರೆ ಎಂಬ ಮಾತುಗಳು ಪಾಲಿಕೆ ಮೊಗಸಾಲೆಯಲ್ಲಿ ಕೇಳಿಬರುತ್ತಿದೆ.
ಏನೇ ಆದರೂ, ಸಾರ್ವಜನಿಕ ಸ್ವತ್ತಿನ ಲೀಸ್ ಅವಧಿ ಇನ್ನೂ ಎರಡು ದಶಕಗಳ ಕಾಲ ಇರುವಾಗಲೇ ವಿಸ್ತರಣೆ ಮಾಡುವುದು ಹಾಗೂ ಇದಕ್ಕಾಗಿ ನಿಯಮಗಳು-ನೈತಿಕತೆಯನ್ನು ಗಾಳಿಗೆ ತೂರಿ ಕಾಣದ ಕೈಗಳು ಯಾರನ್ನು ಉದ್ದಾರ ಮಾಡಲು ಹೊರಟಿವೆ ಎಂಬುದು ಸಾರ್ವಜನಿಕರ ಪ್ರಶ್ನೆ….
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















