ಕಲ್ಪ ಮೀಡಿಯಾ ಹೌಸ್
ಸಾಗರ: ತಾಲೂಕು ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಶಾಸಕ ಹೆಚ್. ಹಾಲಪ್ಪ ಅವರು ಇಂದು ಕೋವಿಡ್ ನಿಯಂತ್ರಿಸಲು ತೆಗೆದುಕೊಳ್ಳಬಹುದಾದ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ನೆಡೆಸಿದರು.
ಪ್ರತಿನಿತ್ಯ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವುದನ್ನು ನಿಯಂತ್ರಿಸಲು ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಲು ತಾಲ್ಲೂಕಿನಾದ್ಯಂತ ಜಾಗೃತಿ ಮೂಡಿಸಲು ಕ್ರಮಕೈಗೊಳ್ಳುವ ಬಗ್ಗೆ ಹಾಗೂ ಕಾನೂನು ಉಲ್ಲಂಘಿಸಿದವರಿಗೆ ದಂಡ ವಸೂಲಿ ಮಾಡುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು ಎನ್ನಲಾಗಿದೆ.
ಮುಂಜಾಗೃತವಾಗಿ ಹಾಸ್ಟೆಲ್‌ಗಳನ್ನು ಕೋವಿಡ್ ಕೇರ್ ಸೆಂಟರ್‌ಗಳಾಗಿ ಪರಿವರ್ತಿಸಬೇಕು. ಹಾಗೂ ಗ್ರಾಮ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ಸಮಿತಿಗಳನ್ನು ಚುರುಕುಗೊಳಿಸಬೇಕು. ಸಂಚಾರಿ ಮೊಬೈಲ್ ವಾಹನಗಳ ಮೂಲಕ ಸ್ವಾಬ್ ಟೆಸ್ಟ್ ಪರೀಕ್ಷೆಗಳನ್ನು ಹೆಚ್ಚಿಸುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.
ಪ್ರಸಕ್ತ ಅನುಸರಿಸುತ್ತಿರುವ ನಿಯಮಗಳ ಕುರಿತು ಹಾಗೂ ಸಾಗರ ಉಪವಿಭಾಗೀಯ ಅಸ್ಪತ್ರೆಯಲ್ಲಿ 50 ಹಾಸಿಗೆಗಳನ್ನು (ಪ್ರತ್ಯೇಕವಾಗಿ) ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಿರುವುದು, ಅಗತ್ಯವಾದ ಆಮ್ಲಜನಕ ಲಭ್ಯವಿದೆಯೇ ಮತ್ತು ಅಗತ್ಯವಾದ ಔಷದ ಲಭ್ಯವಿದೆಯೇ ಎಂಬುದರ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ತಾಲೂಕಿನಲ್ಲಿ 53,000 ಕೋವಿಡ್ ಲಸಿಕೆ ಗುರಿ ನೀಡಿದ್ದು, ಈಗಾಗಲೇ 21,100 ಲಸಿಕೆ ನೀಡಲಾಗಿದೆ ಎಂದು ಇದೇ ಸಂದರ್ಭದಲ್ಲಿ ಅಧಿಕಾರಿಗಳು ಶಾಸಕರಿಗೆ ಮಾಹಿತಿ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
















