ಕಲ್ಪ ಮೀಡಿಯಾ ಹೌಸ್
ಭದ್ರಾವತಿ : ನಾಳೆ ನಗರದಲ್ಲಿ ಬಹಳಷ್ಟು ಮದುವೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ಕಲ್ಯಾಣ ಮಂಟಪಗಳಿಗೆ ನಗರಸಭೆ ಆಯುಕ್ತ ಮನೋಹರ್ ಭೇಟಿ ನೀಡಿ ಕೋವಿಡ್ ನಿಯಮಾವಳಿಗಳು ಪಾಲನೆಯಾಗುತ್ತಿವೆಯೇ ಎಂಬ ಕುರಿತಾಗಿ ಪರಿಶೀಲನೆ ನಡೆಸಿದರು.
ನಾಳೆ ನಗರದ ಬಹುತೇಕ ಕಲ್ಯಾಣ ಮಂಟಪದಲ್ಲಿ ವಿವಾಹ ನಡೆಯುತ್ತಿವೆ. ಇದರ ಅಂಗವಾಗಿ ಇಂದು ಸಂಜೆ ಆರತಕ್ಷತೆಗಳು ನಡೆದವು. ಈ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿಯಲ್ಲಿರುವ ಎಲ್ಲ ಕಲ್ಯಾಣ ಮಂಟಪಗಳಿಗೆ ಆಯುಕ್ತರು ಭೇಟಿ ನೀಡಿದರು.
ನಗರದ ಬಸವೇಶ್ವರ ಸಭಾಭವನ, ಶಂಕರ ಮಠ ಕಲ್ಯಾಣ ಮಂಟಪ, ಮಂಜುನಾಥ ಕಲ್ಯಾಣ ಮಂಟಪ, ವೀರಶೈವ ಕಲ್ಯಾಣ ಮಂಟಪ, ವರದರಾಜ ಕಲ್ಯಾಣ ಮಂಟಪ, ಭಂಟರ ಭವನ, ಮೊದಲಿಯಾರ್ ಕಲ್ಯಾಣ ಮಂಟಪ, ವುಳ್ಳುವರ್ ಕಲ್ಯಾಣ ಮಂಟಪ ಸೇರಿದಂತೆ ಹಲವು ಕಡೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಾಳೆ ಮುಹೂರ್ತಗಳು ನಡೆಯಲಿದ್ದು, 50ಕ್ಕಿಂತಲೂ ಹೆಚ್ಚು ಜನರನ್ನು ಸೇರಿಸದಂತೆ, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ವಧು-ವರನ ಕುಟುಂಬಸ್ಥರಿಗೆ ಹಾಗೂ ಕಲ್ಯಾಣ ಮಂಟಪಗಳ ಸಿಬ್ಬಂದಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಿಗದಿಗಿಂತಲೂ ಹೆಚ್ಚು ಜನ: 5000 ರೂ. ದಂಡ
ಮೊದಲಿಯಾರ್ ಸಮುದಾಯ ಭವನಕ್ಕೆ ಭೇಟಿ ನೀಡಿದ ಆಯುಕ್ತರು ಕೋವಿಡ್ ನಿಯಮ ಪಾಲನೆ ಕುರಿತಾಗಿ ಮಾಹಿತಿ ಪಡೆದು, ನೆರೆದಿದ್ದ ಜನರನ್ನು ಲೆಕ್ಕ ಹಾಕಿಸಿದರು. ಈ ವೇಳೆ 70ಕ್ಕೂ ಅಧಿಕ ಮಂದಿ ಸಮಾರಂಭದಲ್ಲಿ ಪಾಲ್ಗೊಂಡಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಐದು ಸಾವಿರ ರೂ. ದಂಡ ವಿಧಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















