ಕಲ್ಪ ಮೀಡಿಯಾ ಹೌಸ್
ಚನ್ನಗಿರಿ : ರಾಜ್ಯದಲ್ಲಿ ಕೊರೋನಾ ನಿಯಂತ್ರಣ ಮಾಡಯವಲ್ಲಿ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ವ್ಯಾಕ್ಸಿನ್ ಹಾಗೂ ಆಕ್ಸಿಜನ್ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾದ ಬಸವರಾಜು ವಿ ಶಿವಗಂಗಾ ಆರೋಪಿಸಿದ್ದಾರೆ.
ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಕೊರೋನಾ ಸೋಂಕಿತರಿಗೆ ಸರಿಯಾಗಿ ವೈದ್ಯಕೀಯ ಸೌಲಭ್ಯ ಸಿಗುತ್ತಿಲ್ಲ. ಜಿಲ್ಲಾ ಆಸ್ಪತ್ರೆಗಳಲ್ಲಿ ಬೆಡ್ ಮತ್ತು ಆಕ್ಸಿಜನ್ ಸಿಗದಂತಾಗಿದೆ ಎಂದರು. ಕೊರೋನಾ ಹಿನ್ನೆಲೆ ಮುಂಜಾಗ್ರತಾ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ಮಾಡಿರುವುದರಿಂದ ಇಂದು ಬಡ ಜನರು ಸೂಕ್ತ ಚಿಕಿತ್ಸೆ ಸಿಗದೇ ಸಾಯುವಂತಾಗಿದೆ. ಆಕ್ಸಿಜನ್ ಕೊರೆತೆಯಿಂದ ಎಷ್ಟೋ ಜನರು ಕೊನೆಯುಸಿರು ಎಳೆಯುತ್ತಿದ್ದಾರೆ ಎಂದು ಹೇಳಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗಳಲ್ಲಿನ ಪರಿಸ್ಥಿತಿ ನಿಭಾಯಿಾುವಲ್ಲಿ ವಿಫಲರಾಗುತ್ತಿದ್ದಾರೆ. ದಾವಣಗೆರೆ ಜಿಲ್ಲೆ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲೂ ಕೊರೊನಾ ಹೆಚ್ಚಾಗುತ್ತಿದ್ದು ಜನರು ಆತಂಕದಲ್ಲಿ ಜೀವನ ಮಾಡುವಂತಾಗಿದೆ. ಹಳ್ಳಿಗಳಲ್ಲಿ ಜನರಿಗೆ ಅರಿವು ಇಲ್ಲದೇ ಆಸ್ಪತ್ರೆ ಸೌಲಭ್ಯವಿಲ್ಲದೆ ಕೊರೊನಾದಂತ ಮಹಾಮಾರಿಗೆ ಬಲಿಯಾಗುತ್ತಿದ್ದಾರೆ ತಾಲ್ಲೂಕ್ ಮಟ್ಟದ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೌಲಭ್ಯ ನುರಿತ ವೈದ್ಯರು ಇಲ್ಲದ ಕಾರಣ ಸೋಂಕಿತರು ಪ್ರಾಣ ಕಳೆದುಕೊಳ್ಳುವಂತಾಗಿದೆ ಎಂದರು.
ಕೇಂದ್ರ ಸರ್ಕಾರ ಇತರೆ ರಾಜ್ಯಗಳ ಬೇಡಿಕೆಗೆ ಅನುಗುಣವಾಗಿ ಹೆಚ್ಚುವರಿ ಆಕ್ಸಿಜನ್ ಪೂರೈಕೆ ಮಾಡುತ್ತಿದೆ ಆದರೆ ಕರ್ನಾಟಕಕ್ಕೆ ಮಲತಾಯಿ ಧೋರಣೆ ನೀತಿ ಅನುಸರಿಸುತ್ತಿದೆ ಎಂದು ಬಸವರಾಜು ವಿ ಶಿವಗಂಗಾ ತಿಳಿಸಿದರು. ಈಗಾಗಲೇ ಕೋವಿಡ್ 1 ನೇ ಅಲೆಯಿಂದ ಜನರು ಸಂಕಷ್ಟದಲ್ಲಿದ್ದು ಇದೀಗ 2 ನೇ ಅಲೆಯಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸರ್ಕಾರ ಶ್ರಮಿಕರು, ಬಡವರು, ನಿರುದ್ಯೋಗಿಗಳು ಸೇರಿದಂತೆ ರೈತರಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು.
ಈ ನಡುವೆ ಮುಂಗಾರ ಮಳೆ ಆರಂಭವಾಗುತ್ತದೆ, ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತಾರೆ ಆದರೆ ಕೋವಿಡ್ ಹಿನ್ನೆಲೆ ಅನ್ನದಾತರು ಇದೀಗ ಕೃಷಿ ಚಟುವಟಿಕೆ ಆರಂಭ ಮಾಡಲು ಬೇಕಾದ ಸೌಲಭ್ಯ ಒದಗಿಸಬೇಕು. ರೈತರಿಗೆ ಸೂಕ್ತ ಸಲಹೆ ನೀಡಿ ಮಾರ್ಗದರ್ಶನ ಅರಿವು ಮೂಡಿಸಬೇಕೆಂದರು. ಸರ್ಕಾರ ಹೀಗೆ ನಿರ್ಲಕ್ಷ್ಯ ಧೋರಣೆ ತಾಳಿದರೆ ಜನ ಸಾಮಾನ್ಯರಿಗೆ ಮತ್ತಷ್ಟು ಕಷ್ಟವಾಗುತ್ತದೆ ಸರ್ಕಾರ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಿ ಕೋವಿಡ್ ನಿಯಂತ್ರಣ ಮಾಡಬೇಕೆಂದು ಬಸವರಾಜು ವಿ ಶಿವಗಂಗಾ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post