ಕಲ್ಪ ಮೀಡಿಯಾ ಹೌಸ್
ಸೌದಿ ಅರೇಬಿಯಾ: ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆ ಕಡಿಮೆ ಮಾಡುವುದಕ್ಕೆ ಸೌದಿ ಅರೇಬಿಯಾದಲ್ಲಿ ಕಠಿಣ ನಿಯಮವನ್ನು ಜಾರಿಗೊಳಿಸಲಾಗಿದ್ದು, ಧ್ವನಿವರ್ಧಕಗಳ ಬಳಕೆಗೆ ನಿರ್ಬಂಧ ಹೇರಲಾಗಿದೆ.
ಈ ಕುರಿತಂತೆ ಅಲ್ಲಿನ ಸರ್ಕಾರ ಆದೇಶ ಹೊರಡಿಸಿದ್ದು, ದಿನದಲ್ಲಿ ಎರಡೇ ಬಾರಿ ಧ್ವನಿವರ್ಧಕ ಬಳಕೆ ಮಾಡಬೇಕು, ಅದು ಕೂಡ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಶಬ್ದ ಮಾಡಿ ಅದರ ಬಳಕೆ ಮಾಡಬೇಕು. ಇಲ್ಲದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಅಜಾನ್ (ಪ್ರಾರ್ಥನೆಗಾಗಿ ಕರೆ) ಮತ್ತು ಇಕಾಮಾತ್ಗೆ (ಪ್ರಾರ್ಥನೆ ಸಲ್ಲಿಸುವ ಇಮಾಮ್ ತಮ್ಮ ಜಾಗಕ್ಕೆ ಆಗಮಿಸಿದ್ದಾರೆ ಎಂದು ಹೇಳುವ ಸಲುವಾಗಿನ ಎರಡನೆಯ ಬಾರಿಯ ಪ್ರಾರ್ಥನೆ) ಮಾತ್ರ ಧ್ವನಿವರ್ಧಕ ಬಳಕೆ ಮಾಡಬೇಕು, ಧ್ವನಿವರ್ಧಕಗಳ ಶಬ್ದವನ್ನು ಗರಿಷ್ಠ ಮಟ್ಟದ ಮೂರನೇ ಒಂದು ಭಾಗಕ್ಕೆ ಸೀಮಿತಗೊಳಿಸಬೇಕು ಎಂದು ಸೂಚಿಸಿದೆ ಎನ್ನಲಾಗಿದೆ.
ಸೌದಿ ಇಸ್ಲಾಮಿಕ್ ವ್ಯವಹಾರಗಳ ಸಚಿವ ಅಬ್ದುಲ್ ಲತೀಫ್ ಅಲ್-ಶೇಖ್ ಅವರು ಈ ಕುರಿತು ಸುತ್ತೋಲೆ ಹೊರಡಿಸಿದ್ದು, ಎಲ್ಲಾ ಮಸೀದಿಗಳು ಸುತ್ತೋಲೆಯಲ್ಲಿನ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸಬೇಕು ಎಂದಿದ್ದಾರೆ.
ಷರಿಯಾ ನಿಯಮಗಳ ಪ್ರಕಾರ, ಪ್ರಾರ್ಥನೆಯ ಸಮಯದಲ್ಲಿ ಇಮಾಮ್ನ ಧ್ವನಿಯನ್ನು ಮಸೀದಿಯೊಳಗಿನ ಎಲ್ಲರೂ ಕೇಳಬೇಕು. ಆದರೆ ಹೊರಗಿನ ನೆರೆಹೊರೆಯ ಮನೆಗಳಲ್ಲಿನ ಜನರು ಇದನ್ನು ಕೇಳುವ ಅಗತ್ಯವಿಲ್ಲ. ಪ್ರಾರ್ಥನೆಯ ಸಮಯದಲ್ಲಿ ಮಸೀದಿಗಳು ಜೋರಾಗಿ ಧ್ವನಿವರ್ಧಕ ಬಳಕೆ ಮಾಡುತ್ತಿರುವ ಕಾರಣ, ರೋಗಿಗಳು, ವೃದ್ಧರು ಮತ್ತು ಹತ್ತಿರ ವಾಸಿಸುವ ಮಕ್ಕಳಿಗೆ ಸಮಸ್ಯೆಯಾಗುತ್ತಿದೆ. ಆದ್ದರಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post