ಕಲ್ಪ ಮೀಡಿಯಾ ಹೌಸ್
ಶಂಕರಘಟ್ಟ: 2020-21ನೇ ಶೈಕ್ಷಣಿಕ ಸಾಲಿನಿಂದ ಪೂರ್ವಾನುಮತಿ ಇಲ್ಲದೆಯೇ ಪೂರ್ಣ ಪ್ರಮಾಣದಲ್ಲಿ ಆನ್‌ಲೈನ್ ಕೋರ್ಸ್‌ಗಳನ್ನು ಪ್ರಾರಂಭಿಸಲು ಕುವೆಂಪು ವಿಶ್ವವಿದ್ಯಾಲಯಕ್ಕೆ, ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ)ದ ಅನುಮತಿ ದೊರಕಿದ್ದು, ಈ ಭಾಗದ ಉನ್ನತ ಶಿಕ್ಷಣಾರ್ಥಿಗಳಿಗೆ ವರವಾಗಿ ಪರಿಣಮಿಸಲಿದೆ.
ಈ ಬಗ್ಗೆ ಆದೇಶ ಹೊರಡಿಸಿರುವ ಯುಜಿಸಿ, ದೇಶಾದ್ಯಂತ 38 ವಿ.ವಿಗಳಿಗೆ ಆನ್‌ಲೈನ್ ಮಾದರಿಯಲ್ಲಿ ಕೋರ್ಸುಗಳನ್ನು ಪ್ರಾರಂಭಿಸಲು ಅವಕಾಶ ನೀಡಿದೆ. ದೇಶದ 38 ವಿಶ್ವವಿದ್ಯಾಲಯಗಳು ಇನ್ನು ಮುಂದೆ ಆನ್‌ಲೈನ್ ಮೂಲಕ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್‌ಗಳನ್ನು ಪ್ರಾರಂಭಿಸಬಹುದು. ಇದರಲ್ಲಿ ಕುವೆಂಪು ವಿ.ವಿ ಕೂಡ ಸೇರಿದ್ದು ವಿಶ್ವವಿದ್ಯಾಲಯದಲ್ಲಿ ಹಷ ಮೂಡಿಸಿದೆ.
ಕರ್ನಾಟಕದಲ್ಲಿ ಕುವೆಂಪು ವಿ.ವಿ ಜೊತೆಗೆ ಜೈನ್, ಯೆನೋಪಾಯ ಮತ್ತು ಮೈಸೂರು ವಿ.ವಿಗಳಿಗೆ ಕೂಡ ಅನುಮತಿ ಸಿಕ್ಕಿದೆ. ಮೈಸೂರು ವಿಶ್ವವಿದ್ಯಾಲಯಕ್ಕೆ ವಾಣಿಜ್ಯ ಕೋರ್ಸುಗಳನ್ನು ಮಾತ್ರ ನಡೆಸಲು ಅನುಮತಿ ದೊರಕಿದ್ದು, ಯೆನೋಪಾಯ ವಿ.ವಿ.ಯು ಬಿ.ಕಾಂ ಪದವಿ ಮಾತ್ರ ಪ್ರಾರಂಭಿಸಬಹುದು. ಆದರೆ ಕುವೆಂಪು ವಿ.ವಿ ಯು ಬಿಬಿಎಂ, ಬಿ.ಕಾಂ ಮತ್ತು ಬಿ.ಎ ಸ್ನಾತಕ ಕೋರ್ಸ್‌ಗಳ ಜೊತೆಗೆ ಎಂಬಿಎ, ಎಂಕಾಂ, ಮತ್ತು ಸಮಾಜಶಾಸ್ತ್ರ, ರಾಜಕೀಯ ಶಾಸ್ತ್ರ, ಇತಿಹಾಸ, ಅರ್ಥಶಾಸ್ತ್ರ, ಇಂಗ್ಲಿಷ್ ಮತ್ತು ಕನ್ನಡ ವಿಷಯಗಳಲ್ಲಿ ಎಂಎ ಸ್ನಾತಕೋತ್ತರ ಪದವಿ ಕೋರ್ಸ್‌ಗಳನ್ನು ಪ್ರಾರಂಭಿಸಲು ಅನುಮತಿ ಪಡೆದಿದೆ. 2020-21ನೇ ಸಾಲಿನಿಂದ ಈ ಎಲ್ಲ ಕೋರ್ಸುಗಳನ್ನು ಪ್ರಾರಂಭಿಸಲು ಪ್ರತ್ಯೇಕ ಅನುಮತಿ ಪಡೆಯಬೇಕಿಲ್ಲ ಎಂದು ಯುಜಿಸಿ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಕುವೆಂಪು ವಿವಿ ನ್ಯಾಕ್‌ನಿಂದ ‘ಎ’ ಶ್ರೇಣಿ ಪಡೆದಿದ್ದು, ಕೇಂದ್ರ ಸರ್ಕಾರದ ಎನ್‌ಐಆರ್‌ಎಫ್‌ನಲ್ಲಿ 73ನೇ ರ್‍ಯಾಂಕ್ ಪಡೆದಿದೆ. ಇನ್ನು ಇತ್ತೀಚಿಗೆ ತಾನೆ ಬಿಡುಗಡೆಯಾದ ಸೈಮಾಗೋ ರ್‍ಯಾಂಕಿಂಗ್‌ನಲ್ಲಿ 56ನೇ ಸ್ಥಾನ ಪಡೆದು ದೇಶದ ಮಂಚೂಣಿಯ ಉನ್ನತ ಶಿಕ್ಷಣ ಸಂಸ್ಥೆಯಾಗಿ ಗುರುತಿಸಿಕೊಳ್ಳುತ್ತಲಿದೆ. ಈಗಾಗಲೇ ವಿಶ್ವವಿದ್ಯಾಲಯವು ಆನ್‌ಲೈನ್ ಕೋರ್ಸ್‌ಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತರು ವಿಶ್ವವಿದ್ಯಾಲಯದ ವೆಬ್‌ಸೈಟ್‌ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು.
ಕೋವಿಡ್-19 ಮಹಾಮಾರಿ ಉನ್ನತ ಶಿಕ್ಷಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿರುವುದು ಎಷ್ಟು ನಿಜವೋ, ಹೊಸ ಸಾಧ್ಯತೆಗಳ ಕಡೆಗೆ ಚಿಂತಿಸುವಂತೆ ಮಾಡಿರುವುದು ಅಷ್ಟೇ ನಿಜ. ಒಟ್ಟಾರೆ ಶಿಕ್ಷಣ ವ್ಯವಸ್ಥೆಯೇ ಅಂತರ್ಜಾಲ ತಂತ್ರಜ್ಞಾನದ ಕಡೆಗೆ ವಾಲಿರುವುದು ಸದ್ಯದ ಮಟ್ಟಿಗೆ ಒಪ್ಪಿಕೊಳ್ಳಲೇಬೇಕು. ಈ ಹಿನ್ನೆಲೆಯಲ್ಲಿ ಮಲೆನಾಡಿನ ಶಿಕ್ಷಣಾರ್ಥಿಗಳ ಮನೆಬಾಗಿಲಿಗೆ ಉನ್ನತ ಶಿಕ್ಷಣವನ್ನು ಕೊಂಡೊಯ್ಯುವ ನಿಟ್ಟಿನಲ್ಲಿ ಆನ್‌ಲೈನ್ ಕೋರ್ಸ್‌ಗಳನ್ನು ಪ್ರಾರಂಭಿಸಲು ಅವಕಾಶ ದೊರಕಿರುವ ದೇಶದ ಕೆಲವೇ ವಿ.ವಿಗಳಲ್ಲಿ ಕುವೆಂಪು ವಿಶ್ವವಿದ್ಯಾಲಯ ಕೂಡ ಒಂದು ಎಂಬುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ.
-ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ.
ಕರ್ನಾಟಕ ಸರ್ಕಾರ ರಾಜ್ಯಾದ್ಯಂತ ದೂರಶಿಕ್ಷಣ ಕೋರ್ಸ್‌ಗಳನ್ನು ನಡೆಸಲು ಕೇವಲ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ ಮಾತ್ರ ಅನುಮತಿ ನೀಡಿ ಉಳಿದ ವಿ.ವಿಗಳು ಕೋರ್ಸ್‌ಗಳನ್ನು ನಿಲ್ಲಿಸುವಂತೆ ತಿದ್ದುಪಡಿ ತಂದ ಬಳಿಕ ಹಿನ್ನಡೆ ಅನುಭವಿಸಿದ್ದ ಕುವೆಂಪು ವಿ.ವಿ, ಈಗ ಆನ್‌ಲೈನ್ ಕೋರ್ಸ್‌ಗಳನ್ನು ನಡೆಸಲು ಯುಜಿಸಿ ಅನುಮತಿ ಪಡೆದಿರುವುದು ಹರ್ಷದಾಯಕ.
ಕುಲಸಚಿವ ಪ್ರೊ. ಎಸ್. ಎಸ್. ಪಾಟೀಲ್.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post